ಭಾನುವಾರ, ಮೇ 16, 2021
21 °C

ಜಯದೇವ ಆಸ್ಪತ್ರೆ ಮಿಡಿದ ಹೃದಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಘಟಕದಲ್ಲಿ ಶುಕ್ರವಾರ ಹೆಚ್ಚುವರಿ 30 ಹಾಸಿಗೆಗಳ ನೂತನ ತೀವ್ರನಿಗಾ ಘಟಕ ಮತ್ತು ಸಾಮಾನ್ಯ ಕೊಠಡಿಗಳನ್ನು ಲೋಕಾರ್ಪಣೆ ಮಾಡಲಾಯಿತು.ಇದರೊಂದಿಗೆ 75 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದ ಈ ಘಟಕವು ಕೇವಲ 13 ತಿಂಗಳುಗಳಲ್ಲಿ 105 ಹಾಸಿಗೆಗಳಿಗೆ ವಿಸ್ತರಣೆಗೊಂಡು ದಾಖಲೆ ನಿರ್ಮಿಸಿದೆ. ಹೆಚ್ಚುವರಿ 30 ಹಾಸಿಗೆಗಳ ನೂತನ ತೀವ್ರನಿಗಾ ಘಟಕ ಮತ್ತು ಸಾಮಾನ್ಯ ಕೊಠಡಿಗಳ ಕಾರ್ಯ ಕೇವಲ 100 ದಿನಗಳಲ್ಲಿ ಪೂರ್ಣಗೊಳ್ಳುವ ಮೂಲಕ ಹಳೆ ಮೈಸೂರು ಭಾಗದ ಜನತೆಗೆ ದಸರಾ ಕೊಡುಗೆ ದೊರೆತಂತಾಗಿದೆ.ಈ ನೂತನ ತೀವ್ರನಿಗಾ ಘಟಕ ಮತ್ತು ಸಾಮಾನ್ಯ ಕೊಠಡಿಗಳನ್ನು ವೈದ್ಯಕೀಯ ಸಚಿವ ಎಸ್.ಎ.ರಾಮದಾಸ್ ಶುಕ್ರವಾರ ಉದ್ಘಾಟಿಸಿದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, `ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕೂಡ ಆರೋಗ್ಯ ಸಂಬಂಧಿಸಿದ ಅರಿವು ಇಲ್ಲವಾಗಿದೆ. ಸರ್ಕಾರದ ವೈದ್ಯಕೀಯ ಸೇವೆ ಹಳ್ಳಿಯ ಕೊನೆಯ ವ್ಯಕ್ತಿಗೂ ತಲುಪಬೇಕು~ ಎಂದು ಕರೆ ನೀಡಿದರು.`ಮೈಸೂರು ಪ್ರವಾಸೋದ್ಯಮ ಕೇಂದ್ರವಾಗಿದೆ. ಇನ್ನು ಮುಂದೆ ಆರೋಗ್ಯ ಮತ್ತು ಆರೋಗ್ಯ ಶಿಕ್ಷಣಕ್ಕೂ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಮೈಸೂರು ವೈದ್ಯಕೀಯ ಕಾಲೇಜಿಗೆ ಅಗತ್ಯವಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು~ ಎಂದರು.ಜನ ಮನ್ನಣೆ:

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, `ಮೈಸೂರು ಘಟಕವು ಕೇವಲ 13 ತಿಂಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಪಂಚತಾರಾ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಯನ್ನು ಇಲ್ಲಿ ಕಡಿಮೆ ಮತ್ತು ರಿಯಾಯ್ತಿ ದರದಲ್ಲಿ ನೀಡಲಾಗುತ್ತಿದೆ.

ಇದರಿಂದ ಸಮಾಜದ ಕಡು ಬಡವರು, ಅಸಹಾಯಕ ವೃದ್ಧರು, ಮಧ್ಯಮ ವರ್ಗದ ಸಾವಿರಾರು ಮಂದಿ ಅನುಕೂಲ ಪಡೆದುಕೊಂಡಿದ್ದಾರೆ. ಘಟಕ ಆರಂಭವಾದ ದಿನದಿಂದಲೂ ಗುಣಮಟ್ಟದ ಚಿಕಿತ್ಸೆ ನೀಡುವ ಮುಖಾಂತರ ಜನರ ಮನ್ನಣೆ ಗಳಿಸಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಈ ಘಟಕದಲ್ಲಿ ಕೇವಲ ಒಂದು ವರ್ಷದಲ್ಲಿ 25 ಸಾವಿರ ಹೊರರೋಗಿಗಳು, 4 ಸಾವಿರ ಒಳರೋಗಿಗಳು ಬಂದಿದ್ದಾರೆ. 2 ಸಾವಿರ  ಆ್ಯಂಜಿಯೋಗ್ರಾಂ, 325 ಆ್ಯಂಜಿಯೋಪ್ಲಾಸ್ಟ್ರಿ, ಪಿಪಿಐ 35, ಎಕೊ 16 ಸಾವಿರ, ಟಿಎಂಟಿ 3500 ಸೇವೆಯನ್ನು ಒದಗಿಸಲಾಗಿದೆ~ ಎಂದ ಅವರು  `ಸೆ. 29 ಮತ್ತು 30 ರಂದು ಇಂಡೋ ಅಮೆರಿಕಾ ಆ್ಯಂಜಿಯೋಪ್ಲಾಸ್ಟ್ರಿ ಕಾರ್ಯಾಗಾರವನ್ನು ನಡೆಯಲಿದೆ. ಇಲ್ಲಿ 25 ರಿಂದ 30 ಬಡ ರೋಗಿಗಳಿಗೆ   ಉಚಿತವಾಗಿ ಆ್ಯಂಜಿಯೋಪ್ಲಾಸ್ಟ್ರಿ ಮಾಡಲಾಗುವುದು. ಆಸಕ್ತರು ಸೆ.20 ರ ಒಳಗಾಗಿ ಮೈಸೂರು ಘಟಕದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು~ ಎಂದು ತಿಳಿಸಿದರು.ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ಗೀತಾ ಅವಧಾನಿ ಮಾತನಾಡಿ, `ಈಗಾಗಲೇ ನಮ್ಮಲ್ಲಿ ಸಾಕಷ್ಟು ಜಾಗದ ಕೊರತೆ ಇದೆ. ಇನ್ನು ಮುಂದೆ ಜಯದೇವ ಸಂಸ್ಥೆಗೆ ಜಾಗ ಕೊಡಲು ಸಚಿವರು ಮುಂದಾ ಗಬಾರದು. ಇದರಿಂದ ನಮಗೆ ತುಂಬಾ ತೊಂದರೆಯಾ ಗುತ್ತದೆ. 1500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಪಿ.ಕೆ.ಸಾನಿಟೋರಿಯಂ ಬಳಿ ನಿರ್ಮಿಸಲು ಮಂಜೂರಾತಿ ಕೊಡಿಸಬೇಕು~ ಎಂದು ಸಚಿವ ರಾಮದಾಸ್ ಅವರಲ್ಲಿ ಮನವಿ ಮಾಡಿದರು.ಘಟಕದ ಮುಖ್ಯಸ್ಥ ಡಾ.ಸದಾನಂದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.