ಜಮೀನು ಮರಳಿಸಲು ಆಗ್ರಹಿಸಿ ಧರಣಿ

ಬುಧವಾರ, ಜೂಲೈ 17, 2019
30 °C

ಜಮೀನು ಮರಳಿಸಲು ಆಗ್ರಹಿಸಿ ಧರಣಿ

Published:
Updated:

ಕೊಪ್ಪಳ: ಹೈಕೋರ್ಟ್‌ನ ಸಂಚಾರಿ ಪೀಠದ ಆದೇಶದ ಪ್ರಕಾರ ಜಮೀನನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿ ರೈತರು ತಾಲ್ಲೂಕಿನ ಹಾಲವರ್ತಿ ಬಳಿ ಇರುವ ಎಂಎಸ್‌ಪಿಎಲ್ ಕಾರ್ಖಾನೆ ಮುಂದೆ ಧರಣಿ ನಡೆಸಿದ ಘಟನೆ ಬುಧವಾರ ನಡೆದಿದೆ.120 ಎಕರೆ ಪ್ರದೇಶದಲ್ಲಿರುವ ಕಾರ್ಖಾನೆಯ ಪ್ಯಾಲೇಟೈಜೇಶನ್ ಘಟಕವನ್ನು ತೆರವುಗೊಳಿಸಿ ಸದರಿ ಜಮೀನನ್ನು ರೈತರಿಗೆ ನೀಡುವಂತೆ ತಾನೇ ನೀಡಿದ ಅದೇಶವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಿಂದಕ್ಕೆ ಪಡೆದಿರುವ ಕ್ರಮವನ್ನೂ ರೈತರು ಖಂಡಿಸಿದರು.ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜು. 20ರಂದು ಸದರಿ ಜಮೀನು ಹಾಗೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಕೆಐಎಡಿಬಿ ಅಧಿಕಾರಿಗಳು ತರಲಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಜು. 21ರಿಂದ ಜಮೀನಿನ ಸರ್ವೆ ಕಾರ್ಯವನ್ನು ಆರಂಭಿಸಲಾಗುವುದು. ಸಂಬಂಧಪಟ್ಟ ರೈತರಿಗೆ ಜಮೀನನ್ನು ಮರಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.ಇದನ್ನು ಸಮ್ಮತಿ ಸೂಚಿಸಿದ ಪ್ರತಿಭಟನಾಕಾರರು, ನಮ್ಮ ಜಮೀನು ಯಾವುದು, ಎಷ್ಟು ವಿಸ್ತೀರ್ಣ ಇದೆ ಎಂಬುದು ತಿಳಿದಿದೆ. ಅಲ್ಲದೇ, ಈಗ ಬಿತ್ತನೆ ಸಮಯ. ಸರ್ವೆ ಕಾರ್ಯ ಮುಗಿಯಲು 3 ತಿಂಗಳು ಬೇಕು. ಅಷ್ಟರಲ್ಲಿ ಬಿತ್ತನೆ ಅವಧಿಯೂ ಮುಗಿಯುವುದರಿಂದ ಈ ಕೂಡಲೇ ಜಮೀನನ್ನು ಹಸ್ತಾಂತರಿಸುವಂತೆ ಪಟ್ಟು ಹಿಡಿದರು.ಕೆಲ ಸುತ್ತಿನ ಮಾತುಕತೆ ನಂತರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೂಚನೆಯಂತೆ 120 ಎಕರೆ ಪ್ರದೇಶದಲ್ಲಿನ ಪ್ಯಾಲೇಟೈಜೇಶನ್ ಘಟಕವನ್ನು ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದೂ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಈ ಮಾತಿಗೆ ಒಪ್ಪದ ರೈತರು ತಮ್ಮ ಬೇಡಿಕೆ ಈಡೇರುವವರೆಗೆ ಸದರಿ ಸ್ಥಳದಲ್ಲಿಯೇ ಧರಣಿಯನ್ನು ಮುಂದುವರಿಸುವುದಾಗಿ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್, ಡಿಎಸ್‌ಪಿ ವಿಜಯ ಡಂಬಳ ಸಹ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry