ಬುಧವಾರ, ಮೇ 18, 2022
25 °C

ಜಬ್ಬಲಗುಡ್ಡಕ್ಕೆ ಮೂಲಸೌಕರ್ಯ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಐತಿಹಾಸಿಕ ಮಹತ್ವವುಳ್ಳ ತಾಲ್ಲೂಕಿನ ಜಬ್ಬಲಗುಡ್ಡ ಗ್ರಾಮಕ್ಕೆ ಉತ್ತಮ ಸಂಪರ್ಕ ರಸ್ತೆ ಹಾಗೂ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು ಎಂದು ಶಾಸಕ ಸಂಗಣ್ಣ ಕರಡಿ ಮನವಿ ಮಾಡಿದರು.ಅವರು ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಗಂಡುಗಲಿ ಕುಮಾರರಾಮನ ಕರ್ಮಭೂಮಿಯಾಗಿದ್ದ ಜಬ್ಬಲಗುಡ್ಡ ಈ ಹಿಂದೆ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಆದರೆ, ಕ್ಷೇತ್ರಗಳ ಪುನರ್ವಿಂಗಡಣೆ ನಂತರ ಸದ್ಯ ಆ ಗ್ರಾಮ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಆದರೂ ಸದರಿ ಗ್ರಾಮಕ್ಕೆ ರಸ್ತೆ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಹೇಳಿದರು.ಪ್ರವಾಸೋದ್ಯಮ ಕೇಂದ್ರವಾಗಿ ಸಹ ಸದರಿ ಗ್ರಾಮವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಅಥವಾ ಇನ್ನಾವುದೇ ಇಲಾಖೆ ಕಾರ್ಯಕ್ರಮದಡಿ ಈ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.ಗುರುಗಳಾದ ದ್ರೋಣಾಚಾರ್ಯರ ಬೇಡಿಕೆಯಂತೆ ಹೆಬ್ಬೆರಳು ಕತ್ತರಿಸಿ ಕೊಟ್ಟ ಏಕಲವ್ಯನ ಕಥೆಯನ್ನು ಪ್ರಸ್ತಾಪಿಸಿದ ಅವರು, ಗುರುಭಕ್ತಿಗೆ ನಾಯಕ ಸಮಾಜ ಮಾದರಿ ಎಂದು ಬಣ್ಣಿಸಿದರು. ನಂಬಿದವರು ಕೇಳಿದರೆ ಪ್ರಾಣವನ್ನೇ ನೀಡುವ ಈ ಸಮಾಜ, ತಾವು ರಾಜಕೀಯ ಜೀವನ ಆರಂಭಿಸಿದಾಗಿನಿಂದಲೂ ತಮ್ಮನ್ನೇ ಬೆಂಬಲಿಸುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮೌಲಿಕ ಕೃತಿ. ಅದರಲ್ಲಿನ ಸಂದೇಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿವೆ. ಅದರಲ್ಲೂ ಇಂದಿನ ರಾಜಕಾರಣಿಗಳು ರಾಮಾಯಣದಲ್ಲಿನ ಸಂದೇಶ, ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.ವಿಶೇಷ ಉಪನ್ಯಾಸ ನೀಡಿದ ಧಾರವಾಡದ ಕರ್ನಾಟಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಡಿ.ಬಿ.ಕರಡೋಣಿ, ಸಂಘಟನಾತ್ಮಕವಾಗಿ ಸಮಾಜವನ್ನು ಬಲಗೊಳಿಸುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆದ್ಯತೆ ನೀಡುವಂತೆ ಮನವಿ ಮಾಡಿದರು.ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಸಮಾಜದ ಮುಖಂಡ ಚಂದಪ್ಪ ತಳವಾರ ಮಾತನಾಡಿದರು. ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಕಾರ್ಯಕ್ರಮ ಉದ್ಘಾಟಿಸಿದರು.ಸಮಾಜದ ಮುಖಂಡ ಹನುಮಂತಪ್ಪ ನಾಯಕ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್, ಉಪಾಧ್ಯಕ್ಷೆ ಡಾ.ಸೀತಾ ಹಲಗೇರಿ, ನಗರಸಭಾ ಸದಸ್ಯೆ ಇಂದಿರಾ ಭಾವಿಕಟ್ಟಿ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಳಕಪ್ಪ ಜಾಧವ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ರಾಘವೇಂದ್ರ ಹಿಟ್ನಾಳ್, ಟಿ.ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು.ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ಹತ್ತು ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ, ನಗರದ ಸಿರಸಪ್ಪಯ್ಯನಮಠದಿಂದ ಸಾಹಿತ್ಯ ಭವನದ ವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.