ಜಮೀನು ಹರಾಜು: ರೈತರ ವಿರೋಧ

7

ಜಮೀನು ಹರಾಜು: ರೈತರ ವಿರೋಧ

Published:
Updated:

ದೊಡ್ಡಬಳ್ಳಾಪುರ: ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ರೈತರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿದೆ. ತಾಲ್ಲೂಕು ಆಡಳಿತದ ಈ ಕ್ರಮ ಖಂಡನೀಯ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ರೈತರ ಜಮೀನನ್ನು ಹರಾಜು ಹಾಕುವ ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀನಿವಾಸ್, ತಾ.ಅಧ್ಯಕ್ಷ  ಪ್ರಸನ್ನ, ರಾಜ್ಯ ಸರ್ಕಾರ ತಡವಾಗಿಯಾದರೂ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಎರಡನೆ ಹಂತದಲ್ಲಿ ಘೋಷಿಸಿ ಬರ ಪರಿಹಾರಕ್ಕೆ ಆಗಬೇಕಾದ ಕ್ರಮಗಳ ಕುರಿತು ಅಧಿಸೂಚನೆ ಹೊರಡಿಸಿದೆ. ರೈತರು ಪಾವತಿಸುವ ಅಲ್ಪ ಮಟ್ಟದ ಭೂ ಕಂದಾಯಗಳನ್ನು ಕಡಿಮೆ ಮಾಡುವ ಸರ್ಕಾರ ಬ್ಯಾಂಕ್‌ಗಳು ರೈತರ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರೂ ಮೌನ ವಹಿಸಿದೆ ಎಂದು ದೂರಿದರು.ಬರ ಪೀಡಿತ ಕಾಮಗಾರಿಗಳನ್ನು ಗುತ್ತಿಗೆದಾರರ ಮೂಲಕ ಮಾಡಿಸುವ ಮೂಲಕ ಕಾಮಗಾರಿಗಳಲ್ಲಿ ಆಗುವ ಅವ್ಯವಹಾರ ತಪ್ಪಿಸಬೇಕು. ಬರ ಪರಿಸ್ಥಿತಿಯ ವಾಸ್ತವತೆಯನ್ನು ಅರಿತು, ಶೀಘ್ರವೇ ತಹಸೀಲ್ದಾರರು ಬರ ಪರಿಹಾರ ಕುರಿತು ಆಗಬೇಕಾದ ಕಾಮಗಾರಿಗಳ ಬಗ್ಗೆ ರೈತ ಮುಖಂಡರ, ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಗಳು ಪಾರದರ್ಶಕವಾಗಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕೆ.ಪಿ.ಕುಮಾರ್, ರಾಜ್ಯ ರೈತ ಸಂಘದ ವಿದ್ಯಾರ್ಥಿ ಸೇನೆ ತಾಲ್ಲೂಕು ಅಧ್ಯಕ್ಷ ವಸಂತ್ ಮತ್ತಿತರರು ಭಾಗವಹಿಸಿದ್ದರು.ಆಕ್ಷೇಪ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿ ಹಬ್ಬ ಆಚರಣೆ ಸಂದರ್ಭದಲ್ಲಿ ನಡೆಯಲಿರುವ ಕಾಲೇಜಿನ ಆವರಣದಲ್ಲಿ ವಿನಾಯಕ ಮತ್ತು ಸರಸ್ವತಿ ವಿಗ್ರಹಗಳ ಪ್ರತಿಷ್ಠಾಪನೆಗೆ ರೈತ ಸಂಘದ ಮುಖಂಡರು ಆಕ್ಷೇಪವೆತ್ತಿದ್ದಾರೆ.ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀನಿವಾಸ್ ಈ ಕುರಿತು ಪ್ರತಿಕ್ರಿಯಿಸಿ, ಸಾರ್ವಜನಿಕ ವಿದ್ಯಾಸಂಸ್ಥೆಗಳಲ್ಲಿ ಒಂದು ಕೋಮನ್ನು ಓಲೈಸುವ ಸಲುವಾಗಿ ಕಾಲೇಜನ್ನು ದೇವಾಲಯ ಮಾಡಿ, ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಿರುವ ಕಾಲೇಜು ಆಡಳಿತ ಮಂಡಲಿ ಕ್ರಮ ಸರಿಯಲ್ಲ.

 

ಸಂವಿಧಾನದ ಮೂಲ ತತ್ವವಾದ ಜಾತ್ಯಾತೀತ ಮನೋಭಾವಕ್ಕೆ ದಕ್ಕೆ ತರುವ ಕೆಲಸ ಇದಾಗಿದೆ. ದೇವತ್ವ ಎನ್ನುವುದು ಖಾಸಗಿ ವಿಚಾರ.ಇದನ್ನು ಸಾರ್ವತೀಕರಣಗೊಳಿಸುವುದು ಸರಿಯಲ್ಲ. ಮುಖ್ಯವಾಗಿ ದೇವಾಲಯ ನಿರ್ಮಾಣ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ಧರ್ಮವನ್ನು ವೈಭವೀಕರಿಸುವ ಬದಲು ಕಾಲೇಜಿನ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಿ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry