ಮಂಗಳವಾರ, ಜೂನ್ 15, 2021
24 °C

ಜಪಾನ್: ಪರಮಾಣು ದುರಂತ ತಡೆಯಬಹುದಿತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಶಾನ್ಯ ಜಪಾನ್‌ನಲ್ಲಿ ಭಾರೀ ಭೂಕಂಪ ಮತ್ತು ಸುನಾಮಿಯ ಆರ್ಭಟ, ಅದರಿಂದಾಗಿ ಪರಮಾಣು ವಿದ್ಯುತ್ ಸ್ಥಾವರವೊಂದರಲ್ಲಿ ಸರಿಪಡಿಸಲಾಗದಂಥ ಭೀಕರ ಅನಾಹುತ ಸಂಭವಿಸಿ ಒಂದು ವರ್ಷ ಕಳೆದಿದೆ. ಆದರೆ ಈಗಲೂ ಇದು `ಅನಿರೀಕ್ಷಿತ ನೈಸರ್ಗಿಕ ಪ್ರಕೋಪದ ಪರಿಣಾಮವೇ ಅಥವಾ ಅದನ್ನು ತಡೆಯಬಹುದಿತ್ತೇ~ ಎಂಬುದು ಪ್ರಶ್ನೆಯಾಗೇ ಉಳಿದಿದೆ.`ಫುಕುಶಿಮಾ ಡೈಚಿ ಪರಮಾಣು ವಿದ್ಯುತ್ ಘಟಕವನ್ನು ತಂಪಾಗಿಡುವ ವ್ಯವಸ್ಥೆ ನಿರ್ನಾಮವಾಗಿದ್ದು ರಿಕ್ಟರ್ ಮಾಪಕದಲ್ಲಿ 9 ತೀವ್ರತೆಯ ಭೂಕಂಪನ ಮತ್ತು 45 ಅಡಿಗಳಷ್ಟು ಎತ್ತರದ ರಾಕ್ಷಸ ಸುನಾಮಿ ಅಲೆಗಳ ಹೊಡೆತದಿಂದ (ಇದರಿಂದ ಅಲ್ಲಿ ವಿಕಿರಣ ಸೋರಿಕೆಯಾಗಿ ಸುತ್ತಲಿನ 90 ಸಾವಿರ ಜನರನ್ನು ಸ್ಥಳಾಂತರಿಸಲಾಗಿತ್ತು).

 

ಆದರೆ ಭೂಕಂಪನ, ಸುನಾಮಿ ಅಲೆಗಳು ಅಲ್ಲಿ ಈ ಪ್ರಮಾಣದಲ್ಲಿ ಅಪ್ಪಳಿಸಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸಿರಲಿಲ್ಲ~ ಎಂದೇ ಜಪಾನ್‌ನ ಪರಮಾಣು ಇಂಧನ ನಿಯಂತ್ರಣ ವಿಭಾಗ ಮತ್ತು ಸ್ಥಾವರದ ಮೇಲ್ವಿಚಾರಣೆ ಹೊಣೆ ಹೊತ್ತ ಟೋಕಿಯೊ ಎಲೆಕ್ಟ್ರಿಕ್ ಪವರ್ (ಟೆಪ್ಕೊ) ಅಧಿಕಾರಿಗಳು ವಾದಿಸುತ್ತಿದ್ದಾರೆ.ಅವರು ಏನೇ ಹೇಳಿದರೂ, ಜಪಾನ್‌ನ ಪರಮಾಣು ಉದ್ಯಮದಲ್ಲಿ ಇದ್ದ ಕೆಲವರು ಬಹಿರಂಗಪಡಿಸುತ್ತಿರುವ ಸಂಗತಿಯೇ ಬೇರೆ. `ಅದು ಭಾರೀ ಭೂಕಂಪ ಮತ್ತು ಸುನಾಮಿ ಪ್ರದೇಶ ಎಂದು ತಜ್ಞರು ಪದೇಪದೇ ಎಚ್ಚರಿಕೆ ನೀಡುತ್ತ ಬಂದರೂ ಟೆಪ್ಕೊ ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಗಣನೆಗೇ ತೆಗೆದುಕೊಳ್ಳಲೇ ಇಲ್ಲ.ಸಮುದ್ರದ ಅಲೆಗಳ ತಡೆಗೋಡೆ ಎತ್ತರಿಸುವುದು, ಪೂರಕ ಜನರೇಟರ್‌ಗಳನ್ನು ಎತ್ತರ ಸ್ಥಳದಲ್ಲಿ ಅಳವಡಿಸುವಂಥ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ಪರಮಾಣು ವಿದ್ಯುತ್ ಘಟಕಗಳ ಮೇಲೆ ನಿಗಾ ಇಡಬೇಕಾಗಿದ್ದ ಬಲಿಷ್ಠ ಅಧಿಕಾರಶಾಹಿ ಮತ್ತು ಪರಮಾಣು ವಿಷಯ ಪರಿಣಿತರು ತದ್ವಿರುದ್ಧ ನಿಲುವುಗಳನ್ನು ತಳೆದಿದ್ದರು.ಉದ್ಯಮಕ್ಕೆ ಜನರ ಸುರಕ್ಷತೆಗಿಂತ ಲಾಭಕ್ಕೆ ನೆರವಾಗುವ ವಿದ್ಯುತ್ ಉತ್ಪಾದನೆಯೇ ಮುಖ್ಯವಾಗಿತ್ತು. ಅಧಿಕಾರಶಾಹಿ ಕೂಡ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು ಎನ್ನುವುದು ತಜ್ಞರ ಆರೋಪ.ಈಗಲಾದರೂ ಫುಕುಶಿಮಾ ದುರಂತವನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಬೇಕು, ದ್ವಿತೀಯ ಮಹಾಯುದ್ಧದ ನಂತರ ಅಭಿವೃದ್ಧಿಯ ಆತುರದಲ್ಲಿ ಸರ್ಕಾರ ಮತ್ತು ಉದ್ಯಮದ ನಡುವೆ ಬೆಳೆದ ಅಪಾಯಕಾರಿ ನಂಟನ್ನು ಕತ್ತರಿಸಬೇಕು ಎಂಬುದು ಇವರ ಕಿವಿಮಾತು.`2011 ಮಾರ್ಚ್ 11ರ ದುರಂತ ಜನಸಾಮಾನ್ಯರ ಹಿತಕ್ಕೆ ಬದಲಾಗಿ ಉದ್ಯಮದ ಬೆಂಗಾವಲಿಗೆ ನಿಂತ ಅಧಿಕಾರಶಾಹಿಯ ಕರಾಳ ಮುಖವನ್ನು ಬಯಲು ಮಾಡಿದೆ~ ಎಂದು ಕಟುವಾಗಿ ಹೇಳುತ್ತಾರೆ ಜಪಾನ್ ಸರ್ಕಾರದ ವಾಣಿಜ್ಯ, ಉದ್ಯಮ ಮತ್ತು ವ್ಯಾಪಾರ ಇಲಾಖೆಯ (ಎಂಇಟಿಐ) ಕೈಗಾರಿಕಾ ನೀತಿ ನಿರೂಪಣೆ ವಿಭಾಗದ ನಿವೃತ್ತ ನಿರ್ದೇಶಕ ಶಿಗೆಅಕಿ ಕೊಗಾ.ಈಶಾನ್ಯ ಜಪಾನ್‌ನ ಸಾಗರ ಭೂಕಂಪನ ಅಧ್ಯಯನ ಕುರಿತ ಸಂಪುಟ ಉಪ ಸಮಿತಿ ಸದಸ್ಯರಾಗಿದ್ದ ಟೋಕಿಯೊ ವಿವಿ ಭೂಕಂಪನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಕುನಿಹಿಕೊ ಶಿಮಾಜಕಿ ಅವರು 8 ವರ್ಷಗಳ ಹಿಂದೆಯೇ ಅಂದರೆ 2004ರ ಫೆ 19ರಂದು ನಡೆದ ಸಭೆಯಲ್ಲಿ ಇಂಥ ಅನಾಹುತಗಳ ಮುನ್ನೆಚ್ಚರಿಕೆ ಕೊಟ್ಟಿದ್ದರು.`ಫುಕುಶಿಮಾದ ಕರಾವಳಿಯಲ್ಲಿ ಹೆಚ್ಚೆಂದರೆ 17 ಅಡಿ ಎತ್ತರದ ಸುನಾಮಿ ಅಲೆ ಏಳಬಹುದು ಎಂಬ ಟೆಪ್ಕೊ ತಜ್ಞರ ಅಂದಾಜು ಸರಿಯಲ್ಲ, ಇದರ ಎರಡು ಪಟ್ಟು ಎತ್ತರದ ಅಲೆಗಳು ಅಲ್ಲಿ ಬರುವ ಸಾಧ್ಯತೆಯಿದೆ~ ಎಂಬ ಅವರ ಮಾತಿಗೆ ಆಗ ಬೆಲೆಯೇ ಸಿಗಲಿಲ್ಲ.

ಅಷ್ಟೇ ಅಲ್ಲ ಅಂದಿನ ಸಭೆಯ ನಡಾವಳಿಗಳಲ್ಲಿ ಶಿಮಾಜಕಿ ಅವರ ಅಭಿಪ್ರಾಯವನ್ನು ಅಧಿಕಾರಿಗಳು `ನಿಮ್ಮದು ಅತಿಯಾದ ಕಲ್ಪನೆ~ ಎಂದು ಹೇಳಿ ದಾಖಲಿಸಲೇ ಇಲ್ಲ.ಸಭೆಯಲ್ಲಿದ್ದ ಇತರ 13 ತಜ್ಞರಲ್ಲಿ ಒಬ್ಬರೂ ಅಧಿಕಾರಿಗಳ ವರ್ತನೆಯನ್ನು ಆಕ್ಷೇಪಿಸಲಿಲ್ಲ. ಎರಡು ವರ್ಷಗಳ ನಂತರ ಸಮಿತಿ ನೀಡಿದ ಅಂತಿಮ ವರದಿಯಲ್ಲೂ ಇದರ ಬಗ್ಗೆ ಒಂದಕ್ಷರವೂ ಇರಲಿಲ್ಲ. `ಪರಮಾಣು ಸ್ಥಾವರದ ಸುಧಾರಣೆಗೆ ಹಣ ಹೂಡಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂಬ ನನ್ನ ಸಲಹೆ ಪರಿಗಣಿಸಲು ಸಮಿತಿಯಲ್ಲಿದ್ದ ಪರಮಾಣು ಶಿಕ್ಷಣ ತಜ್ಞರು ಕೂಡ ಒತ್ತಡ ಹೇರಲಿಲ್ಲ.ಟೆಪ್ಕೊದ ಹಣ ಉಳಿಸುವುದೇ ಅವರಿಗೆ ಮುಖ್ಯವಾಗಿತ್ತು~ ಎಂದು ಶಿಮಾಜಕಿ ಈಗಲೂ ನೆನಪಿಸಿಕೊಳ್ಳುತ್ತಾರೆ.ಈ ಉಪೇಕ್ಷೆಗೆ ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ಅಧಿಕಾರಶಾಹಿಯ ಒಳಗಿರುವವರ ದುರಾಸೆ, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹಣ ಬಾಚಿಕೊಳ್ಳುವ ಪ್ರವೃತ್ತಿ ಕಾರಣ ಎಂಬುದು ಶಿಮಾಜಕಿ ಮತ್ತು ಅವರಂಥ ಸಮಾನಮನಸ್ಕರ ಆರೋಪ.`ಮಹತ್ವಾಕಾಂಕ್ಷಿ ಅಧಿಕಾರಿಗಳು ಪರಮಾಣು ಶಿಕ್ಷಣ ತಜ್ಞರ ನೀತಿ ನಿರೂಪಣಾ ಸಮಿತಿಯನ್ನು ತಮ್ಮ ಅಡಿಯಾಳು ಮಾಡಿಕೊಂಡು ನಿಯಂತ್ರಣದ ಅಧಿಕಾರವನ್ನು ಪರಮಾಣು ಇಂಧನ ಕಂಪೆನಿಗೆ ಬಿಟ್ಟುಕೊಡುವ ಪರಿಪಾಠ ಇಲ್ಲಿ ಬಹುಕಾಲದಿಂದ ಇದೆ~ ಎಂದು ಅವರು ದೂರುತ್ತಾರೆ.ಎಚ್ಚೆತ್ತ ಸರ್ಕಾರಫುಕುಶಿಮಾ ದುರಂತದ ನಂತರ ಸರ್ಕಾರಕ್ಕೆ ಜ್ಞಾನೋದಯವಾಗಿದೆ, ಹೀಗಾಗಿ ಅದು ಪರಮಾಣು ಸ್ಥಾವರಗಳ ಮೇಲ್ವಿಚಾರಣಾ ಸಮಿತಿಯನ್ನು ವಾಣಿಜ್ಯ ಸಚಿವ ಖಾತೆಯ ನಿಯಂತ್ರಣದಿಂದ ತಪ್ಪಿಸಲು ಮುಂದಾಗುವ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದೆ. ಅದಕ್ಕಾಗಿಯೇ `ನಿಸಾ~ ಎಂದು ಕರೆಯಲಾಗುವ ಪರಮಾಣು ಮತ್ತು ಕೈಗಾರಿಕಾ ಸುರಕ್ಷತಾ ಏಜೆನ್ಸಿಯನ್ನು ಜನರ ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಪರಿಸರ ಖಾತೆಯ ಅಡಿಗೆ ತರುವ ಸಂಬಂಧದ ಮಸೂದೆಯನ್ನು ಪ್ರಧಾನಿ ಯೊಶಿಹಿಕೊ ನೊಡಾ ಸರ್ಕಾರ ಪಾರ್ಲಿಮೆಂಟ್‌ನಲ್ಲಿ ಮಂಡಿಸಿದೆ.ಆದರೆ ಅನಾಹುತಕ್ಕೆಲ್ಲ ಯಾವುದೋ ಒಂದು ಇಲಾಖೆಯನ್ನಷ್ಟೇ ಗುರಿ ಮಾಡುವುದರಿಂದ ಸಮಸ್ಯೆ ಪರಿಹಾರವಾಗದು. ಸರ್ಕಾರ ಮತ್ತು ಉದ್ಯಮದ ನಡುವಿನ ಅಪವಿತ್ರ ಹೊಂದಾಣಿಕೆಗೆ ಅಂತ್ಯ ಹಾಡುವುದಕ್ಕೆ ಇದು ಸಾಲದು ಎಂಬ ಅಭಿಪ್ರಾಯ ಅನೇಕರಲ್ಲಿದೆ. `ನಮ್ಮ ದೇಶದ ಪರಮಾಣು ನಿಯಂತ್ರಣ ವ್ಯವಸ್ಥೆಯ ಅಧಿಕಾರಿಗಳು ವಾಸ್ತವದಲ್ಲಿ ಈ ವಿಷಯದ ತಜ್ಞರೇ ಅಲ್ಲ.ತಮ್ಮ ನಿಯಂತ್ರಣದಲ್ಲಿ ಬರುವ ಪರಮಾಣು ಸ್ಥಾವರಗಳ ಅಧಿಕಾರಿಗಳ ಸಲಹೆಯನ್ನೇ ನಂಬಿಕೊಂಡಿದ್ದಾರೆ. ಇದು ಕುರಿ ಕಾಯಲು ತೋಳವನ್ನು ಬಿಟ್ಟಂತೆ ಎಂದು ಕೊಗಾ ಮತ್ತಿತರರು ಮೂದಲಿಸುತ್ತಾರೆ.`ನಿಸಾ~ ಪರವಾಗಿ ಸುರಕ್ಷತಾ ತಪಾಸಣೆ ನಡೆಸುವ ಸರ್ಕಾರಿ ಹತೋಟಿಯ ಜಪಾನ್ ಪರಮಾಣು ಸುರಕ್ಷತಾ ಸಂಸ್ಥೆಯ (ನ್ಯೂಕ್ಲಿಯರ್ ಸೇಫ್ಟಿ ಆರ್ಗನೈಸೇಷನ್) ಬಹುತೇಕ ತಪಾಸಣಾ ಅಧಿಕಾರಿಗಳು ಇಲ್ಲಿಗೆ ಬರುವುದಕ್ಕಿಂತಲೂ ಮೊದಲು ಪರಮಾಣು ಇಂಧನ ಕಂಪೆನಿಗಳು, ಸಾಮಗ್ರಿ ತಯಾರಿಕಾ ಕಂಪೆನಿಗಳಲ್ಲಿ ಕೆಲಸ ಮಾಡಿದವರು.ಹೀಗಾಗಿ ಇವರಿಗೆ ಈಗಿನ ಕೆಲಸಕ್ಕಿಂತ ತಮ್ಮ ಹಳೆಯ ಕಂಪೆನಿಗಳ ಹಿತ ಕಾಪಾಡುವುದೇ ಮುಖ್ಯ. ಅದಕ್ಕಾಗೇ ಹಳೆಯ ಮಾಲೀಕರನ್ನು ಮೆಚ್ಚಿಸಲು ಸುರಕ್ಷತಾ ಲೋಪಗಳಿದ್ದರೂ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ ಎಂದು ನೇರವಾಗಿಯೇ ದೂರುತ್ತಾರೆ ಸಂಸ್ಥೆಯ ನಿವೃತ್ತ ತಪಾಸಣಾಧಿಕಾರಿ ಸೆಟ್ಸುಒ ಫುಜಿವರಾ.ಈತ ಹಿಂದೆ ಪರಮಾಣು ರಿಯಾಕ್ಟರ್ ವಿನ್ಯಾಸಕಾರ. 2009ರ ಮಾರ್ಚ್‌ನಲ್ಲಿ ಹಕಾಡಿಯೊ ಎಲೆಕ್ಟ್ರಿಕ್ ಪವರ್ ಕಂಪೆನಿಯ ಟೊಮಾರಿ ಪರಮಾಣು ವಿದ್ಯುತ್ ಸ್ಥಾವರದ ತಪಾಸಣೆಗೆ ಹೋಗಿದ್ದರು. ಅಲ್ಲಿ ಸುರಕ್ಷತಾ ಪ್ರಯೋಗವೊಂದನ್ನು ಸರಿಯಾಗಿ ನಡೆಸದ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೊನೆಗೆ ಆ ಪರೀಕ್ಷೆಯ ಸುರಕ್ಷತೆ ದೃಢೀಕರಿಸಲು ನಿರಾಕರಿಸಿ ಬಂದಿದ್ದರು.ಆದರೆ ಒಂದು ವಾರದ ನಂತರ ಅವರ ಮೇಲಧಿಕಾರಿ ಅವರನ್ನು ಕರೆದು `ನಿಮ್ಮದು ಅತಿಯಾಯ್ತು. ತಪಾಸಣಾ ಪ್ರಯೋಗ ಸರಿಯಾಗಿತ್ತು ಅಂತ ಬರೆದುಕೊಡಿ~ ಎಂದು ಧಮಕಿ ಹಾಕಿದರು. ಆದರೂ ಮಣಿಯದ ಕಾರಣ ಫುಜಿವರಾ ನೌಕರಿ ಒಪ್ಪಂದ ನವೀಕರಣಗೊಳ್ಳಲಿಲ್ಲ. ಹೀಗಾಗಿ ಅವರು ಮನೆಗೆ ಹೋಗಬೇಕಾಯಿತು.`ರಿಯಾಕ್ಟರ್ ಚೆನ್ನಾಗಿದೆ ಎಂದು ಒಪ್ಪಿಗೆ ಪತ್ರ ಕೊಡುವುದಷ್ಟೇ ನಿನ್ನ ಕೆಲಸ; ಇಲ್ಲಸಲ್ಲದ ತಕರಾರು ಮಾಡುವುದಲ್ಲ~ ಎಂದು ಮೇಲಧಿಕಾರಿ ಅವರಿಗೆ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ತಮ್ಮ ನೌಕರಿ ಮುಂದುವರಿಸದೇ ಇರುವ ಜಪಾನ್ ಪರಮಾಣು ಸುರಕ್ಷತಾ ಸಂಸ್ಥೆಯನ್ನು ಅವರು ಕೋರ್ಟ್‌ಗೆ ಎಳೆದಿದ್ದಾರೆ.ಆದರೆ ಈ ನಮೂನೆಯ ಆರೋಪ, ಅನುಮಾನಗಳಿಗೆ `ಟೆಪ್ಕೊ~ ಮತ್ತು ಅದರ ಸಮರ್ಥಕರು ಉತ್ತರಿಸುವುದೇ ಬೇರೆ. `ಜಪಾನ್‌ನ ಇತಿಹಾಸದಲ್ಲೇ 9 ತೀವ್ರತೆಯ ಭೂಕಂಪ, 45 ಅಡಿ ಎತ್ತರದ ಸುನಾಮಿ ಅಲೆ ಹಿಂದೆಂದೂ ಕಂಡು ಬಂದಿರಲಿಲ್ಲ.

 

ಹೀಗಾಗಿಯೇ ಫುಕುಶಿಮಾದ 6 ರಿಯಾಕ್ಟರ್ ಪೈಕಿ 3ರಲ್ಲಿ  ರಿಯಾಕ್ಟರ್ ತಂಪಾಗಿಡುವ ವ್ಯವಸ್ಥೆ ಹಾಳಾಯಿತು~ ಎಂಬುದು ಅವರ ಸಮರ್ಥನೆ. ಆದರೆ ಅನೇಕ ತಜ್ಞರು, ಪರಮಾಣು ವಿದ್ಯುತ್ ಸ್ಥಾವರಗಳ ಪರಿಣಿತರು ಈ ವಾದವನ್ನು ಒಪ್ಪುವುದಿಲ್ಲ. ಏಕೆಂದರೆ ರಿಯಾಕ್ಟರ್‌ನ ಎಂಜಿನಿಯರ್‌ಗಳು ಅನೇಕ ಸಲ ಈ ಬಗ್ಗೆ ಮುನ್ಸೂಚನೆ ನೀಡಿದ್ದರು, ಸೂಕ್ತ ಮುಂಜಾಗ್ರತೆ ಕ್ರಮಕ್ಕೆ ಸೂಚಿಸಿದ್ದರಂತೆ. ಆದರೆ ಅದನ್ನು ಕಂಪೆನಿ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.2008ರಲ್ಲಿಯೇ ಟೆಪ್ಕೊ ಎಂಜಿನಿಯರ್‌ಗಳು ಅನಾಹುತಗಳ ಬಗ್ಗೆ ಮೂರು ಸಂಭಾವ್ಯ ಲೆಕ್ಕ ಹಾಕಿದ್ದರು. ಸುಮಾರು 50 ಅಡಿ ಎತ್ತರದ ರಾಕ್ಷಸ ಸುನಾಮಿ ಅಲೆಗಳು ಫುಕುಶಿಮಾ ಸ್ಥಾವರಕ್ಕೆ ಅಪ್ಪಳಿಸಿ ಹಾನಿ ಮಾಡಬಹುದು ಎಂದು ಆಗಲೇ ಎಚ್ಚರಿಸಿದ್ದರು. ಆದರೆ ಇದನ್ನು `ನಿಸಾ~ ನಿಯಂತ್ರಣಾ ಅಧಿಕಾರಿಗಳ ಗಮನಕ್ಕೆ ಆಗ ತರಲಿಲ್ಲ. ಸುನಾಮಿಗಿಂತ ನಾಲ್ಕು ದಿನ ಮೊದಲು ಅಂದರೆ ಕಳೆದ ವರ್ಷದ ಮಾರ್ಚ್ 7ರಂದು ತಿಳಿಸಲಾಯಿತು ಎಂದು ಟೆಪ್ಕೊ ವಕ್ತಾರ ಟಕಿಯೊ ಇವಾಮೊಟೊ ಈಗ ಒಪ್ಪಿಕೊಳ್ಳುತ್ತಿದ್ದಾರೆ.ಹಾಗಿದ್ದರೆ ಆಗಲೇ ನೀವೇಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಗೆ. `ಅಂಥ ಸನ್ನಿವೇಶ ಬರಲಿಕ್ಕಿಲ್ಲ. ಅದು ಬರೀ ಊಹಾಪೋಹದ ಆಧಾರದ ಮೇಲೆ ಮಾಡಿದ ಸಂಭವನೀಯ ಲೆಕ್ಕಾಚಾರ ಎಂದು ನಾವು ಅಂದುಕೊಂಡಿದ್ದವು~ ಎಂಬುದು ಅವರ ಉತ್ತರ. ಇತ್ತ `ನಿಸಾ~ ಅಧಿಕಾರಿಗಳು ಸಹ ಸುನಾಮಿ ಎದುರಿಸಲು ಏನು ಮಾಡಬೇಕು ಎಂಬ ತೀರ್ಮಾನವನ್ನು `ವಾಡಿಕೆಯ ನಿಯಮಾವಳಿ~ ಹೆಸರಲ್ಲಿ ಟೆಪ್ಕೊ ಅಧಿಕಾರಿಗಳಿಗೇ ಬಿಟ್ಟು ಹಾಯಾಗಿದ್ದರು.ಅಧಿಕಾರಿಗಳದೇ ರಾಜ್ಯನಿಯಂತ್ರಣಾ ಅಧಿಕಾರಿಗಳ ಮೇಲೆ ನಿಗಾ ಇಡಬೇಕಾದ ಬಾಹ್ಯ ಪರಿಣಿತರುಳ್ಳ ಸಮಿತಿಗಳಲ್ಲಿಯೂ ಇಂಥದೇ ನಿರ್ಲಕ್ಷ್ಯ ಮನೆ ಮಾಡಿತ್ತು. ಏಕೆಂದರೆ ಅದರ  ಅನೇಕ ಮಾಜಿ ಸದಸ್ಯರು, ಟೀಕಾಕಾರರು ಹೇಳುವಂತೆ `ಸಮಿತಿಯಲ್ಲಿ ಏನು, ಎಷ್ಟು ಚರ್ಚೆಯಾಗಬೇಕು, ಅಂತಿಮ ವರದಿ ಹೇಗಿರಬೇಕು~ ಎಂಬುದನ್ನು ಸರ್ಕಾರದ ಅಧಿಕಾರಿಗಳೇ ತೀರ್ಮಾನಿಸುತ್ತಿದ್ದರು.ತಜ್ಞರ ಸಮಿತಿಗಳೆಲ್ಲ ಹೆಸರಿಗಷ್ಟೇ. ವರದಿ ತಯಾರಿಸಿ ಸಿದ್ಧಪಡಿಸುವವರು ಅಧಿಕಾರಿಗಳು. ಅಲ್ಲಿ ಅವರದೇ ಮಾತು, ಅವರದೇ ಅಧಿಕಾರ ಎಂದು ಹೇಳುವ 67 ವರ್ಷದ ಇಷಿಬಷಿ ಅವರ ಮುಖದಲ್ಲಿ ಕೋಪ ಎದ್ದು ಕಾಣುತ್ತದೆ. ಅವರ ಪ್ರಕಾರ `ಫುಕುಶಿಮಾ ಡೈಚಿ ಪರಮಾಣು ವಿದ್ಯುತ್ ಸ್ಥಾವರದ ದುರಂತವನ್ನು ಖಂಡಿತವಾಗಿಯೂ ತಪ್ಪಿಸಬಹುದಿತ್ತು~. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.