ಜಮಖಂಡಿ ನಗರ; ನೂರಾರು ಜಂಜಡ

7

ಜಮಖಂಡಿ ನಗರ; ನೂರಾರು ಜಂಜಡ

Published:
Updated:

ಜಮಖಂಡಿ: ಎಗ್ಗಿಲ್ಲದೆ ನಡೆಯುತ್ತಿರುವ ವೇಶ್ಯಾವಾಟಿಕೆ, ಹದಗೆಟ್ಟ ರಸ್ತೆಗಳು, ಹೆಚ್ಚಿದ ವಾಹನಗಳ ದಟ್ಟಣೆ, ಗಬ್ಬೆದ್ದು ನಾರುತ್ತಿರುವ ಸಾರ್ವಜನಿಕ ಶೌಚಾಲಯಗಳು, ತ್ಯಾಜ್ಯ ನಿರ್ವಹಣೆ ಕೊರತೆ, ಬಿಡಾಡಿ ದನಗಳ ಹಾವಳಿ, ಪೂರ್ಣಗೊಳ್ಳದ ಒಳಚರಂಡಿ ನಿರ್ಮಾಣ ಕಾಮಗಾರಿಯಿಂದಾಗಿ ಐತಿಹಾಸಿಕ ಜಮಖಂಡಿ ನಗರ ನೂರಾರು ಜಂಜಡಗಳಿಂದ  ಕಳೆಗುಂದತೊಡಗಿದೆ.ಪ್ರಧಾನ ಅಂಚೆ ಕಚೇರಿ, ಸುವರ್ಣ ಚಿತ್ರ ಮಂದಿರ, ಅಶೋಕ ಸರ್ಕಲ್, ಎ.ಜಿ. ದೇಸಾಯಿ ವೃತ್ತದವರೆಗಿನ ರಸ್ತೆ, ಉಮಾರಾಮೇಶ್ವರ ರಸ್ತೆ, ಜೋಳದ ಬಜಾರ ರಸ್ತೆ, ಶಿವಾಜಿ ಸರ್ಕಲ್‌ನಿಂದ ಜೋಳದ ಬಜಾರ ವರೆಗಿನ ರಸ್ತೆ, ಸಜ್ಜಿ ಹನುಮಾನ ದೇವಸ್ಥಾನದಿಂದ ಎ.ಜಿ. ದೇಸಾಯಿ ವೃತ್ತದವರೆಗಿನ ರಸ್ತೆಗಳೆಲ್ಲವೂ ಹದಗೆಟ್ಟು ಹೋಗಿವೆ. ಈ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸುವ ಅಗತ್ಯವಿದೆ.ಬಸ್ ನಿಲ್ದಾಣದಿಂದ ನಗರಸಭೆ ಕಾರ್ಯಾಲಯದವರೆಗಿನ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗದ ಮೇಲೆ ಜೋಡಿಸಿದ ಕಲ್ಲುಗಳು ಅಲ್ಲಲ್ಲಿ ಮಾಯವಾಗಿ ತೆರೆದ ಗುಂಡಿಗಳು ನಿರ್ಮಾಣವಾಗಿವೆ. ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರು ಆಗಾಗ ಈ ಗುಂಡಿಗಳಿಗೆ ಎಡವಿ ಬಿದ್ದು ಕೈಕಾಲು ಮುರಿದುಕೊಂಡ ಉದಾಹರಣೆಗಳು ಸಾಕಷ್ಟಿವೆ.ಬಸ್ ನಿಲ್ದಾಣದಿಂದ ಪಿ.ಬಿ.ಹೈಸ್ಕೂಲ್‌ವರೆಗಿನ ಎರಡೂ ಬದಿಯ ಪಾದಚಾರಿ ಮಾರ್ಗದ ಮೇಲೆ ಡಬ್ಬಿ ಅಂಗಡಿ, ಕೈಗಾಡಿಗಳು ಆಕ್ರಮಿಸಿಕೊಂಡು ಬೀದಿ ಬದಿಯ ವ್ಯಾಪಾರ ತಾಣವಾಗಿವೆ. ಪಾದಚಾರಿಗಳಿಗೆ ನಡೆದಾಡಲು ಜಾಗವೇ ಇಲ್ಲದಂತಾಗಿದೆ. ಹಿಂದೊಮ್ಮೆ ಅತಿಕ್ರಮಣ ತೆರವುಗೊಳಿಸಿ ಪಾದಚಾರಿ ಮಾರ್ಗ ನಿರ್ಮಿಸಿ ಗ್ರಿಲ್ ಹಾಕಲಾಗಿತ್ತು. ಗಿರಾಕಿಗಳು ಬರಲು ಅನುವು ಆಗುವಂತೆ ಈಗ ಗ್ರಿಲ್‌ಗಳನ್ನು ಅಲ್ಲಲ್ಲಿ ತೆಗೆದು ಗುಜರಿ ಅಂಗಡಿಗೆ ಸಾಗಿಸಲಾಗಿದೆ.ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ತೀರ ಕಡಿಮೆ. ಇದ್ದ ಶೌಚಾಲಯಗಳು ಕೂಡ ನಿರ್ವಹಣೆಯ ಕೊರತೆಯಿಂದ ಗಬ್ಬೆದ್ದು ನಾರುತ್ತಿವೆ. ಮಹಿಳೆಯರಿಗಾಗಿ ಶೌಚಾಲಯಗಳಂತೂ ಇಲ್ಲವೇ ಇಲ್ಲ. ಇಲ್ಲಿನ ಎಸಿ ಕಾರ್ಯಾಲಯದ ಆವರಣದಲ್ಲಿ ಶೌಚಾಲಯ ಇಲ್ಲ. ಸಾರ್ವಜನಿಕರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುವುದು ಸರ್ವೆ ಸಾಮಾನ್ಯ ಸಂಗತಿ. ದತ್ತಾತ್ರೇಯ ದೇವಸ್ಥಾನದ ಗೋಡೆಗೆ ಹೊಂದಿಕೊಂಡು ಶೌಚಾಲಯ ನಿರ್ಮಿಸಿರುವುದು ಸಹ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ಬಗೆಯ ವಾಹನಗಳ ಸಂಖ್ಯೆ ತೀರಾ ಹೆಚ್ಚಾಗಿದೆ. ಅವುಗಳ ನಿಲುಗಡೆಗೆ ಸಮರ್ಪಕವಾದ ಸ್ಥಳವಿಲ್ಲ. ವಾಹನ ಸಂಚಾರವಂತೂ ದುಸ್ತರವಾಗಿದೆ. ನಗರದಲ್ಲಿ ಸಂಚಾರ ನಿಯಮಗಳ ಪಾಲನೆ ಮಾಡುವವರ ಸಂಖ್ಯೆ ಕೂಡ ಕಡಿಮೆ ಎನ್ನಬಹುದು. ಸುಗಮ ವಾಹನ ಸಂಚಾರಕ್ಕಾಗಿ ಸಂಚಾರ ಪೊಲೀಸ್ ಠಾಣೆ ಸ್ಥಾಪಿಸಬೇಕಾದ ಅಗತ್ಯವಿದೆ. ಬೈಪಾಸ್ ರಸ್ತೆಗಳ ನಿರ್ಮಾಣ ಆಗಬೇಕಿದೆ.ನಳದ ಮೂಲಕ ಕೆಲವು ಬಡಾವಣೆಗಳಿಗೆ ನೀರನ್ನು ಶುದ್ಧೀಕರಿಸದೇ ಕುಡಿಯುವ ನೀರು ಪೂರೈಸಲಾಗುತ್ತದೆ ಎಂಬ ದೂರುಗಳು ಕೇಳಿಬರುತ್ತಿವೆ.ನಗರದಲ್ಲಿನ ಸಂಸ್ಥಾನಿಕರ ಕಾಲದ ಬಾವಿಗಳೆಲ್ಲವೂ ಹೂಳು ತುಂಬಿ ಬಹುತೇಕ ಹಾಳಾಗುವ ಹಂತ ತಲುಪಿವೆ. ಅವುಗಳ ಪುನರುಜ್ಜೀವನ ಕೂಡ ನಡೆಯಬೇಕಾದ ತೀವ್ರ ಅಗತ್ಯವಿದೆ.ಆಳರಸರ ಕಾಲದ ಲಕ್ಕನಕೆರೆಗೆ ಒಳಚರಂಡಿ ಮತ್ತು ಗಟಾರದ ನೀರು ಸೇರುತ್ತದೆ. ಅದನ್ನು ತಡೆಯಬೇಕು. ಕೆರೆಯ ನೀರಿಗೆ ಸಾರ್ವಜನಿಕರು ನಿರುಪಯುಕ್ತ ಘನತ್ಯಾಜ್ಯ ವಸ್ತುಗಳನ್ನು ಎಸೆಯುವುದನ್ನು ನಿಷೇಧಿಸಿ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಬೇಕು.ನಗರದ ಕೆಲವೆಡೆ ಒಳಚರಂಡಿಗಳ ಮ್ಯಾನ್‌ಹೋಲ್ ಮುಚ್ಚಳಗಳು ಕಳ್ಳರ ಪಾಲಾಗಿವೆ. ಅವುಗಳನ್ನು ಮರು ಜೋಡಿಸಬೇಕಾಗಿದೆ. ಎಡಿಬಿ ಯೋಜನೆ ಅಡಿಯಲ್ಲಿ ನಗರದಲ್ಲಿ ಕೈಗೊಳ್ಳಲಾಗುತ್ತಿರುವ ಒಳಚರಂಡಿ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಅದರಿಂದ ದುರ್ವಾಸನೆ ಹರಡುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ದುರ್ವಾಸನೆ ತಡೆಯಬೇಕಿದೆ.ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ತುಂಬಾ ಇದೆ. ಅನುಮೋದನೆಗೊಂಡ 13 ಹುದ್ದೆಗಳ ಪೈಕಿ 3-4 ಮಂದಿ ವೈದ್ಯಾಧಿಕಾರಿಗಳು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ನಗರದ ಬಡ ಜನತೆ ಉಚಿತ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ಸ್ವರ್ಣ ಜಯಂತಿ ಗ್ರಾಮ ಸ್ವ-ರೋಜಗಾರ ಯೋಜನೆಯ ಅಡಿಯಲ್ಲಿ ತಾಲ್ಲೂಕು ಪಂಚಾಯ್ತಿ ಅನುದಾನದಲ್ಲಿ ಪಿಡಬ್ಲ್ಯೂಡಿ ವಸತಿ ನಿಲಯಗಳ ಮುಂಭಾಗದಲ್ಲಿ ರಾಮತೀರ್ಥ ರಸ್ತೆಗೆ ಹೊಂದಿಕೊಂಡು ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳು ಹಂಚಿಕೆಯಾಗದೆ ಖಾಲಿ ಬಿದ್ದಿವೆ.ಜನಪ್ರತಿನಿಧಿಗಳು, ಅಧಿಕಾರಿಗಳು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಜವಾಬ್ದಾರಿ ನಿಭಾಯಿಸಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry