ಜಮೀನು ಹರಾಜು ತಡೆಗೆ ಮನವಿ

7

ಜಮೀನು ಹರಾಜು ತಡೆಗೆ ಮನವಿ

Published:
Updated:

ಚನ್ನಗಿರಿ: ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ತಾಲ್ಲೂಕಿನ ತಣಿಗೆರೆ ಗ್ರಾಮದ ಹರಸೂರು ಸಿದ್ದಪ್ಪ ಮತ್ತು ಮಕ್ಕಳ ಜಮೀನು ಹರಾಜು ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿ ಸೋಮವಾರ ತಾಲ್ಲೂಕು ರೈತ ಸಂಘದವರು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸದರಿ ಬ್ಯಾಂಕ್‌ನಲ್ಲಿ ತಣಿಗೆರೆ ಗ್ರಾಮದ ವಾಸಿಯಾದ  ಭದ್ರಪ್ಪ ತಮ್ಮ ಹತ್ತು ಎಕರೆ ಬತ್ತದ ಗದ್ದೆಯನ್ನು ಆಧಾರವಾಗಿಸಿ ಬಸ್ ಖರೀದಿಸಲು 2000 ನೇ ಸಾಲಿನಲ್ಲಿ ರೂ. 7.97 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು. 2012 ಮಾರ್ಚ್ 31ರ ಒಳಗೆ ಸಾಲವನ್ನು ಮರುಪಾವತಿಸಿದರೆ ರೂ. 10 ಲಕ್ಷ ಸುಸ್ತಿ ಬಡ್ಡಿ ಮತ್ತು ಮುಂದುವರಿದ ಬಡ್ಡಿ ಮನ್ನಾವಾಗುವ ಅವಕಾಶ ಇತ್ತು. ಈ ಬಗ್ಗೆ ಬ್ಯಾಂಕಿನವರು ಸಂಬಂಧಪಟ್ಟವರಿಗೆ ನೋಟಿಸ್ ನೀಡಿದರೂ ಸಾಲವನ್ನು ಮರುಪಾವತಿ ಮಾಡಿರದ ಪ್ರಯುಕ್ತ ಈಗ ರೂ. 23 ಲಕ್ಷ ಸಾಲವನ್ನು ಬ್ಯಾಂಕಿಗೆ ಮರುಪಾವತಿಸಲು ನೋಟಿಸ್ ಜಾರಿ ಮಾಡಿದೆ. ಹಾಗೆಯೇ, ಇವರ ಹತ್ತು ಎಕರೆ ಜಮೀನನ್ನು ಹರಾಜು ನಡೆಸಲು ದಾವಣಗೆರೆಯ ಡಿಆರ್‌ಸಿಎಸ್ ನ್ಯಾಯಾಲಯ ತೀರ್ಮಾನಿಸಿದೆ. ಭದ್ರಪ್ಪ ಅವರ ಬಸ್‌ನ್ನು ಸಾರಿಗೆ ಅಧಿಕಾರಿಗಳು ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಜಪ್ತಿ ಮಾಡಿ, ನಂತರ ರೂ. 6 ಲಕ್ಷಕ್ಕೆ ಹರಾಜು ಮಾಡಿದ್ದಾರೆ. ಆದರೆ, ಬ್ಯಾಂಕಿನ ಗಮನಕ್ಕೆ ತಾರದೇ ಈ ಹರಾಜು ಪ್ರಕ್ರಿಯೆ ನಡೆಸಿದ್ದು, ಇದು ಅಕ್ರಮವಾಗಿದೆ.

ಆದ್ದರಿಂದ, ಜಮೀನು ಹರಾಜು ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಬೇಕೆಂದು ಕೋರಿ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ. ಬ್ಯಾಂಕ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ರೈತರಿಗೆ ಅನ್ಯಾಯವಾಗಿದೆ. ಆದ್ದರಿಂದ ಈ ರೈತರ ಸಾಲ ಮರುಪಾವತಿಯ ಬಗ್ಗೆ ಸತ್ಯಾಂಶವನ್ನು ಪರಿಶೀಲನೆ ನಡೆಸುವವರೆಗೂ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ಎಂ. ಪರಮೇಶ್ವರಪ್ಪ ತಿಳಿಸಿದರು.

ಪಿಎಲ್‌ಡಿ ಬ್ಯಾಂಕಿನ ವ್ಯವಸ್ಥಾಪಕ ದತ್ತಣ್ಣ ಮನವಿ ಪತ್ರವನ್ನು ಸ್ವೀಕರಿಸಿ ರೈತರ ಈ ಮನವಿಯನ್ನು ಪರಿಶೀಲನೆ ನಡೆಸುವವರೆಗೂ ತಾತ್ಕಾಲಿಕವಾಗಿ ಹರಾಜು ಪ್ರಕ್ರಿಯೆಯನ್ನು ತಡೆಹಿಡಿಯಲಾಗುವುದು. ಈ ಬಗ್ಗೆ ಒಂದು ವಾರದಲ್ಲಿ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ಉತ್ತರ ನೀಡಿದರು.

ರೈತ ಸಂಘದ ಮುಖಂಡರಾದ ನಾಗೇನಹಳ್ಳಿ ಹಾಲಪ್ಪ, ಗುಡಾಳ್ ಮಹೇಶ್ವರಪ್ಪ, ಲಕ್ಷ್ಮೀಪತಿ, ಎಂ.ಜಿ. ಶ್ರೀಕಂಠಪ್ಪ, ನಾಗೇಂದ್ರಪ್ಪ ಗರಗ, ತಣಿಗೆರೆ ಮಹೇಶ್ವರಪ್ಪ, ಕೆ.ಎನ್. ಭೈರಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry