ಗುರುವಾರ , ನವೆಂಬರ್ 21, 2019
21 °C
ಮದ್ಯ ಕಾಂಚಾಣದ ನರ್ತನ

ಜಪ್ತಿಯಾದ ಮದ್ಯ 46,000 ಲೀ

Published:
Updated:

ಬೆಂಗಳೂರು: ರಾಜ್ಯದ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 14.48 ಲಕ್ಷ  ನಗದು ಮತ್ತು ರೂ. 7 ಲಕ್ಷ ಬೆಲೆ ಬಾಳುವ 330 ಬಾಕ್ಸ್ ಮದ್ಯ ವಶಕ್ಕೆ ತೆಗೆದುಕೊಂಡಿರುವುದಾಗಿ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಬುಧವಾರ ಇಲ್ಲಿ ಹೇಳಿದರು.ಜಾಗೃತ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೂ 11.32 ಕೋಟಿ ರೂಪಾಯಿ ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೂರು ಕೋಟಿ ರೂಪಾಯಿ ಬೆಲೆಯ 46 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನೀತಿ ಸಂಹಿತೆ ಜಾರಿಯಾದ ದಿನದಿಂದ ಇದುವರೆಗೂ ಒಟ್ಟು 286 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದು, ತನಿಖೆ ನಡೆದಿದೆ ಎಂದು ಅವರು ಹೇಳಿದರು.ಚುನಾವಣಾ ಕೆಲಸಕ್ಕೆ ಮಕ್ಕಳನ್ನು ಬಳಸುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಖಂಡಿತ ಕ್ರಮಜರುಗಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಅಧಿಕಾರಿಗಳ ವಿರುದ್ಧ ಕ್ರಮ: ಕೆಲವು ಅಧಿಕಾರಿಗಳು ತಮಗೆ ಬೇಕಾದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದಿದ್ದು, ಪರಿಶೀಲನೆ ನಂತರ ಕ್ರಮ ಜರುಗಿಸಲಾಗುವುದು.ಅಧಿಕಾರಿಗಳ ವಿರುದ್ಧ ಬಂದಿರುವ ದೂರುಗಳಲ್ಲಿ ಶೇ 50ರಷ್ಟು ಈ ವಿಷಯಕ್ಕೇ ಸಂಬಂಧಿಸಿದ್ದಾಗಿರುತ್ತವೆ. ತಪ್ಪು ಮಾಡಿರುವುದು ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಚುನಾವಣಾ ಕರ್ತವ್ಯದಿಂದಲೂ ಅಂತಹ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.ವೈದ್ಯಕೀಯ ಸಮಸ್ಯೆ ಕಾರಣಕ್ಕೆ ಕರ್ತವ್ಯ ನಿರ್ವಹಿಸಲು ಕಷ್ಟ ಎನ್ನುವ ಸಿಬ್ಬಂದಿಯನ್ನು ಚುನಾವಣಾ ಕೆಲಸದಿಂದ ಮುಕ್ತಗೊಳಿಸಲಾಗುವುದು. ಈ ವಿಷಯದಲ್ಲಿ ಯಾರಿಗೂ ತೊಂದರೆ ಮಾಡುವುದಿಲ್ಲ. ಬೆಂಗಳೂರಿನಲ್ಲಿ 33 ಸಾವಿರ ಸಿಬ್ಬಂದಿಯ ಅಗತ್ಯ ಇರುವ ಕಾರಣಕ್ಕೆ ಕಡ್ಡಾಯ ಮಾಡಿದ್ದು, ಆರೋಗ್ಯದ ಸಮಸ್ಯೆ ಇರುವವರಿಗೆ ಅದರಿಂದ ವಿನಾಯಿತಿ ನೀಡಲಾಗುವುದು ಎಂದರು.ಹಣದ ವಿವರ

ದಾವಣಗೆರೆ: * 6.15 ಲಕ್ಷ

ಮಧುಗಿರಿ:  *4.63 ಲಕ್ಷ

ಯಲ್ಲಾಪುರ: * 2.62 ಲಕ್ಷ

ಗೋಕಾಕ:  * 1.8 ಲಕ್ಷ

ಕುಷ್ಟಗಿ: * 12.50 ಲಕ್ಷ

ಕಮಲನಗರ: *21 ಲಕ್ಷ

ಬೆಳಗಾವಿ: *10 ಲಕ್ಷ

ಹಿರೇಗುತ್ತಿ: *8.35 ಲಕ್ಷ

ಪ್ರತಿಕ್ರಿಯಿಸಿ (+)