ಶನಿವಾರ, ಮೇ 15, 2021
24 °C

ಜಮೀನು ತುಂಬಾ ತರಕಾರಿ, ಹಣ್ಣು

-ವಿಜಯ್ ಹೂಗಾರ . Updated:

ಅಕ್ಷರ ಗಾತ್ರ : | |

ಬೀಜೋತ್ಪಾದನೆ ಬಹಳ ಸುಲಭ ಹಾಗೂ ಹೆಚ್ಚಿನ ಖರ್ಚಿಲ್ಲದೇ ಅಧಿಕ ಲಾಭ ತರುವ ಕೃಷಿ ಎಂದು ಅದರಲ್ಲಿ ತೊಡಗಿಕೊಂಡ ಬಹುತೇಕ ರೈತರು, ನಷ್ಟ ಅನುಭವಿಸುವುದರ ಜೊತೆಗೆ ಫಲವತ್ತಾದ ಜಮೀನನ್ನು ಹಾಳು ಮಾಡಿಕೊಂಡಿದ್ದಾರೆ.ಅದೇ ರೀತಿ ಹತ್ತು ವರ್ಷಗಳಿಂದ ಬೀಜೋತ್ಪಾದನೆಯಲ್ಲಿ ತೊಡಗಿ ಕೈಸುಟ್ಟುಕೊಳ್ಳುವುದರ ಜತೆಗೆ ರಸಗೊಬ್ಬರ ಬಳಕೆಯಿಂದ ಫಲವತ್ತಾದ ಜಮೀನು ಹಾಳು ಮಾಡಿಕೊಂಡ ರೈತರೊಬ್ಬರು ಇಂದು ಸಮೃದ್ಧ ಕೃಷಿಯಿಂದ ಹಲವರಿಗೆ ದಾರಿದೀವಿಗೆಯಾಗಿದ್ದಾರೆ. ಇವರೇ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕಳಸೂರು ಗ್ರಾಮದ ಭೀಮಣ್ಣ ಚಿಗರಿ. ಇವರ ಸಮೃದ್ಧ ಕೃಷಿಯ ಗುಟ್ಟು ನೈಸರ್ಗಿಕ ಕೃಷಿ.

ಕೇವಲ ಏಳನೇ ತರಗತಿವರೆಗೆ ಓದಿರುವ ಭೀಮಣ್ಣ, ಪಾಳೇಕರ ಅವರ ನೈಸರ್ಗಿಕ ಕೃಷಿಯ ಪುಸ್ತಕ ಓದಿ ಯಾರ ಸಹಾಯವಿಲ್ಲದೇ ಅದೇ ಕೃಷಿ ಪದ್ಧತಿ ಅಳವಡಿಸಿಕೊಂಡವರು. ಇದರಿಂದ ಅವರು ತಮ್ಮ ಜಮೀನು ಸಂರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಸ್ವಾವಲಂಬಿ ರೈತನಾಗಿ ಹೊರಹೊಮ್ಮಿದ್ದಾರೆ.ಒಂಬತ್ತು ಎಕರೆ ಜಮೀನಿನಲ್ಲಿ ಮೂರು ಎಕರೆ ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು, ಉಳಿದ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಂಪೂರ್ಣ ನೈಸರ್ಗಿಕ ಕೃಷಿಯಿಂದ ಪೇರಲ, ಚಿಕ್ಕು, ತೆಂಗು, ಲಿಂಬು, ಬಾಳೆಯಂತಹ ತೋಟಗಾರಿಕೆ ಬೆಳೆಯ ಜತೆಗೆ ಅಂತರ ಬೆಳೆಯಾಗಿ ಹೆಸರು, ಸೋಯಾ, ಅಲಸಂದಿ, ಭತ್ತ, ತರಕಾರಿ ಬೆಳೆಗಳಾದ ಟೊಮೆಟೊ, ಈರುಳ್ಳಿ, ಬದನೆ, ಸೌತೆ, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಬಿಟಿ ಹತ್ತಿ ಬೆಳೆಯಲ್ಲಿ ಹೆಸರು, ರಾಗಿ, ಕೊರಲೆ, ಉದಲುಗಳಂತಹ ಧಾನ್ಯಗಳನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ವಿವಿಧ ಹಣ್ಣುಗಳು

ನಾಲ್ಕೂವರೆ ಎಕರೆ ಜಮೀನಿನಲ್ಲಿ ಲಖನೌ-49 ತಳಿಯ ಪೇರಲ (ಸೀಬೆ) ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. 16/16 ಅಡಿಗಳ ಅಂತರದಲ್ಲಿ ಒಂದೊಂದು ಪೇರಲ, 33/33 ಅಡಿಗಳ ಅಂತರದಲ್ಲಿ ಚಿಕ್ಕು ಸಸಿಗಳನ್ನು ನೆಟ್ಟಿದ್ದಾರೆ. ಯಾವುದೇ ಸಣ್ಣ ರೋಗವಿಲ್ಲದೇ, ವರ್ಷದಲ್ಲಿ ಹನ್ನೊಂದು ತಿಂಗಳು ಪ್ರತಿ ದಿನ 500-600 ಪೇರಲ ಹಣ್ಣಿನ ಫಸಲು ಸಿಗುತ್ತಿದ್ದು, ಒಂದೊಂದು ಪೇರಲ ಕನಿಷ್ಠ ಒಂದರಿಂದ ಒಂದೂವರೆ ಕೆ.ಜಿ ತೂಕ ಬರುತ್ತಿರುವುದರಿಂದ ಸಹಜವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ಭೀಮಣ್ಣ ಚಿಗರಿ.ರಾಸಾಯನಿಕ ಗೊಬ್ಬರ ಬಳಕೆ ಮಾಡುವಾಗ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿತ್ತು. ಅದಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದು ಉಂಟು. 2009ರಿಂದ ತಮ್ಮ ಜಮೀನಿನಲ್ಲಿ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡ ಮೇಲೆ ತಮ್ಮ ನಿರೀಕ್ಷೆಗೂ ಮೀರಿ ಫಸಲು ಮತ್ತು ಆದಾಯ ಬಂದಿದೆ. ರಾಸಾಯನಿಕ ಗೊಬ್ಬರ ಬಳಕೆ ಮಾಡಿದ ಜಮೀನಿನಲ್ಲಿ ಒಂದು ಎಕರೆಯಲ್ಲಿ 10-12 ಕ್ವಿಂಟಲ್ ಹತ್ತಿ, 4-5 ಚೀಲ ಹೆಸರು, 25 ಚೀಲ ಶೇಂಗಾ ಬೆಳೆಯುವ ಮೂಲಕ ರಾಸಾಯನಿಕ  ಗೊಬ್ಬರ ಬಳಕೆ ಮಾಡುವ ರೈತರ ಹುಬ್ಬೇರಿಸುವಂತೆ ಮಾಡಿದ್ದಾರೆ.ಈ ಕೃಷಿಯಿಂದ ನೀರು ಹಾಗೂ ಕಾರ್ಮಿಕರ ಬಳಕೆ ಕಡಿಮೆಯಾಗುತ್ತದೆ ಎಂದು ಹೇಳುವ ಭೀಮಣ್ಣ, ಮನೆಯಲ್ಲಿ ನಾಲ್ಕು ಎತ್ತುಗಳು, ಒಂದು ಆಕಳು ಇತ್ತು. ನೈಸರ್ಗಿಕ ಕೃಷಿಗೆ ಬೇಕಾಗುವ ಜೀವಾಮೃತ ತಯಾರಿಸಲು ಮತ್ತೆ ದೇಸಿ ನಾಲ್ಕು ಆಕಳು ಖರೀದಿಸಿದ್ದಾಗಿ ತಿಳಿಸುತ್ತಾರೆ.ತದ್ರೂಪಿ ಕಾಡು ಸೃಷ್ಟಿ

ಕೇವಲ ತೋಟಗಾರಿಕೆ ಹಾಗೂ ಇತರ ಹೊಲದ ಬದುವಿನಲ್ಲಿ ಗಿರಿಸೀಡಿಯಾ, ಬಿದಿರು, ಸಾಗವಾನಿ ಗಿಡಗಳನ್ನು ಬೆಳೆಸುವ ಮೂಲಕ ಜೀವಂತ ಬೇಲಿ ರೂಪಿಸಿದ್ದಾರೆ. ದನಕರುಗಳಿಗೆ ಮೇವಿನ ಬೆಳೆಗಳಾದ ಗಿನಿ ಹುಲ್ಲು, ಕುದುರೆ ಮೆಂತೆಗಳನ್ನು ಹೊಲದ ಅಂಚಿನಲ್ಲಿ ಬೆಳೆಸಲಾಗಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಬೈನೆ, ಸೂಗೆ, ರಾಮಪತರೆ, ಶ್ರೀತಾಳೆ, ನಂದಿ, ಅಂಟುವಾಳ, ಹೊನ್ನೆ, ಕಂದು, ನೇರಳೆ, ಧೂಪ, ತಾರೆ, ಬೀಟೆ, ಹುನಾಲು, ಸುರಿಗೆ, ಹಿಪ್ಪೆ, ತಪಸಿ, ಅಂಕುಲೆ, ಮತ್ತಿ, ಚಳ್ಳೆ, ಗೇರು, ವಾಟೆ, ಹೊಳೆಮತ್ತು. ಮಹಾಗನಿ, ಮುಂಡಿಗೆ, ನೆಲ್ಲಿ, ಕುಂಕುಮ, ಹೆದ್ದಿ. ಬೇವು, ಬನ್ನಿ ಸೇರಿದಂತೆ 40ಕ್ಕೂ ಹೆಚ್ಚು ಅರಣ್ಯ ಮರಗಳನ್ನು ಬೆಳೆಸಿದ್ದಾರೆ. ಇವುಗಳ ಜತೆಗೆ ಬಾಳೆ ತೋಟದಲ್ಲಿ ನೆಲದ ತೇವಾಂಶ ಕಾಯ್ದುಕೊಳ್ಳಲು, ಕಳೆ ನಿಯಂತ್ರಿಸಲು ಹಾಗೂ ಭೂಮಿಯ ಫಲವತ್ತತೆ ಹೆಚ್ಚಿಸುವ ಉದ್ದೇಶಕ್ಕಾಗಿ ಸೆಣಬು ಬೆಳೆಯನ್ನು ಬಿತ್ತನೆ ಮಾಡಿದ್ದಾರೆ.ಭೂಮಿ ಫಲವತ್ತತೆಯಲ್ಲಿ ನಿರತ ಭೀಮಣ್ಣ ಚಿಗರಿ ಹಾಗೂ ಇತರ ರೈತರುಒಟ್ಟಿನಲ್ಲಿ ಇದ್ದ ಜಮೀನಿನ ಇಂಚಿಂಚು ಜಾಗವನ್ನು ಸದ್ಬಳಕೆ ಮಾಡಿಕೊಂಡು ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಸಮಪ್ರಮಾಣದಲ್ಲಿ ಮಿಶ್ರಣಗೊಳಿಸುವ ತದ್ರೂಪಿ ಕಾಡು (ಅನಲಾಗ್ ಫಾರೆಸ್ಟ್) ಸೃಷ್ಟಿಮಾಡಿದ್ದಾರೆ. ಹೊಲದಲ್ಲಿ ಬರುವ ಕಸವನ್ನು ಹಾಗೆ ಸುಟ್ಟು ಹಾಕುವುದಿಲ್ಲ. ಅದರಿಂದಲೇ ಎರೆಹುಳು ಗೊಬ್ಬರ ತಯಾರಿಕೆ ಆರಂಭಿಸಿದ್ದೇನೆ. 4/20 ಅಡಿಯ 8 ಹೊಂಡಗಳಲ್ಲಿ ಗೊಬ್ಬರ ತಯಾರು ಮಾಡುತ್ತಿದ್ದು, ಮಾರಾಟ ಘಟಕ ಪ್ರಾರಂಭಿಸಿದ್ದಾರೆ.ಮುಂದಿನ ದಿನಗಳಲ್ಲಿ ಬಿಟಿ ಹತ್ತಿಗೆ ಪರ್ಯಾಯವಾಗಿ ದೇಸಿ ಹತ್ತಿ ತಳಿಯನ್ನು ಅಭಿವೃದ್ಧಿ, ಶೇಂಗಾ ಸೇರಿದಂತೆ ಇತರ ಕೃಷಿ ಉತ್ಪನ್ನಗಳನ್ನು ಸಂಸ್ಕರಣಗೊಳಿಸಿ ಅವುಗಳ ಮೌಲ್ಯ ಹೆಚ್ಚಳ, ಕಾಡು ಹಣ್ಣು, ಹೂವು, ಔಷಧಿ ಸಸ್ಯಗಳ ತೋಟ ನಿರ್ಮಾಣ ಮಾಡುವ ಗುರಿ ಹೊಂದಿರುವುದಾಗಿ ಚಿಗರಿ ತಿಳಿಸುತ್ತಾರೆ. ಚಿಗರಿಯವರ ಸಾಧನೆಗೆ ಧಾರವಾಡ ಕೃಷಿ ವಿ.ವಿ ನೀಡುವ ಕೃಷಿ ಪಂಡಿತ ಪ್ರಶಸ್ತಿ, ಮೈಸೂರಿನ ರಂಗಾಯಣದ ದಸರಾ ನಾಡಹಬ್ಬದಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ.ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸಬೇಕೆಂದರೆ ನೈಸರ್ಗಿಕ ಕೃಷಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ. ಈಗಾಗಲೇ ತಮ್ಮ ಬಳಿ ದಾವಣಗೆರೆ, ಹಳೆ ಬಂಕಾಪುರ, ತೊಂಡೂರ ಸೇರಿದಂತೆ ಅನೇಕ ಕಡೆಗಳಿಂದ ರೈತರು ಮಾಹಿತಿ ಪಡೆಯಲು ಬರುತ್ತಿದ್ದಾರೆ. ನೈಸರ್ಗಿಕ ಕೃಷಿ ಬಗ್ಗೆ ಯಾವುದೇ ರೈತರು ತಮ್ಮ ಬಳಿ ಮಾಹಿತಿ ಪಡೆದುಕೊಳ್ಳಬಹುದು.

ಸಂಪರ್ಕಕ್ಕೆ- 9008175263.

-ವಿಜಯ್ ಹೂಗಾರ .

(ಕಳೆದ ವಾರ ಇದೇ ಅಂಕಣದಲ್ಲಿ ಪ್ರಕಟವಾದ ನೈಸರ್ಗಿಕ ಕೃಷಿಕ ಚಂದ್ರಶೇಖರ್ ಬಳ್ಳೊಳ್ಳಿ  ಅವರ ಸಂಪರ್ಕ ಸಂಖ್ಯೆ 9742060524)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.