ಜಮ್ಮು ಕಾಶ್ಮೀರ ಕುರಿತು ಪಾಕಿಸ್ತಾನದ ಪ್ರಚೋದನಕಾರಿ ಹೇಳಿಕೆ

7

ಜಮ್ಮು ಕಾಶ್ಮೀರ ಕುರಿತು ಪಾಕಿಸ್ತಾನದ ಪ್ರಚೋದನಕಾರಿ ಹೇಳಿಕೆ

Published:
Updated:

ವಿಶ್ವಸಂಸ್ಥೆ (ಪಿಟಿಐ): ಒಂದೆಡೆ ಭಾರತದೊಂದಿಗಿನ ಬಾಂಧವ್ಯ ಸುಧಾರಣೆಗೆ ನಿರಂತರ ಮಾತುಕತೆ ಅಗತ್ಯ ಎಂದು ಪ್ರತಿಪಾದಿಸುವ ಪಾಕಿಸ್ತಾನ ಮತ್ತೊಂದೆಡೆ ಮಂಗಳವಾರ `ಜಮ್ಮು ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿರಲಿಲ್ಲ~ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದೆ. ಕಾಶ್ಮೀರದ ಜನತೆಯ ಇಚ್ಛೆ ಅರಿಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ಜನಮತಗಣನೆ ನಡೆಸಬೇಕು ಎಂದೂ ಅದು ಆಗ್ರಹಿಸಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, `ಪಾಕಿಸ್ತಾನದ ಹೇಳಿಕೆಗಳು ಅನಗತ್ಯ ಹಾಗೂ ಅಸಮರ್ಥನೀಯ~ ಎಂದು ಖಂಡಿಸಿದೆ.

`ಪ್ರಸ್ತುತ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಲ್ಲ. ಅಷ್ಟೇ ಅಲ್ಲ, ಅದು ಈ ಹಿಂದೆ ಕೂಡ ಯಾವತ್ತೂ ಭಾರತದ ಅವಿಭಾಜ್ಯ ಭಾಗವಾಗಿರಲಿಲ್ಲ~ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ನಿಯೋಗದ ಸಮಾಲೋಚಕರಾದ ತಾಹಿರ್ ಹುಸೇನ್ ಅಂದ್ರಾಬಿ ವಿಶ್ವಸಂಸ್ಥೆ ಮಹಾಧಿವೇಶನದ ಚರ್ಚೆ ವೇಳೆ ಹೇಳಿದ್ದಾರೆ.

`ತಮ್ಮ ಇಚ್ಛೆ ಏನಿದೆಯೋ ಅದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಕಾಶ್ಮೀರದ ಜನತೆಗೆ ಇದೆ ಎಂಬುದನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಹಲವಾರು ಗೊತ್ತುವಳಿಗಳು ಪುರಸ್ಕರಿಸಿವೆ. ಜಮ್ಮು ಕಾಶ್ಮೀರದ ಬಗ್ಗೆ ಗೊತ್ತುವಳಿ ಇಲ್ಲದೆ ವಿಶ್ವಸಂಸ್ಥೆಯ ವಸಾಹತು ನಿರ್ಮೂಲನಾ ಕಾರ್ಯಸೂಚಿ ಪೂರ್ಣವಾಗದು~ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ಕಾಯಂ ನಿಯೋಗದ ಉಪ ಪ್ರತಿನಿಧಿಯಾದ ರಾಜಾ ಬಷೀರ್ ಇದೇ ವೇಳೆ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು, `ಜಮ್ಮು ಕಾಶ್ಮೀರ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ಪಾಕಿಸ್ತಾನ ಬದ್ಧವಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ದೀರ್ಘಕಾಲೀನ ಶಾಂತಿ ಮತ್ತು ಸ್ಥಿರತೆ ತಂದುಕೊಡಲಿದೆ~ ಎಂದೂ ಬಷೀರ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾದ ಆರ್.ರವೀಂದ್ರ (ಪ್ರಥಮ ಕಾರ್ಯದರ್ಶಿ) ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, `ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಯ ಹೇಳಿಕೆಗಳು ಸಂಪೂರ್ಣ ಅಸಮಂಜಸ. ಅವರ ಹೇಳಿಕೆಗಳು ನಿಯೋಗದ ಕಾರ್ಯವ್ಯಾಪ್ತಿಯಿಂದ ಸಂಪೂರ್ಣ ಹೊರತಾದವು~ ಎಂದಿದ್ದಾರೆ.

`ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೇ. ಭಾರತದ ಸಂವಿಧಾನ ತನ್ನೆಲ್ಲಾ ಪ್ರಜೆಗಳಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿದೆ. ಜಮ್ಮು ಕಾಶ್ಮೀರದ ಜನತೆ ನಿಯಮಿತವಾಗಿ ಅಲ್ಲಿ ನಡೆಯುವ ಚುನಾವಣೆಗಳಲ್ಲೆಲ್ಲಾ ಭಾಗವಹಿಸಿ ತಾವು ಭಾರತೀಯರು ಎಂಬುದನ್ನು ಸಾರಿದ್ದಾರೆ~ ಎಂದು ವಿವರಿಸಿದ್ದಾರೆ.

ಆದರೆ, ತಾಹಿರ್ ಹುಸೇನ್ ಅಂದ್ರಾಬಿ ಈ ಹೇಳಿಕೆಗಳಿಗೂ ಮರು ಪ್ರತಿಕ್ರಿಯೆ ನೀಡಿದ್ದಾರೆ. ಜಮ್ಮು ಕಾಶ್ಮೀರ ವಿವಾದಿತ ಪ್ರದೇಶ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಲಿಯ ಹಲವಾರು ಗೊತ್ತುವಳಿಗಳನ್ನು ಅಂಗೀಕರಿಸಿದೆ. ಹೀಗಾಗಿ ಭಾರತೀಯ ರಾಜತಾಂತ್ರಿಕನ ಸಮರ್ಥನೆಯಲ್ಲಿ ಯಾವುದೇ ಹುರಳಿಲ್ಲ ಎಂದಿದ್ದಾರೆ.

ಭಾರತವು ಜಮ್ಮು ಕಾಶ್ಮೀರದಲ್ಲಿ ಹಲವು ಚುನಾವಣೆಗಳನ್ನು ನಡೆಸಿರಬಹುದು. ಆದರೆ ಅದ್ಯಾವುದೂ, ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆಯಬೇಕೆಂದು ಬಯಸುವ ಮುಕ್ತ ಹಾಗೂ ನಿಷ್ಪಕ್ಷಪಾತ ಜನಮತಗಣನೆಗೆ ಸರಿಸಾಟಿಯಾಗದು. ಜಮ್ಮು ಕಾಶ್ಮೀರದ ಜನತೆಗೆ ಸ್ವಯಂ ನಿರ್ಧಾರದ ಹಕ್ಕನ್ನು 63 ವರ್ಷಗಳಿಂದ ನಿರಾಕರಿಸುತ್ತಾ ಬರಲಾಗಿದೆ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry