ಸೋಮವಾರ, ಮೇ 10, 2021
26 °C

ಜಮಖಂಡಿ ತಾಲ್ಲೂಕು ಸಮ್ಮೇಳನ ಅಧ್ಯಕ್ಷರಿಗೆ ಕಸಾಪ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ: ಮಲ್ಲಿಕಾರ್ಜುನ ಹುಲಗಬಾಳಿ ಶಿಸ್ತುಬದ್ಧ ಸಾಹಿತಿ. ಅದರಲ್ಲೂ ಅವರೊಬ್ಬ ನಾಡಿನ ಹೆಸರಾಂತ ವಿನೋದ ಸಾಹಿತಿಯಾಗಿದ್ದು, ಸಾಹಿತ್ಯ ಮತ್ತು ಓದು ಎರಡನ್ನೂ ಜೊತೆಯಾಗಿ ಬೆಳೆಸಿಕೊಂಡು ಬಂದವರು. ಅವರು ರಚಿಸಿದ ವಿನೋದ ಸಾಹಿತ್ಯಕ್ಕೆ ರಾಜ್ಯ ಮತ್ತು ಹೊರ ರಾಜ್ಯದ ಹಲವಾರು ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ ಎಂದು ಸ್ಥಳೀಯ ಮಕ್ಕಳ ಸಾಹಿತಿ ಜಯವಂತ ಕಾಡದೇವರ ತಿಳಿಸಿದರು.ಇತ್ತೀಚೆಗೆ ಜಮಖಂಡಿ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸ್ಥಳೀಯ ವಿನೋದ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಅವರ ಮನೆಗೆ ಕಸಾಪ ಪದಾಧಿಕಾರಿಗಳು ತೆರಳಿ ಸಮ್ಮೇಳನಕ್ಕೆ ಸ್ವಾಗತ ಕೋರಿ ದಂಪತಿಯನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ನಗರದ ಗಣ್ಯ ವ್ಯಾಪಾರಸ್ಥ ನಿಂಗಪ್ಪ ಯಾದವಾಡ ಮಾತನಾಡುತ್ತ `ಹುಲಗಬಾಳಿಯವರು ಜನ ಸಾಮಾನ್ಯರಿಗೆ ತಲುಪುವಂತಹ ಸಾಹಿತ್ಯ ರಚಿಸಿದ್ದಾರೆ' ಎಂದು ತಿಳಿಸಿದರು. ಕಸಾಪದ ಅಧ್ಯಕ್ಷ ಬಸವರಾಜ ಯಡಹಳ್ಳಿ, `ಹುಲಗಬಾಳಿಯವರು ತಮ್ಮ ಲೇಖನಗಳಲ್ಲಿ ಹಾಸ್ಯದ ಜೊತೆಗೆ ಸಾಮಾಜಿಕ ವಿಮರ್ಶೆಯನ್ನೂ ಸೇರಿಸಿಕೊಂಡಿದ್ದಾರೆ. ಅವರು ನಮ್ಮ ಭಾಗದ ಬೀಚಿ ಎಂದೇ ಖ್ಯಾತರಾಗಿದ್ದಾರೆ' ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಮ್.ಸಿ. ಗೊಂದಿ ಹಾಗೂ ಶಿವಾನಂದ ಬಾಗಲಕೋಟಮಠ  ಮಾತನಾಡಿದರು.ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜುನ ಹುಲಗಬಾಳಿ ಅವರು, `ನಾನೊಬ್ಬ ಸಾಂಕೇತಿಕ ಪ್ರತಿನಿಧಿ ಮಾತ್ರ. ಇದು ನನ್ನ ಜೊತೆಗಿರುವ ಎಲ್ಲ ಸಾಹಿತಿಗಳಿಗೆ ಸಂದ ಗೌರವವಾಗಿದೆ. ಇದು ನನಗೆ ಬಯಸದೇ ಬಂದಿರುವ ಭಾಗ್ಯ. ಈ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟ ಎಲ್ಲರಿಗೂ ವಂದನೆ' ಎಂದು ಹೇಳಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಮಣ್ಣ ಹುಲಕುಂದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಿ.ಎಸ್. ಝಳಕಿ, ರಾಮದಾಸ ಸಿಂಗನ್, ಶಿವಾನಂದ ದಾಶ್ಯಾಳ, ಮಹಾಲಿಂಗಪ್ಪ ಹುಲಗಬಾಳಿ, ಮಲ್ಲು ಮುತ್ತೂರ, ಎಸ್.ಎಸ್. ಹಿರೇಮಠ, ಜಗದೇವಿ ಹುಲಗಬಾಳಿ, ಭಾರತಿ ಶೆಟ್ಟರ, ಕಸ್ತೂರಿ ಹುಲಗಬಾಳಿ ಮುಂತಾದವರು ಉಪಸ್ಥಿತರಿದ್ದರು. ಕಿರಣ ಆಳಗಿ ಸ್ವಾಗತಿಸಿದರು. ಮಹಾಶಾಂತ ಶೆಟ್ಟಿ ನಿರೂಪಿಸಿದರು. ಕಸಾಪ ಕಾರ್ಯದರ್ಶಿ ಎಮ್.ಡಿ. ಸಂಕ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.