ಗುರುವಾರ , ಏಪ್ರಿಲ್ 15, 2021
27 °C

ಜಯದೇವಿತಾಯಿ ಸಮಾಧಿಗೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಕನ್ನಡ ಹೋರಾಟಗಾರ್ತಿ ಮತ್ತು ಮಂಡ್ಯದಲ್ಲಿ ನಡೆದ 48 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಜಯದೇವಿತಾಯಿ ಲಿಗಾಡೆಯವರ ಜನ್ಮಶತಮಾನೋತ್ಸವ ಇರುವುದರಿಂದ ಇಲ್ಲಿನ ಅವರ ಸಮಾಧಿಗೆ ಶನಿವಾರ ಅವರ ಕುಟುಂಬದವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಯದೇವಿತಾಯಿಯವರು ಹುಟ್ಟಿ 100 ವರ್ಷಗಳಾದರೂ ಸರ್ಕಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಅವರು ಕೊನೆಗಾಲದಲ್ಲಿ ವಾಸಿಸಿದ್ದ ಇಲ್ಲಿನ ತ್ರಿಪುರಾಂತ ಕೆರೆ ದಂಡೆಯಲ್ಲಿನ ಮನೆ ಮತ್ತು ಅದರ ಹಿಂದಿನ ಭಾಗದಲ್ಲಿರುವ ಸಮಾಧಿ ಸ್ಥಳದ ಅಭಿವೃದ್ಧಿ ನಡೆಸಿಲ್ಲ. ಜೂನ್ 23 ರಂದೇ ಅವರ ಜನ್ಮದಿನ ಇತ್ತಾದರೂ ಅವರ ನೆನಪು ಜನಪ್ರತಿನಿಧಿಗಳಿಗೆ ಬರಲಿಲ್ಲ.ಆದ್ದರಿಂದ ಅವರ ಸಂಬಂಧಿಕರಿಂದ ಇಂದು ಬೆಳಿಗ್ಗೆ ಸಮಾಧಿ ಸ್ಥಳವನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆ, ಭಜನೆ ಮತ್ತು ವಿಚಾರಗೋಷ್ಠಿ ಹಮ್ಮಿಕೊಂಡು ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಬಸವರಾಜ ಪಂಡಿತ ಮಾತನಾಡಿ ಜಯದೇವಿತಾಯಿಯವರ ಸಾಹಿತ್ಯ ಸಾಧನೆ ಬಗ್ಗೆ ಹೇಳಿದರು. ದೊಡ್ಡ ಕವಯಿತ್ರಿಯನ್ನು ಸರ್ಕಾರ ಮರೆತಿರುವುದು ಸರಿಯಲ್ಲ ಎಂದರು. ಹಿರಿಯರಾದ ಸಿದ್ರಾಮಪ್ಪ ಮೇತ್ರೆ ಧನ್ನೂರ ಮಾತನಾಡಿ ತಾಯಿಯೊಂದಿಗಿನ ತಮ್ಮ ಸಂಬಂಧ ಮತ್ತು ಇತರೆ ಪ್ರಸಂಗಗಳ ನೆನಪನ್ನು ಬಿಚ್ಚಿಟ್ಟರು.ಚೇತನಾ ಪಾಟೀಲ ಬೀದರ, ವಿರೂಜಾ ನಾರಾಯಣಪೇಟ್, ಸವಿತಾ ದೇಶಮುಖ ವಿಜಾಪುರ, ಚಾಮಲಾ ಚೌಗುಲೆ ಸಾಂಗಲಿ, ಮಲ್ಲಿಕಾರ್ಜುನ ನಾರಾಯಣಪೇಟ್, ವೀರಶೆಟ್ಟಿ ಪಾಟೀಲ, ನಿರಂಜನ ದೇಶಮುಖ, ದಿಲೀಪ ಚೌಗುಲೆ, ಸಿದ್ಧಯ್ಯ ಸ್ವಾಮಿ ನಾರಾಯಣಪುರ, ಅಮೃತಪ್ಪ ಪೊಲೀಸ್ ಪಾಟೀಲ, ದೇವೇಂದ್ರಪ್ಪ ಬಿರಾದಾರ, ಪಾಂಡುರಂಗ ಕಡಿಪಲ್ಲೆ ಪಾಲ್ಗೊಂಡಿದ್ದರು. ಧನ್ನೂರ ಮತ್ತು ನಾರಾಯಣಪುರ ಗ್ರಾಮಸ್ಥರು ಉಪಸ್ಥಿತರಿದ್ದರು.ಜಯದೇವಿತಾಯಿಯವರ ಮಗಳು ಮತ್ತು ಸಾಹಿತಿಯಾಗಿದ್ದ ಲಲ್ಲೇಶ್ವರಿ ಮತ್ತು ಅಳಿಯ ಶಂಕರಣ್ಣ ಮೂಗಿ ಅವರ ಜನ್ಮದಿನವೂ ಇದೇ ತಿಂಗಳಲ್ಲಿ ಬರುವುದರಿಂದ ಇಲ್ಲಿರುವ ಅವರ ಸಮಾಧಿಗಳಿಗೂ ಇಂದು ಪೂಜೆ ಸಲ್ಲಿಸಲಾಯಿತು ಎಂದು ಮೊಮ್ಮಗಳಾದ ಬೀದರನ ಚೇತನಾ ಪಾಟೀಲ ನಂತರ ಪತ್ರಕರ್ತರಿಗೆ ತಿಳಿಸಿದರು. ತಾಯಿಯವರ ಜನ್ಮಶತಮಾನೋತ್ಸವ ಅಂಗವಾಗಿ ಇನ್ನೊಮ್ಮೆ ದೊಡ್ಡ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ ಎಂದೂ ಹೇಳಿದರು.

ಸರ್ಕಾರ ಏನಾದರೂ ಮಾಡಲಿ ಬಿಡಲಿ, ಜಯದೇವಿ ತಾಯಿಯವರ ಸಮಾಧಿ ಸ್ಥಳವನ್ನು ಕುಟುಂಬದವರಿಂದ ಸಂರಕ್ಷಿಸಲಾಗುವುದು. ಅಲ್ಲಿಗೆ ಹೋಗಲು ಶೀಘ್ರ ರಸ್ತೆ ನಿರ್ಮಿಸಲಾಗುವುದು ಎಂದು ಅಳಿಯ ವೀರಶೆಟ್ಟಿ ಪಾಟೀಲ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.