ಶನಿವಾರ, ನವೆಂಬರ್ 23, 2019
18 °C
ಸೋಲಿನ ಸರಪಳಿಯಿಂದ ಹೊರಬರಲು ಡೇರ್‌ಡೆವಿಲ್ಸ್ ಹರಸಾಹಸ

ಜಯದ ತುಡಿತದಲ್ಲಿ ಆರ್‌ಸಿಬಿ ಮನಸ್ಸು

Published:
Updated:
ಜಯದ ತುಡಿತದಲ್ಲಿ ಆರ್‌ಸಿಬಿ ಮನಸ್ಸು

ಬೆಂಗಳೂರು: ಕ್ರೀಡೆಯಲ್ಲಿ ಗೆಲ್ಲುವ ಮೊದಲೇ ಬೀಗುವಂತಿಲ್ಲ, ಗೆಲುವು ಖಚಿತ ಎಂದು ಭುಜ ಸಡಿಲಿಸುವಂತಿಲ್ಲ. ವಿಜಯಲಕ್ಷ್ಮಿ ಒಲಿಯುವವರೆಗೆ ಮನಸ್ಸಿನ ಚಿತ್ತ ಬದಲಿಸುವಂತಿಲ್ಲ. ಇವೆಲ್ಲಾ ಅಲಿಖಿತ ನಿಯಮಗಳಿರಬಹುದು. ಆದರೆ ಗೆಲುವಿನ ಆವೇಗದಲ್ಲಿ ಕೊಂಚ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ.ಅದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವೇ ಸಾಕ್ಷಿ. ಆ ಪಂದ್ಯದಲ್ಲಿ ಇನ್ನೂ ಒಂದು ಓವರ್ ಬಾಕಿ ಇದ್ದಾಗ ಆರ್‌ಸಿಬಿ ಆಟಗಾರರು `ಡಗ್‌ಔಟ್'ನಲ್ಲಿ ಗೆಲುವಿನ ಖುಷಿಯಲ್ಲಿದ್ದರು. ಈ ತಂಡದ ಅಭಿಮಾನಿಗಳ ಮನದ ಮನೆಯಲ್ಲೂ ಸಂಭ್ರಮ. ಆದರೆ ಕೊನೆಯ ಓವರ್‌ನಲ್ಲಿ ನೋಬಾಲ್ ಸೇರಿದಂತೆ 16 ರನ್ ನೀಡಿದ ಆರ್.ಪಿ.ಸಿಂಗ್ ಆ ಸಂಭ್ರಮವನ್ನು ದುಃಖದ ಕಡಲೊಳಗೆ ಮುಳುಗಿಸಿಬಿಟ್ಟರು.ಗೆಲುವಿನ ಅಂಚಿನಿಂದ ಜಾರಿ ಸೋಲಿನ ಪ್ರಪಾತಕ್ಕೆ ಬಿದ್ದ ಆ ನೋವಿನಿಂದ ಆರ್‌ಸಿಬಿ ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲಿ ಈ ತಂಡದವರು ಮತ್ತೊಂದು ಹಣಾಹಣಿಗೆ ಸಿದ್ಧವಾಗುತ್ತಿದ್ದಾರೆ. ಸಮಾಧಾನದ ವಿಷಯವೆಂದರೆ ರಾಯಲ್ ಚಾಲೆಂಜರ್ಸ್ ಆಟಗಾರರು ಮಂಗಳವಾರ ರಾತ್ರಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಸವಾಲು ಎದುರಿಸುತ್ತಿದ್ದಾರೆ.ಡೇರ್‌ಡೆವಿಲ್ಸ್ ಈ ಬಾರಿಯ ಟೂರ್ನಿಯಲ್ಲಿ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಹಾಗಾಗಿ ಈ ತಂಡವನ್ನು ಮಣಿಸಿ ಗೆಲುವು ಒಲಿಸಿಕೊಳ್ಳಲು ಆರ್‌ಸಿಬಿ ಮನಸ್ಸು ತುಡಿಯುತ್ತಿರುವುದು ಸ್ಪಷ್ಟ. ರಾಯಲ್ ಚಾಲೆಂಜರ್ಸ್ ತಂಡದವರು ಈ ಬಾರಿ ಸೃಷ್ಟಿಸಿರುವ ನಿರೀಕ್ಷೆ ಅಷ್ಟಿಷ್ಟಲ್ಲ. ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಈ ತಂಡ ಕೊಹ್ಲಿ, ಗೇಲ್, ಡಿವಿಲಿಯರ್ಸ್ ಅವರಂಥ ಅಪ್ರತಿಮ ಆಟಗಾರರನ್ನು ಒಳಗೊಂಡಿದೆ. ಆದರೆ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನದ ಕೊರತೆ ಇದೆ. ತುಂಬಾ ದುಬಾರಿಯಾಗುತ್ತಿದ್ದಾರೆ. ವಿಶೇಷವೆಂದರೆ ಈ ತಂಡದವರು ತವರಿನ ಅಂಗಳದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದಾರೆ.ಇತ್ತ ಡೇರ್‌ಡೆವಿಲ್ಸ್ ತಂಡದವರು ಸೋಲಿನ ಸರಪಳಿಯಿಂದ ಹೊರಬರಲು ತಿಣುಕಾಡುತ್ತಿದ್ದಾರೆ. ವಾರ್ನರ್ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಸತತ ವೈಫಲ್ಯ ಕಾಣುತ್ತಿದ್ದಾರೆ. ಜೆಸ್ಸಿ ರೈಡರ್, ಕೆವಿನ್ ಪೀಟರ್ಸನ್ ಅನುಪಸ್ಥಿತಿ ತುಂಬಾ ಕಾಡುತ್ತಿದೆ. ಆದರೆ ಇನ್ನೂ ಕಾಲ ಮಿಂಚಿ ಹೋಗಿಲ್ಲ. ವೈಫಲ್ಯದಿಂದ ಹೊರಬಂದು ಟ್ರೋಫಿ ಗೆಲ್ಲಲು ತಾವೂ ಸ್ಪರ್ಧೆಯಲ್ಲಿದ್ದೇವೆ ಎಂಬ ಎಚ್ಚರಿಕೆ ಸಂದೇಶ ರವಾನಿಸಲು ಅವಕಾಶವಿದೆ. ಸೆಹ್ವಾಗ್ ಅವರಂಥ ಆಟಗಾರರನ್ನು ಹೊಂದಿರುವ ಈ ತಂಡಕ್ಕೆ ಆ ತಾಕತ್ತಿದೆ.ಕ್ಲಬ್ ಕ್ರಿಕೆಟ್‌ನಲ್ಲಿ ಆವೇಶ

ಐಪಿಎಲ್ ಅಷ್ಟೊಂದು ಗಂಭೀರವಾದ ಆಟವಲ್ಲ ಅಲ್ಲ ಎನ್ನುವವರಿದ್ದಾರೆ. ಏಕೆಂದರೆ ಇದು ಕ್ಲಬ್ ಕ್ರಿಕೆಟ್. ಆದರೆ ರಾಷ್ಟ್ರೀಯ ತಂಡದಲ್ಲಿ ಒಟ್ಟಿಗೆ ಆಡುವ, ರಣಜಿ ತಂಡದಲ್ಲಿ ಸದಾ ಒಟ್ಟಿಗೆ ಇರುವ, ಡ್ರೆಸ್ಸಿಂಗ್ ಕೊಠಡಿಯಲ್ಲಿ ಹೆಗಲ ಮೇಲೆ ಸದಾ ಕೈಹಾಕಿಕೊಂಡಿರುವ ಗಂಭೀರ್ ಹಾಗೂ ಕೊಹ್ಲಿ ಕಿತ್ತಾಡಿಕೊಂಡಿದ್ದು ಎಲ್ಲರನ್ನು ಅಚ್ಚರಿಯಲ್ಲಿ ಮುಳುಗಿಸಿದೆ. ಜೊತೆ ಅಚ್ಚರಿಗೆ ಕಾರಣವಾಗಿದೆ. ಇದು ಐಪಿಎಲ್‌ನ ರೋಚಕತೆ ಹೆಚ್ಚಿಸಲು ಹೂಡಿದ ತಂತ್ರವೇ ಅಥವಾ ಆಟದ ಆವೇಶದಲ್ಲಿ ನಡೆದ ಜಗಳವೇ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.ಅಂದಹಾಗೆ, ಕೊಹ್ಲಿ ಮಂಗಳವಾರ ರಾತ್ರಿ ತಮ್ಮೂರಿನ ಮತ್ತೊಬ್ಬ ಆಟಗಾರ ಸೆಹ್ವಾಗ್ ಅವರನ್ನು ಎದುರು ಹಾಕಿಕೊಳ್ಳಲು ಸಿದ್ಧವಾಗಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಇನ್ನೂ ಹಲವು ಪಂದ್ಯಗಳು ಇರುವುದರಿಂದ ಈ ಚುಟುಕು ಕ್ರಿಕೆಟ್ ಮತ್ತಷ್ಟು ಆಸಕ್ತಿ ಕೆರಳಿಸಿದೆ.

ಕೊಟ್ಟ ಹಣಕ್ಕೆ ತಕ್ಕ ಖುಷಿ

ದುಡ್ಡು ಕೊಟ್ಟು ಖರೀದಿಸಿದ ಟಿಕೆಟ್‌ಗೆ ಪೂರ್ಣ ಮನರಂಜನೆ ಲಭಿಸುತ್ತಿದೆ. ಕ್ರೀಡಾಂಗಣದೊಳಿಗೆ ಬರೀ ಕ್ರಿಕೆಟ್ ಮಾತ್ರವಲ್ಲ; ಚಿಯರ್ ಬೆಡಗಿಯರ ನೋಟ, ಅಬ್ಬರದ ಸಂಗೀತ, ಬಣ್ಣ ಬಣ್ಣದ ಬೆಳಕಿನ ನೃತ್ಯ, ಸಿನಿಮಾ ತಾರೆಯರ ದರ್ಶನ, ಕ್ರಿಸ್ ಗೇಲ್ ಗ್ಯಾಂಗ್ನಮ್ ನೃತ್ಯ ವೀಕ್ಷಿಸುವ ಸೌಭಾಗ್ಯ ಲಭಿಸುತ್ತಿದೆ.

ಉಳಿದ ಕ್ರೀಡಾಂಗಣಗಳಿಗೆ ಹೋಲಿಸಿದರೆ ಬೆಂಗಳೂರಿನ ಪಂದ್ಯಗಳಿಗೆ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಂದ್ಯ ವೀಕ್ಷಿಸಲು ಹೆಚ್ಚು ಪ್ರೇಕ್ಷಕರು ಬರುತ್ತಿದ್ದಾರೆ. ಕ್ರೀಡಾಂಗಣದಲ್ಲಷ್ಟೇ ಅಲ್ಲ; ಬ್ರಿಗೇಡ್, ಎಂ.ಜಿ.ರಸ್ತೆಗಳ ಕೆಲ ರೆಸ್ಟೋರೆಂಟ್‌ಗಳಲ್ಲಿಯೂ ಐಪಿಎಲ್ ಸಂಬಂಧ ವಿವಿಧ ಸ್ಪರ್ಧೆ ಆಯೋಜಿಸಿ ಪ್ರೇಕ್ಷಕ-ಗ್ರಾಹಕರನ್ನು ಸೆಳೆಯುತ್ತಿವೆ. ರಿಯಾಯಿತಿ ದರದಲ್ಲಿ ಮದ್ಯ-ಆಹಾರ ಪೂರೈಸುತ್ತಿವೆ. ರಾಯಲ್ ಚಾಲೆಂಜರ್ಸ್ ಮಾಲೀಕ ವಿಜಯ್ ಮಲ್ಯ ಪ್ರಚಾರದಲ್ಲೂ ಹಿಂದೆ ಬಿದ್ದಿಲ್ಲ. `ಡಿವೈಡೆಡ್ ಬೈ ಟೀಮ್ಸ; ಯುನೈಟೆಡ್ ಬೈ ಕಿಂಗ್‌ಫಿಷರ್' ಎಂಬ ಜಾಹೀರಾತು ನಗರದ ಕೆಲವೆಡೆ ರಾರಾಜಿಸುತ್ತಿದೆ. ಕ್ರೀಡಾಂಗಣದೊಳಗೂ, ಹೊರಗೂ `ಆರ್‌ಸಿಬಿ'ಯದ್ದೇ ರಂಗು, ಗುಂಗು.

ತಂಡಗಳು ಇಂತಿವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಮೊಯಿಸೆಸ್ ಹೆನ್ರಿಕ್ಸ್, ಡೇನಿಯಲ್ ಕ್ರಿಸ್ಟಿಯಾನ್, ಅರುಣ್ ಕಾರ್ತಿಕ್, ಆರ್.ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್, ರವಿ ರಾಂಪಾಲ್, ಮುರಳಿ ಕಾರ್ತಿಕ್,        ವಆರ್.ಪಿ.ಸಿಂಗ್, ಡೇನಿಯಲ್ ವೆಟೋರಿ, ಜಹೀರ್ ಖಾನ್, ಸೌರಭ್ ತಿವಾರಿ, ಕರುಣ್ ನಾಯರ್, ಆ್ಯಂಡ್ರ್ಯೂ  ಮೆಕ್‌ಡೊನಾಲ್ಡ್ ಹಾಗೂ ತಿಲಕರತ್ನೆ ದಿಲ್ಶಾನ್.

ಡೆಲ್ಲಿ ಡೇರ್‌ಡೆವಿಲ್ಸ್: ಮಾಹೇಲ ಜಯವರ್ಧನೆ (ನಾಯಕ), ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್, ಉನ್ಮುಕ್ತ್ ಚಾಂದ್, ಆ್ಯಂಡ್ರೆ ರಸೆಲ್, ಕೇದರ್ ಜಾಧವ್, ಆಶಿಶ್ ನೆಹ್ರಾ, ಸಿ.ಎಂ.  ಗೌತಮ್, ಇರ್ಫಾನ್ ಪಠಾಣ್, ಜೀವನ್ ಮೆಂಡಿಸ್, ಜೋಹಾನ್ ಬೋಥಾ, ನಮನ್ ಓಜಾ, ರೋಲೆಫ್ ವಾನ್‌ಡರ್, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್, ಮೋರ್ನ್ ಮಾರ್ಕೆಲ್, ಶಹಬಾಜ್ ನದೀಮ್ ಹಾಗೂ ಮನ್‌ಪ್ರೀತ್ ಜುನೇಜ.

ಪ್ರತಿಕ್ರಿಯಿಸಿ (+)