ಮಂಗಳವಾರ, ಮೇ 18, 2021
22 °C

ಜಮಗಾ (ಆರ್): ಸಿಡಿಲು ಬಡಿದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಜಮಗಾ (ಆರ್) ಗ್ರಾಮದ ಹೊಲವೊಂದರ ಬದುವಿನ ಮರದ ಕೆಳಗೆ ನಿಂತಿದ್ದ ರೈತರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಸೋಮವಾರ ತಡ ಸಂಜೆ ಸಂಭವಿಸಿದೆ.ಜಮಗಾ (ಆರ್) ನಿವಾಸಿ ಅಣ್ಣಾರಾವ್ ಶರಣಪ್ಪ ಮೈಸಳಗಿ (40) ಸಿಡಿಲಿಗೆ ಬಲಿಯಾದ ರೈತ.  ಸಂಜೆಯ 7.30ರ ಸುಮಾರಿಗೆ ಘಟನೆ ಸಂಭವಿಸಿದೆ. ಸ್ಥಳಕ್ಕೆ ತಹಸೀಲ್ದಾರ್ ಎಲಿಯಾಸ್ ಅಹ್ಮದ್, ಡಿವೈಎಸ್ಪಿ ಸಾಂಬಾ, ಸಿಪಿಐ ಜಿ.ಎಸ್. ಉಡಗಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಖಾಲಿ ಬಿಟ್ಟ ಮನೆಯಿಂದ ಕಳವು

ಗುಲ್ಬರ್ಗ: ಮಡದಿ ಮೃತಪಟ್ಟ ಹಿನ್ನೆಲೆಯಲ್ಲಿ ನಂಬಿಕೆಯಂತೆ ತಿಂಗಳಿಗೆ ಎರಡು ದಿನ ಖಾಲಿ ಬಿಡುತ್ತಿದ್ದ ಮನೆಯೊಂದರ ಬೀಗ ಮುರಿದು ಕಳವು ಮಾಡಿದ ಬಗ್ಗೆ ಫರಹತಾಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ.ಫರಹತಾಬಾದ್‌ನ ತುಕ್ಕಪ್ಪಾ ಕಾಳನೂರ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಅವರ ಮಡದಿ ಚಂದಮ್ಮ ಈಚೆಗೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರು ತಿಂಗಳಿಗೆ ಎರಡು ದಿನ ಮನೆಯನ್ನು ಖಾಲಿ ಬಿಟ್ಟು ಹೋಗುತ್ತಿದ್ದರು. ಹೀಗೆ ಈಚೆಗೆ ಮಗಳ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಕಳವು ನಡೆದಿದೆ. ಚಿನ್ನ-ಬೆಳ್ಳಿ ಆಭರಣ, ನಗ-ನಗದು ಸೇರಿದಂತೆ ಸುಮಾರು 97 ಸಾವಿರ ರೂಪಾಯಿ ಮೌಲ್ಯದ ಸೊತ್ತು ಕಳವಾಗಿದೆ.ಲೋಕಾಯುಕ್ತ ಬಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ

ಗುಲ್ಬರ್ಗ: ಶಿಕ್ಷಕರ ತರಬೇತಿಯ ಹಣ ಮಂಜೂರಾತಿಗಾಗಿ ಲಂಚ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಒಬ್ಬರು ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಪ್ಪ ತಳವಾರ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಅಧಿಕಾರಿ. ಅವರು ಮಹಾಗಾಂವ್ ಕ್ಷೇತ್ರ ಸಂಪನ್ಮೂಲ ಅಧಿಕಾರಿ (ಬಿಆರ್‌ಸಿ) ಪ್ರಭುಲಿಂಗ ಎಂಬವರಿಂದ 26 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.ಬಿಇಒ ಶಿಕ್ಷಕರ ತರಬೇತಿಯ 1.9 ಲಕ್ಷ ರೂಪಾಯಿ ಹಣ ಮಂಜೂರು ಮಾಡಲು 26 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಇದನ್ನು ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿ ಪಾಟೀಲ್, ಪಿಐ ವಿನಾಯಕ ಬಡಿಗೇರ, ಕಮ್ಮಾರಾಯ ಪಾಟೀಲ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಆತ್ಮಹತ್ಯೆಗೆ ಯತ್ನ: ಮಹಿಳೆ ಸಾವು

ಕಮಲಾಪುರ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ನಡೆದಿದೆ.ಇಲ್ಲಿಗೆ ಸಮೀಪದ ಸಡಕ್ ಕಿಣ್ಣಿ ಗ್ರಾಮದ ನಿವಾಸಿ ರಘುವೀರ ಮಠಪತಿ ಎಂಬವರ ಪತ್ನಿ ಪಾರ್ವತಿ (45)ಸೋಮವಾರ ಅಸುನೀಗಿದ್ದಾರೆ. ಅವರು ಭಾನುವಾರ ಸಂಜೆ ತಮ್ಮ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನಾ ಸ್ಥಳಕ್ಕೆ ಎಎಸ್‌ಐ ಮೈಲಾರಿ ಭೇಟಿ ನೀಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತೋಳ ದಾಳಿ: 12 ಕುರಿಗಳ ಸಾವು

ಚಿಂಚೋಳಿ: ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ತೋಳ ದಾಳಿ ನಡೆಸಿದ್ದರಿಂದ ಕುರಿ ದೊಡ್ಡಿಯಲ್ಲಿದ್ದ 12 ಕುರಿಗಳು ಸಾವನ್ನಪ್ಪಿದ ಪ್ರಕರಣ ನಡೆದಿದೆ.ಸಿದ್ದಪ್ಪ ತಿಪ್ಪಣ್ಣ ಯಡಗಾ ಎಂಬುವವರಿಗೆ ಸೇರಿದ್ದ ಕುರಿಗಳನ್ನು ತೋಳಗಳು ದೊಡ್ಡಿಯಲ್ಲಿ ಹೊಟ್ಟೆ ಹರಿದು ರಕ್ತಹೀರಿ ಕೊಂದು ಹಾಕಿವೆ. ಇದರಿಂದ ತಮಗೆ 36ಸಾವಿರ ರೂ ಹಾನಿಯಾಗಿದೆ ಎಂದು ತಿಪ್ಪಣ್ಣ ಸುಲೇಪೇಟ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಕಳೆದ ಒಂದು ವಾರದ ಹಿಂದಷ್ಟೆ ತೋಳಗಳು ಪೋಲಕಪಳ್ಳಿಯಲ್ಲಿ ದಾಳಿ ನಡೆಸಿ 23 ಕುರಿಗಳನ್ನು ಕೊಂದಿದ್ದವು. ಈಗ ನಿಡಗುಂದಾದಲ್ಲಿ ಇಂತಹುದೇ ಪ್ರಕರಣ ನಡೆದಿದ್ದು, ಎರಡನೇ ಪ್ರಕರಣವಾಗಿದೆ.ಸಿಡಿಲು ಬಡಿದು ಹಸು ಸಾವು

ಬೀದರ್: ಸಿಡಿಲು ಬಡಿದು ಹಸು ಮೃತಪಟ್ಟಿರುವ ಘಟನೆ ಭಾಲ್ಕಿ ತಾಲ್ಲೂಕಿನ ರುದನೂರು ಗ್ರಾಮದಲ್ಲಿ ಶನಿವಾರ ನಡೆದಿದೆ.ಚಂದ್ರಕಾಂತ ಕಾಶೆಪ್ಪ ಹಡಪದ ಎಂಬುವರ ಹಸು ಸಿಡಿಲಿಗೆ ಬಲಿಯಾಗಿದೆ. ಹಸುವಿನ ಮೌಲ್ಯ 20 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.ಹಸುವಿನ ಸಾವಿನಿಂದ ಹಾನಿ ಉಂಟಾಗಿದೆ. ಆದ್ದರಿಂದ ತಮಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಚಂದ್ರಕಾಂತ ಆಗ್ರಹಿಸಿದ್ದಾರೆ.ಜೂಜು: 5 ಬಂಧನ


ಜೇವರ್ಗಿ: ತಾಲ್ಲೂಕಿನ ಗುಡೂರು ಬಳಿ ಜೂಜಾಟ ಆಡುತ್ತಿದ್ದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಾಯಿಬಣ್ಣ ಸಿದ್ರಾಮಪ್ಪ ತೆಗನೂರು, ಶರಣಪ್ಪ ಮಲ್ಲಿನಾಥ ಪೊಲೀಸ್ ಪಾಟೀಲ, ಮಹಾಂತೇಶ ಈರಣ್ಣ ಗುಡೂರು, ರಾಜು ತಿಪ್ಪಣ್ಣ ಗುಡೂರು ಮತ್ತು ಮೆಹಬೂಬ್ ಬಂಧಿತರು. ಅವರಿಂದ 20,100 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಐಪಿಎಸ್ ಪ್ರೊಬೆಷನರಿ ಅಧಿಕಾರಿ ಆರ್. ಚೇತನ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಪೊಲೀಸರಾದ ಮಲ್ಲಿನಾಥ, ಗುರುಬಸವ, ರಮೇಶ, ಭೀಮಣ್ಣ, ವಿಶ್ವನಾಥ, ಶ್ರೀನಾಥ ಅವರು ದಾಳಿ ನಡೆಸಿದ ತಂಡದಲ್ಲಿದ್ದರು. ಇತರ ಆರು ಮಂದಿ ಪರಾರಿಯಾದುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.