ಶುಕ್ರವಾರ, ಜೂನ್ 18, 2021
20 °C

ಜಮೀನ್ದಾರನಿಗೂ ಭಿಕ್ಷೆ ಬೇಡುವ ಚಾಳಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಿಕ್ಷಾಟನೆಯನ್ನೇ ಕಸುಬು ಮಾಡಿಕೊಂಡವರು, ಕಾಯಂ ಆಗಿ ಭಿಕ್ಷೆ ಬೇಡುವವರು, ನಿರ್ದಿಷ್ಟ ಕಾಲ ಅಥವಾ ಸಂಕಷ್ಟ ಇದ್ದಾಗ ಮಾತ್ರ ಭಿಕ್ಷೆ ಕೇಳುವವರು, ಸನ್ನಿವೇಶ ಅಥವಾ ಅನ್ಯರ ಒತ್ತಾಯಕ್ಕೆ ಬಲಿಯಾಗಿ ಭಿಕ್ಷೆ ಬೇಡುವವರು- ಹೀಗೆ ಭಿಕ್ಷುಕರಲ್ಲೂ ನಾನಾ ವಿಧ.

ನಿರಾಶ್ರಿತರ ಪರಿಹಾರ ಕೇಂದ್ರವು ಭಿಕ್ಷುಕರನ್ನು ವಶಕ್ಕೆ ತೆಗೆದುಕೊಳ್ಳುವಾಗ ಹಾಗೂ ಕೇಂದ್ರ ಪರಿಹಾರ ಸಮಿತಿಯು ಇತ್ತೀಚೆಗೆ ನಗರದಲ್ಲಿ ಭಿಕ್ಷುಕರ ತಲೆ ಎಣಿಕೆ ಕೈಗೊಂಡಾಗ ಭಿಕ್ಷಾಟನೆಯಲ್ಲಿ ತೊಡಗಿರುವವರ ವೈವಿಧ್ಯಮಯ ಹಿನ್ನೆಲೆಗಳು ಬೆಳಕಿಗೆ ಬಂದಿವೆ.

ಮಂಗಳವಾರ ನಡೆದ `ರಾಜ್ಯ ಮಟ್ಟದ ತಂತ್ರಜ್ಞಾನ ಆಧಾರಿತ ಭಿಕ್ಷುಕರ ತಲೆ ಎಣಿಕೆ ಕಾರ್ಯಾಗಾರ~ದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ.ರಾಮಲಿಂಗಪ್ಪ, ಕಾರ್ಯದರ್ಶಿ ಡಾ.ಆರ್.ಎನ್.ರಾಜ ನಾಯಕ್, ಹಿಂದಿನ ಕಾರ್ಯದರ್ಶಿ ರಾಮಯ್ಯ, ಗಣತಿ ಕಾರ್ಯದಲ್ಲಿ ಭಾಗಿಯಾದ ಸಂಶೋಧನಾರ್ಥಿಗಳು ಮೊದಲಾದವರು ಭಿಕ್ಷುಕರ ಹಿನ್ನೆಲೆ ಬಗ್ಗೆ ನೀಡಿದ ವಿವರಗಳು ಇಲ್ಲಿವೆ.

ರಾಮಲಿಂಗಪ್ಪ ಮಾತನಾಡಿ, `ದೇಶದಲ್ಲೇ ಪ್ರಥಮ ಬಾರಿಗೆ ರಾಜಧಾನಿಯಲ್ಲಿ ಭಿಕ್ಷುಕರ ಗಣತಿ ಕಾರ್ಯ ನಡೆಸಲಾಗಿದ್ದು, ನಗರದಲ್ಲಿ 9 ಸಾವಿರಕ್ಕೂ ಹೆಚ್ಚು ಭಿಕ್ಷುಕರಿದ್ದಾರೆ ಎಂದು ಗೊತ್ತಾಗಿದೆ. ನವೆಂಬರ್ ತಿಂಗಳಲ್ಲಿ ನಗರದಲ್ಲಿ ಎರಡು ದಿನಗಳ ಕಾಲ ಭಿಕ್ಷುಕರ ಗಣತಿ ಕಾರ್ಯ ನಡೆಸಲಾಯಿತು~ ಎಂದರು.

`ದಾವಣಗೆರೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಅಧಿಕಾರಿಯೊಬ್ಬರ ತಂದೆ ತಾಯಿಗಳು ಭಿಕ್ಷೆ ಬೇಡುತ್ತಿದ್ದುದು ಪತ್ತೆಯಾಯಿತು. ಅದೇ ಊರಿನಲ್ಲಿ ಭಿಕ್ಷುಕರ ಡಾನ್ ಒಬ್ಬನಿದ್ದ. ಅವನ ಬಳಿ 18 ಮೋಟಾರ್ ಸೈಕಲ್‌ಗಳಿದ್ದವು. ಅವನ ಗುಂಪಿನ ಭಿಕ್ಷುಕರನ್ನು ವಶಕ್ಕೆ ತೆಗೆದುಕೊಂಡರೆ, ಅವನ ಕಡೆಯ ವಕೀಲರು ಬಂದು ಬಿಡಿಸಿಕೊಂಡು ಹೋಗುತ್ತಿದ್ದರು. ನಾನು ಎರಡು ಬಾರಿ ಅಲ್ಲಿ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಮೇಲೆ ಆ ಡಾನ್ ನಾಪತ್ತೆಯಾಗಿದ್ದಾನೆ~ ಎಂದು ಅವರು ಹೇಳಿದರು.

`ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಲು ಬಂದ ಹಾಲೆಂಡ್ ದೇಶದ ಒಬ್ಬ ನಾಗರಿಕನನ್ನು ಟ್ಯಾಕ್ಸಿ ಚಾಲಕ ದರೋಡೆ ಮಾಡಿ ಬೀದಿಗೆ ತಳ್ಳಿದ್ದ. ಆ ಹಾಲೆಂಡ್ ಪ್ರಜೆ ಭಿಕ್ಷೆ ಬೇಡುತ್ತಿದ್ದಾಗ ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ವಶಕ್ಕೆ ತೆಗೆದುಕೊಂಡರು. ತೀವ್ರ ಅಸ್ವಸ್ಥನಾಗಿದ್ದ ಆ ವ್ಯಕ್ತಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದ ಮೇಲೆ ಚೇತರಿಸಿಕೊಂಡು, ತನ್ನ ಪೂರ್ವಾಪರ ಹೇಳಿದ. ಆತನ ಬಂಧುಗಳಿಗೆ ವಿಷಯ ತಿಳಿಸಿ, ಪಾಸ್‌ಪೋರ್ಟ್ ಮತ್ತು ಹಣ ತರಿಸಿಕೊಳ್ಳಲಾಯಿತು. ಬಳಿಕ ಆ ವ್ಯಕ್ತಿಯನ್ನು ಹಾಲೆಂಡ್‌ಗೆ ಕಳುಹಿಸಿಕೊಡಲಾಯಿತು~ ಎಂದು ಅವರು ಹೇಳಿದರು.

ರಾಮಯ್ಯ ಮಾತನಾಡಿ, `ಸಮಿತಿಯ ಕಾರ್ಯದರ್ಶಿಯಾಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೆ. ಆ ಸಂದರ್ಭದಲ್ಲಿ ಲಿಂಗರಾಜಪುರ ಬಳಿ ವಶಕ್ಕೆ ತೆಗೆದುಕೊಂಡ 80 ವರ್ಷದ ಭಿಕ್ಷುಕಿಯ ಬಳಿ ಇದ್ದ ಚೀಲದಲ್ಲಿ 86 ಸಾವಿರ ರೂಪಾಯಿ ಹಣ ಇತ್ತು. ಆಕೆ ಮಕ್ಕಳು ಉತ್ತಮ ಸ್ಥಿತಿಯಲ್ಲಿದ್ದರು~ ಎಂದರು.

`ದೊಡ್ಡಬಳ್ಳಾಪುರದ ಕಡೆಯ ರೈತರೊಬ್ಬರಿಗೆ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆರು ಎಕರೆ ಜಮೀನು ಇತ್ತು. ಆತನ ಮಕ್ಕಳು, ಮೊಮ್ಮಕ್ಕಳ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಆ ರೈತ ನಗರಕ್ಕೆ ಬಂದು ಬಟ್ಟೆ ಬದಲಾಯಿಸಿ ಭಿಕ್ಷಾಟನೆಗೆ ಇಳಿಯುತ್ತಿದ್ದ. ಸಮೀಕ್ಷೆ ನಡೆಸಿದರೆ ಇಂತಹ ನೂರಾರು ವಾಸ್ತವಾಂಶಗಳು ಬೆಳಕಿಗೆ ಬರುತ್ತವೆ~ ಎಂದು  ಹೇಳಿದರು.

ರಾಜನಾಯಕ್ ಮಾತನಾಡಿ, `ವಸಂತನಗರ ಪ್ರದೇಶದಲ್ಲಿ ರಾಜಸ್ತಾನದ ಮೂಲದ ಒಬ್ಬ ಮಹಿಳೆ ಭಿಕ್ಷಾಟನೆ ವ್ಯವಹಾರವನ್ನು ನಿಯಂತ್ರಿಸುತ್ತಿದ್ದಾಳೆ. ಆಕೆ ಕಾರಿನಲ್ಲಿ ಬಂದು ಪ್ರತಿ ದಿನ ಬೆಳಿಗ್ಗೆ ಭಿಕ್ಷುಕರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾಳೆ. ಅಂತಹವರು ಭಿಕ್ಷುಕರ ಗಣತಿ ಕಾರ್ಯಕ್ಕೆ ಅಡ್ಡಿ ಮಾಡುತ್ತಾರೆ. ಗಣತಿಗೆ ಹೋಗುವ ಸಿಬ್ಬಂದಿ ಮೇಲೆ ದಾಳಿ ಮಾಡುತ್ತಾರೆ~ ಎಂದು ಬೇಸರ ವ್ಯಕ್ತಪಡಿಸಿದರು.

ಗಣತಿ ಕಾರ್ಯದಲ್ಲಿ ಪಾಲ್ಗೊಂಡ ಸಿಬ್ಬಂದಿ ಮಾತನಾಡಿ, `ದೇವಸ್ಥಾನಗಳು ಮತ್ತಿತರ ಕಡೆ ಭಿಕ್ಷುಕರ ಫೋಟೊ ತೆಗೆಯುವಾಗ ಸಾರ್ವಜನಿಕರು ನಮ್ಮ ಮೇಲೆ ಅನುಮಾನ ಪಟ್ಟು, ಆಕ್ಷೇಪಿಸಿದರು. ಕೆಲವೆಡೆ ಭಿಕ್ಷುಕರೇ ವಿರೋಧಿಸಿದರು~ ಎಂದರು.

`ರೆಸಾರ್ಟ್‌ನಂತೆ ಪುನರ್‌ವಸತಿ ಕೇಂದ್ರ ಅಭಿವೃದ್ಧಿ~

`ನಾನು ಒಬ್ಬ ರಾಜಕಾರಣಿಯಾಗಿ ಹೇಳುತ್ತಿದ್ದೇನೆ. ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ಕೆಲಸ ಮಾಡಬೇಕು~ ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ.ರಾಮಲಿಂಗಪ್ಪ ಹೇಳಿದರು.

`ರಾಜ್ಯವನ್ನೇ ಆಗಲಿ, ನಿರಾಶ್ರಿತರ ಪುನರ್‌ವಸತಿ ಕೇಂದ್ರವನ್ನೇ ಆಗಲಿ ಮಾದರಿಯಾಗಿ ಅಭಿವೃದ್ಧಿಪಡಿಸಲು ರಾಜಕಾರಣಿಗಳಿಂದ ಸಾಧ್ಯವಿಲ್ಲ~ ಎಂದು ಅವರು ಹೇಳಿದರು.

`ರಾಜಕಾರಣಿಗಳು ರೆಸಾರ್ಟ್‌ಗಳಿಗೆ ಹೋಗಿ ಬರುವುದು ಹೆಚ್ಚಾಗಿದೆ. ನಿರಾಶ್ರಿತರ ಪುನರ್‌ವಸತಿ ಕೇಂದ್ರವನ್ನು        ರೆಸಾರ್ಟ್‌ನಂತೆ ಅಭಿವೃದ್ಧಿಪಡಿಸುತ್ತೇವೆ. ಆಗಲಾದರೂ ರಾಜಕಾರಣಿಗಳು ಈ ಕೇಂದ್ರಕ್ಕೆ ಭೇಟಿ ನೀಡುತ್ತಾರೆಯೇ ನೋಡಬೇಕು~ ಎಂದು ಅವರು ಮಾರ್ಮಿಕವಾಗಿ ಹೇಳಿದರು.

`ನನಗೆ ಈ ಹುದ್ದೆ ನೀಡಿದಾಗ ನಾನು ನೊಂದುಕೊಂಡಿದ್ದೆ. ಕೇಂದ್ರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮೇಲೆ ಒಳ್ಳೆಯ ಕೆಲಸ ಮಾಡುವುದಿದ್ದರೆ ಇಲ್ಲಿ ಮಾತ್ರ ಸಾಧ್ಯ ಎಂಬ ಸಂಕಲ್ಪ ಮಾಡಿದೆ~ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.