ಶನಿವಾರ, ಏಪ್ರಿಲ್ 17, 2021
29 °C

ಜಮಖಂಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಬೆಳೆಹಾನಿ ಪ್ರೋತ್ಸಾಹಧನ ನೀಡುವುದು, ಸಮರ್ಪಕ ವಿದ್ಯುತ್ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನೀಡಿದ್ದ ಜಮಖಂಡಿ ಬಂದ್ ಕರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತು ಬಂದ್ ಯಶಸ್ವಿಯಾಯಿತು.ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯ ಮೇಲೆ ಹಳೆಯ ಟೈರ್‌ಗಳಿಗೆ ಬೆಂಕಿ ಹಚ್ಚಿದ ಬಳಿಕ ಬ್ಯಾನರ್ ಹಾಗೂ ಪಕ್ಷದ ಧ್ವಜ ಹಿಡಿದುಕೊಂಡು ಕರಡಿಮೇಳ ಹಾಗೂ ಲೇಜಿಂ ತಂಂಡಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಭಾಷಣ ಮಾಡಿದ ಕಾರ್ಯಕರ್ತರು ಸ್ಥಳೀಯ ಶಾಸಕರ ವಿರುದ್ಧ ಕೆಂಡ ಕಾರಿದರು. ಕೊನೆಯಲ್ಲಿ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು.ಮೊಬೈಲ್ ಸಿಮ್ ಬದಲಾಯಿಸಿದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ಮುಖ್ಯಮಂತ್ರಿಗಳನ್ನು ಬದಲಾಯಿ ಸುತ್ತಿದೆ. ಆದರೆ ಜಾಗೃತ ಜನತೆ ಮೊಬೈಲ್ ಸೆಟ್‌ನ್ನೇ (ಬಿಜೆಪಿ) ಬದಲಾಯಿಸಬೇಕಿದೆ ಎಂದು ವಿಧಾನ ಪರಿಷತ್ ವಿರೋದ ಪಕ್ಷದ ನಾಯಕ ಎಸ್.ಆರ್.ಪಾಟೀಲ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದರು.ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನೀಡಿದ್ದ ಜಮಖಂಡಿ ಬಂದ್ ಕರೆ ಅಂಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮ ಗೌಡ ಮಾತನಾಡಿ, ಕಸಿದುಕೊಂಡಿರುವ ಬಡವರ ಪಡಿತರ ಚೀಟಿಗಳನ್ನು ಪುನರ್ ನೀಡಬೇಕು ಹಾಗೂ ಸ್ಥಗಿತಗೊಳಿಸ ಲಾಗಿರುವ ವಿವಿಧ ಫಲಾನುಭವಿಗಳ ಮಾಸಾಶನಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಬಿಜೆಪಿ ಅಂದರೆ ಬೇಲ್ ಜೈಲು ಪಾರ್ಟಿ ಎಂದು ಲೇವಡಿ ಮಾಡಿದರಲ್ಲದೆ ಭ್ರಷ್ಟಾಚಾರ ಮತ್ತು ಕಾಮುಕ ಸರ್ಕಾರವನ್ನು ಕಿತ್ತೆಸೆಯಲು ಪ್ರತಿಜ್ಞೆ ಮಾಡಬೇಕು ಎಂದು ಮನವಿ ಮಾಡಿದರು.ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ, ಜಿ.ಪಂ.ಸದಸ್ಯ ವಿಠ್ಠಲ ಚೌರಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಕಲೂತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ ಮಾತನಾಡಿದರು.ಜಿ.ಪಂ.ಸದಸ್ಯ ಅರ್ಜುನ ದಳವಾಯಿ, ತಾ.ಪಂ.ಸದಸ್ಯ ಪದ್ಮಣ್ಣ ಜಕನೂರ, ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಬಿ.ಎನ್.ಗಸ್ತಿ, ಪರಗೌಡ ಬಿರಾದಾರಪಾಟೀಲ, ರವಿ ಯಡಹಳ್ಳಿ, ಮಹೇಶ ಕೋಳಿ, ಯುವ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಸಿದ್ದು ಮೀಸಿ, ಈಶ್ವರ ಕರಬಸನವರ, ಶಾಮರಾವ ಘಾಟಗೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮನವಿ: ಕಬ್ಬುಬೆಳೆ ಕುರಿತು ಎಕರೆಗೆ ರೂ.35 ಸಾವಿರ ಪ್ರೋತ್ಸಾಹಧನ ನೀಡಬೇಕು. ಸಾವಳಗಿ-ತುಂಗಳ ಏತ ನೀರಾವರಿ ಯೋಜನೆ ಕೂಡಲೇ ಕಾಲುವೆಗೆ ನೀರು ಹರಿಸಬೇಕು. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ದಲಿತ ಫಲಾನುಭವಿಗಳ ಸಾಲ ಮನ್ನಾ ಮಾಡಬೇಕು. ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸಿ ಕಚೇರಿಯ ಶಿರಸ್ತೆದಾರ ಅನ್ಸಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಲಘು ಲಾಠಿ: ಹಳೆಯ ಟೈರ್‌ಗಳಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕುಂಬಾರಹಳ್ಳ ಗ್ರಾಮದ ನಾಗಪ್ಪ ಮಲ್ಲಪ್ಪ ನ್ಯಾಮಗೌಡ ಎಂಬ ರೈತನ ಮೇಲೆ ಲಘು ಲಾಠಿ ಚಾರ್ಜ್ ಮಾಡಿದ್ದರಿಂದ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಘಟನೆಯಲ್ಲಿ ಗಾಯಗೊಂಡಿರುವ ನಾಗಪ್ಪ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.ರೈತನ ಮೇಲೆ ಕೈಮಾಡಿ ಲಾಠಿ  ಚಾರ್ಜ್ ಮಾಡಿರುವ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ರಾಜ್ಯ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಕಾರ್ಯಕರ್ತರಿಗೆ ಭರವಸೆ ನೀಡಿದರು.ಸ್ಪಷ್ಟನೆ: ಬೆಂಕಿ ಹಚ್ಚಿದ ಟೈರ್‌ನ್ನು ಬಸ್‌ನ ಕೆಳಗೆ ತೂರಲು ಯತ್ನಿಸಿದ್ದರಿಂದ ಸಂಭಾವ್ಯ ಬೆಂಕಿ ಅನಾಹುತ ತಪ್ಪಿಸಲು ಲಘುಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಡಿವೈಎಸ್ಪಿ ಜಿ.ಆರ್.ಕಾಂಬಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.ಜಮಖಂಡಿ ಬಂದ್ ನಿಮಿತ್ತ ನಗರದ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರಿ ಮಳಿಗೆಗಳು, ಹೋಟೆಲ್‌ಗಳು ಸಂಪೂರ್ಣ ಮುಚ್ಚಿದ್ದವು. ರಸ್ತೆ ಸಂಚಾರ ಮಾತ್ರ ಎಂದಿನಂತೆ ಮುಂದುವರಿದಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.