ಜಪಾನಿ ಕಂಠದಲ್ಲಿ ಹೊಸ ಬೆಳಕು....

7

ಜಪಾನಿ ಕಂಠದಲ್ಲಿ ಹೊಸ ಬೆಳಕು....

Published:
Updated:

ಅಲ್ಲಿ ವಯಸ್ಸಿನ ಭೇದ ಇರಲಿಲ್ಲ. ದೊಡ್ಡವರು, ಚಿಕ್ಕವರು ಎನ್ನದೇ ಎಲ್ಲರಲ್ಲೂ ಕಿಮೊನೊ (ನಿಲುವಂಗಿಯಂತ ಜಪಾನ್‌ನ ಸಾಂಪ್ರದಾಯಿಕ ದಿರಿಸು) ತೊಡುವ ಸಂಭ್ರಮ. ಎಣೆಯಿಲ್ಲದ ಕುತೂಹಲ. ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ‘ಜಪಾನ್ ಹಬ್ಬ’ದಲ್ಲಿ ಸಹೃದಯರೆಲ್ಲ ಸೇರಿದ್ದರು. ಸೂರ್ಯ ಉದಯಿಸುವ ದೇಶ ಎಂದೇ ಖ್ಯಾತಿ ಗಳಿಸಿರುವ ಜಪಾನ್ ಸಂಸ್ಕೃತಿಯನ್ನು ಅರಿಯುವ ತವಕ ಅಲ್ಲಿ ಎದ್ದು ಕಾಣುತ್ತಿತ್ತು.ಹಬ್ಬದ ಅಂಗವಾಗಿ ಸಂಜೆ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ನಲ್ಲಿ ಖ್ಯಾತ ಶಾಕುಹಚಿ (ಜಪಾನ್‌ನ ಸಾಂಪ್ರದಾಯಿಕ ಕೊಳಲು ವಾದನ) ವಾದಕ ಜುಮೆ ತೊಕಮರು ಮತ್ತು ತಂಡದವರು ಕಾರ್ಯಕ್ರಮ ನೀಡಿದರು. ನಂತರ ಶಾಕುಹಚಿ ಮತ್ತು ಸಿತಾರ್ ಜುಗಲ್‌ಬಂದಿ. ಸಿತಾರ್ ವಾದಕ ಪಂಡಿತ್ ಜಯಂತ್ ಕುಮಾರ್‌ಗೆ ಅಶ್ಮಿ ದತ್ (ತಬಲಾ) ಸಾಥ್ ನೀಡಿದರು.ಮರುದಿನ ಹಬ್ಬ ಮತ್ತಷ್ಟು ಕಳೆ ಕಟ್ಟಿತ್ತು. ಸೆಂಟ್ರಲ್ ಕಾಲೇಜು ಆವರಣ ಜಾತ್ರೆ ಮೈದಾನದಂತೆ ಭಾಸವಾಗುತ್ತಿತ್ತು. ಅತಿಥಿಗಳಿಗೆ ಜಪಾನ್ ಚಹಾ ನೀಡುವ ಸಂಪ್ರದಾಯದಿಂದ ಹಬ್ಬಕ್ಕೆ ಚಾಲನೆ ದೊರೆಯಿತು. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ  ‘ಇಂಡೋ ಜಪಾನ್ ರಸಪ್ರಶ್ನೆ ಕಾರ್ಯಕ್ರಮ’ದಲ್ಲಿ ಪ್ರೇಕ್ಷಕರು ಪೈಪೋಟಿಯಲ್ಲಿ ಭಾಗವಹಿಸಿದ್ದರು. ಕರೋಕೆ ಸ್ಪರ್ಧೆಯಲ್ಲಿ (ಜಪಾನಿಗರಲ್ಲದವರಿಂದ ಜಪಾನಿ ಗೀತ ಗಾಯನ, ಜಪಾನಿಗರಿಂದ ಭಾರತೀಯ ಗೀತ ಗಾಯನ ಸ್ಪರ್ಧೆ) ಈ ಉತ್ಸಾಹ ಮೇರೆ ಮೀರಿತ್ತು.ಕಾರ್ಯಕ್ರಮದ ಹೈಲೈಟ್ ಜಪಾನಿಯರು ಹಾಡಿದ ಕನ್ನಡ ಗೀತೆ. ಕನ್ನಡಿಗರ ಮೆಚ್ಚಿನ ಚಿತ್ರಗೀತೆಗಳಾದ ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು’, ‘ಹೊಸ ಬೆಳಕು ಮೂಡುತಿದೆ...’ ಜಪಾನ್ ಯುವಕ, ಯುವತಿಯರ ಕಂಠದಲ್ಲಿ ಮಾರ್ದನಿಸಿತು. ಭಾರತದ ಸಾಂಪ್ರದಾಯಿಕ ಮತ್ತು ಬಾಲಿವುಡ್‌ನ ನೃತ್ಯ ಕಾರ್ಯಕ್ರಮಗಳಲ್ಲಿ ಜಪಾನಿ ಮಹಿಳೆಯರು ಲೀಲಾಜಾಲವಾಗಿ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದರು. ಹಲವು ತಂಡಗಳು ಜಪಾನಿ ಗಾಯನ, ನಾಟಕ ಮತ್ತು ನೃತ್ಯ ಪ್ರಸ್ತುತ ಪಡಿಸಿದವು.ಜಪಾನಿಯರ ಸಾಂಪ್ರದಾಯಿಕ ಉಡುಗೆಯಾದ ಕಿಮೊನೊ ಧರಿಸಲು ಬೆಂಗಳೂರಿನ ಯುವತಿಯರು, ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿದ್ದರು. ಕಲರವದಿಂದ ಕೂಡಿದ್ದ ಈ ಸ್ಥಳ, ರಂಗು ರಂಗಿನ ಕಿಮೊನೊ ಧರಿಸಿದ್ದ ಬೆಡಗಿಯರಿಂದ ಕಂಗೊಳಿಸುತ್ತಿತ್ತು. ಜಪಾನಿ ಕಲೆಯಾದ ಒರಿಗಾಮಿ, ಕಿರಿ-ಎ ಮತ್ತು ಕಿರಿಗಾಮಿ, ಕ್ಯಾಲಿಗ್ರಫಿ, ಬೊನ್ಸಾಯ್, ಇಕೆಬಾನಾ ಮುಂತಾದ ಸ್ಟಾಲ್‌ಗಳ ಬಳಿಯೂ ಜನಜಂಗುಳಿಯಿತ್ತು.ಜಪಾನ್ ಹಬ್ಬ 2011ರ ಸಂಘಟನಾ ಸಮಿತಿಯ ಅಧ್ಯಕ್ಷ ಸಂತೋಷಿ ಹಾತಾ ಮಾತನಾಡಿ, ‘ಬೆಂಗಳೂರಿಗರು ಜಪಾನ್ ಹಬ್ಬವನ್ನು ತಮ್ಮ ಹಬ್ಬವೆಂದು ಸಂತೋಷದಿಂದ ಸ್ವೀಕರಿಸಿದ್ದರ ಫಲಶೃತಿಯೇ ಆರನೇ ವರ್ಷ ಈ ಹಬ್ಬ ಆಯೋಜಿಸಲು ಪ್ರೇರಣೆಯಾಗಿದೆ. ಕರ್ನಾಟಕದಲ್ಲಿ ನೆಲೆಸಿರುವ ಜಪಾನಿಗರು ಮತ್ತು ಕನ್ನಡಿಗರಿಗೆ ಎರಡು ರಾಷ್ಟ್ರಗಳ ನಡುವಿನ ಸಂಸ್ಕೃತಿ ಅರಿತುಕೊಳ್ಳಲು ಈ ಹಬ್ಬ ಸೂಕ್ತ ವೇದಿಕೆ ಕಲ್ಪಿಸಿದೆ’ ಎಂದರು.ಬೆಂಗಳೂರಿನಲ್ಲಿರುವ ಜಪಾನಿ ಕಾನ್ಸಲ್ ಕಚೇರಿ, ನವದೆಹಲಿಯ ಜಪಾನ್ ಫೌಂಡೇಶನ್, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರಿನ ನಿಹೊಂಗೊ ಕ್ಯೊಶಿ-ಕೈ (ಜಪಾನೀಸ್ ಭಾಷಾ ಶಿಕ್ಷಕರ ಸಂಘಟನೆ ಬೆಂಗಳೂರು), ಬೆಂಗಳೂರಿನ ಜಪಾನೀಸ್ ಸಂಸ್ಥೆ ಹಾಗೂ ಕೊಯೊ ಜಪಾನೀಸ್ ಮಾತನಾಡುವ ಬಳಗದ ಆಶ್ರಯದಲ್ಲಿ ಈ ಹಬ್ಬ ಆಯೋಜಿಸಲಾಗಿತ್ತು. ಇಂಡೋ -ಜಪಾನಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮಂಡಳಿ (ಕರ್ನಾಟಕ) ಹಬ್ಬಕ್ಕೆ ನೆರವು ನೀಡಿತ್ತು.                             

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry