ಜಮಾದಾರಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

7

ಜಮಾದಾರಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

Published:
Updated:
ಜಮಾದಾರಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

ದಾಂಡೇಲಿ: ನಾಡಿನ ಖ್ಯಾತ ತಬಲಾವಾದಕರಲ್ಲಿ ಒಬ್ಬರಾದ ದಾಂಡೇಲಿಯ ಕಾಸೀಂಸಾಹೇಬ ಲಾಲಸಾಹೇಬ ಜಮಾದಾರ ಅವರಿಗೆ 2012-13ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ `ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಸಂದಿದೆ.1931ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಜನಿಸಿದ ಜಮಾದಾರ ಅವರಿಗೆ ಈಗ 82ರ ಇಳಿ ವಯಸ್ಸು. 1947ರಲ್ಲಿ ಎ.ಪಿ.ಚಿನ್ಮಯಶಾಸ್ತ್ರಿ ಅಣ್ಣಿಗೇರಿಯವರಲ್ಲಿ ಸುಮಾರು ಹತ್ತು ವರ್ಷಗಳ ಕಾಲ ತಬಲಾ ಅಭ್ಯಾಸವನ್ನು ಮಾಡಿದ ಜಮಾದಾರ, ಹೆಚ್ಚಿನ ವಿದ್ಯಾಭ್ಯಾಸವನ್ನು ಉಸ್ತಾದ್ ಬಾಬಾಸಾಹೇಬ ಮೀರಜಕರ ಅವರ ಬಳಿ ಸುಮಾರು 35ವರ್ಷಗಳಷ್ಟು ದೀರ್ಘಕಾಲ ನಡೆಸಿದರು.ಹಿಂದೂಸ್ತಾನಿ ಸಂಗೀತಾಭ್ಯಾಸದ ಗುರು-ಶಿಷ್ಯ ಪರಂಪರೆಯಲ್ಲಿ ಉಸ್ತಾದ್ ಬಾಬಾಸಾಹೇಬ ಮೀರಜಕರ ಅವರು ಜಮಾದಾರ ಅವರಲ್ಲಿ ಅಡಗಿದ್ದ ಕಲೆಯನ್ನು ಗುರುತಿಸಿ ಇವರಿಗೆ `ಗಂಡಾ' ಕಟ್ಟಿದರು. `ಫರುಕ್ಕಾ' ಮತ್ತು`ದಿಲ್ಲಿ' ಘರಾಣಾದ ಗುರುಕುಲ ಪರಂಪರೆಯ ಶೈಲಿಗಳಲ್ಲಿ ಗಣನೀಯ ಸಾಧನೆ ಮಾಡಿದ ಕೆಲವೇ ತಬಲಾವಾದಕರಲ್ಲಿ ಇಂದು ಕೆ.ಎಲ್.ಜಮಾದಾರ ಅವರೂ ಒಬ್ಬರಾಗಿದ್ದಾರೆ.ಇದರೊಂದಿಗೆ ಕಥಕ್ ನೃತ್ಯಕ್ಕೆ ತಬಲಾ ಸಾಥ್ ನೀಡುವ ಕುರಿತು ಹೆಚ್ಚಿನ ಪ್ರತಿಭೆಯನ್ನು ಸಾಧಿಸಿಕೊಂಡ ಕೆ.ಎಲ್.ಜಮಾದಾರ ಅವರು 1973ರಿಂದ ದಾಂಡೇಲಿಯ ಕಾಗದ ಕಾರ್ಖಾನೆಯ ವೀಣಾ ಸಂಗೀತ ವಿದ್ಯಾಲಯದಲ್ಲಿ ತಬಲಾ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ ಸತತ 30ವರ್ಷಗಳ ಕಾಲ ಸಂಗೀತ ಸೇವೆ ಮಾಡಿದರು.957ರಲ್ಲಿ ಆಕಾಶವಾಣಿ ತಬಲಾ ಬಿ ಗ್ರೇಡ್ ಪರೀಕ್ಷೆಯನ್ನು ಪಾಸು ಮಾಡಿದ ಇವರು, ಇಂದಿಗೂ ಆಕಾಶವಾಣಿಯ ಕಲಾವಿದರಾಗಿದ್ದು, ಕರ್ನಾಟಕ, ಆಂದ್ರ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಕಳೆದ 35 ವರ್ಷಗಳಿಂದ ಮೀರಜನಲ್ಲಿ ಉಸ್ತಾದ್ ಅಬ್ದುಲ್ ಕರೀಂಖಾನ್‌ರ ಪುಣ್ಯತಿಥಿಯಲ್ಲಿ ಇವರು ತಬಲಾಸಾಥ್ ನೀಡುತ್ತಿದ್ದಾರೆ.ಜಮಾದಾರ ಗುರುಗಳ ಶಿಷ್ಯಂದಿರು ಮುಂಬೈ, ಬೆಂಗಳೂರು, ಪುಣೆ, ಬೆಳಗಾವಿಗಳಲ್ಲಿ ಖ್ಯಾತಿ ಪಡೆದು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.1984ರಲ್ಲಿ ಎಪ್ರಿಲ್ 20ರಿಂದ  ಸತತ ಐವತ್ನಾಲ್ಕುವರೆ ತಾಸುಗಳ ಅಖಂಡ ತಬಲಾವಾದನವನ್ನು ದಾಂಡೇಲಿಯ ಡಿಲಕ್ಸ್ ಸಭಾಂಗಣದಲ್ಲಿ ನೀಡಿ ದಾಖಲೆ ಸೃಷ್ಟಿಸಿದರು. ಆದರೆ ಸಂಪರ್ಕ ಮತ್ತು ಮಾಧ್ಯಮಗಳ ಕೊರತೆಯಿಂದ ಅಧಿಕೃತ ದಾಖಲೆ ಸಾಧ್ಯವಾಗದಿರುವುದು ವಿಷಾದದ ಸಂಗತಿಯಾಗಿದೆ. ಇವರ ಅಂದಿನ ಈ ಸಾಧನೆಯನ್ನು ಗುರುತಿಸಿಯೇ ಕರ್ನಾಟಕ ಸರ್ಕಾರ ಇವರಿಗೆ ಮಾಸಾಶನವನ್ನು ಮಂಜೂರು ಮಾಡಿತು.ಜಮಾದಾರ ಅವರಿಗೆ 1998ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಕೊಡಮಾಡುವ `ಪದ್ದಣ್ಣ ಶ್ರಮ ಪ್ರಶಸ್ತಿಯನ್ನು ನೀಡಿ ಸರ್ಕಾರ ಗೌರವಿಸಿತು. ಇದೀಗ ಇವರಿಗೆ `ಕರ್ನಾಟಕ ಕಲಾಶ್ರೀ ಪ್ರಶಸ್ತಿ' ಬಂದೊದಗಿದ್ದು, ಇವರ ಕಲಾಸಾಧನೆಗೆ ದೊರೆತ ಗೌರವವಾಗಿದೆ.

ಈಗಲೂ ಜಮಾದಾರ ಅವರು ವಾರಕ್ಕೊಮ್ಮೆ  ಕೈಗಾದಲ್ಲಿ,  ಬೆಳಗಾವಿಯಲ್ಲಿ, ತಿಂಗಳಿಗೊಮ್ಮೆ ಪುಣೆಯಲ್ಲಿ ತಬಲಾ ವಿದ್ಯಾಭ್ಯಾಸವನ್ನು ನೀಡುವ ಕೈಂಕರ್ಯವನ್ನು ಕೈಬಿಟ್ಟಿಲ್ಲ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry