ಜನ ಹೋರಾಟ ತೀವ್ರ: ಪ್ರತಿಭಟನೆ, ಮೆರವಣಿಗೆ

7

ಜನ ಹೋರಾಟ ತೀವ್ರ: ಪ್ರತಿಭಟನೆ, ಮೆರವಣಿಗೆ

Published:
Updated:

ಚಿಕ್ಕಬಳ್ಳಾಪುರ: ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ, ಹಾಲಿನ ದರ ಏರಿಕೆ ಸೇರಿದಂತೆ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಗುರುವಾರ ನಗರದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.ಎತ್ತಿನ ಬಂಡಿ, ಜಾನುವಾರು ಸಹಿತ ಪ್ರತಿಭಟನೆ ನಡೆಸಿ, ಬೇಡಿಕೆ ಈಡೇರಿಕೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಗಾಗಿ ಹಲವಾರು ವರ್ಷಗಳಿಂದ ಬೇಡಿಕೆಯಿಡುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬೇಡಿಕೆ ಈಡೇರಿಸಲು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದರು.ಬರಪೀಡಿತ ಜಿಲ್ಲೆಗಳ ಜನತೆ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಇಲ್ಲಸಲ್ಲದ ನೆಪಗಳನ್ನು ನೀಡುತ್ತಿದೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿದರೆ, ಬೇರೆ ಯಾವುದೋ ತಾತ್ಕಾಲಿಕ ಯೋಜನೆ ಮೂಲಕ ನೀರು ಹರಿಸುವುದಾಗಿ ಹೇಳುತ್ತದೆ ಎಂದು ಆರೋಪಿಸಿದರು.ಜಿಲ್ಲೆಯ ಜನ ಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಇಚ್ಛಾಶಕ್ತಿಯಿದ್ದಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ದೊಡ್ಡ ಸಂಗತಿಯೇ ಅಲ್ಲ. ಜನರ ಮತ್ತು ಕೃಷಿ ಹಿತದೃಷ್ಟಿಯಿಂದ ಜಿಲ್ಲೆಗೆ ನೀರಾವರಿ ಯೋಜನೆ ಅನಿವಾರ್ಯ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗಾಂಧೀಜಿ ವೇಷಧಾರಿ ಗಮನ ಸೆಳೆದರು. ಮೆರವಣಿಗೆ ಆರಂಭದಿಂದ ಕೊನೆಯವರೆಗೂ ಉರಿವ ಬಿಸಿಲನ್ನು ಲೆಕ್ಕಿಸದೆ ನಡೆದರು. ಹನುಮಂತ ಮತ್ತು ಕೃಷ್ಣನ ವೇಷಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry