ಜಮ್ಮು - ಕಾಶ್ಮೀರ: ಹಲವೆಡೆ ಕರ್ಫ್ಯೂ ಜಾರಿ

ಸೋಮವಾರ, ಜೂಲೈ 22, 2019
27 °C

ಜಮ್ಮು - ಕಾಶ್ಮೀರ: ಹಲವೆಡೆ ಕರ್ಫ್ಯೂ ಜಾರಿ

Published:
Updated:

ಶ್ರೀನಗರ /ಜಮ್ಮು(ಪಿಟಿಐ/ಐಎಎನ್‌ಎಸ್): ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರವೂ ಭಾರಿ ಪ್ರತಿಭಟನೆ ವ್ಯಕ್ತವಾಗಿದ್ದು, ಪ್ರಮುಖ ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.ಗುರುವಾರ ಗಡಿ ಭದ್ರತಾ ಪಡೆಯ ಯೋಧರು ಹಾರಿಸಿದ ಗುಂಡಿಗೆ ನಾಲ್ವರು ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ರಾಜ್ಯದ ಹಲವೆಡೆ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮುನ್ನಚ್ಚರಿಕಾ ಕ್ರಮವಾಗಿ ಶ್ರೀನಗರ, ಅನಂತ್‌ನಾಗ್, ಪುಲ್ವಾಮಾ, ಕುಲ್ಗಾಮಾ, ಶೋಫಿಯನ್, ಬಂಡಿಪೋರ ಸೇರಿದಂತೆ ಬಹುತೇಕ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ.ಈ ಮಧ್ಯೆ ಘಟನೆಯನ್ನು ಖಂಡಿಸಿ ಜೆಕೆಎಲ್‌ಎಫ್ ನ ಮುಖ್ಯಸ್ಥ ಮಹಮದ್ ಯಾಸಿನ್ ಮಲಿಕ್ ಲಾಲ್‌ಚೌಕ್‌ವರೆಗೆ ಪ್ರತಿಭಟನೆಗೆ ಕರೆ ನೀಡಿದ್ದರು. ಹೀಗಾಗಿ ಲಾಲ್‌ಚೌಕ್‌ನ್ನು ತಲುಪುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಲಿಕ್ ಸೇರಿದಂತೆ ಜೆಕೆಎಲ್‌ಎಫ್‌ನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರತ್ಯೇಕೇತಾವಾದಿಗಳಾದ ಸಯ್ಯದ್ ಅಲಿ ಗಿಲಾನಿ  ಹಾಗೂ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿಡಲಾಗಿದೆ.ಸತತ ಎರಡನೇ ದಿನವಾದ ಶುಕ್ರವಾರವೂ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಕಾಶ್ಮೀರ ವಿಶ್ವವಿದ್ಯಾನಿಲಯವು ಇಂದಿನಿಂದ ಆರಂಭಗೊಳ್ಳಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.ಏತನ್ಮಧ್ಯೆ ರಂಬಾನ ಜಿಲ್ಲೆಯಲ್ಲಿ ತೀವ್ರ ಶೋಕ ಹಾಗೂ ದು:ಖದ ನಡುವೆ ಗುರುವಾರ ಯೋಧರ ಗುಂಡಿಗೆ ಬಲಿಯಾದ ನಾಲ್ವರ ಅಂತ್ಯಕ್ರಿಯೆಯನ್ನು  ಬಿಗಿಭದ್ರತೆ ನಡುವೆ ನಡೆಸಲಾಗಿದೆ.ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಗುರುವಾರದವರೆಗೆ 22 ತಂಡಗಳಲ್ಲಿ 41,673 ಮಂದಿ ಯಾತ್ರಾರ್ಥಿಗಳು ಅಮರನಾಥ ಕ್ಷೇತ್ರದತ್ತ ಪ್ರಯಾಣ ಬೆಳೆಸಿದ್ದಾರೆ. ಒಟ್ಟಾರೆ ಈ ವರ್ಷ ಎರಡವರೆ ಲಕ್ಷ ಮಂದಿ ಯಾತ್ರಾರ್ಥಿಗಳು ಅಮರನಾಥ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಣಿವೆಯಾದ್ಯಂತ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry