ಬುಧವಾರ, ಏಪ್ರಿಲ್ 21, 2021
31 °C

ಜಯನಗರ ಕಾಂಪ್ಲೆಕ್ಸ್ ಪ್ರಶ್ನೆಗಳು

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಜಯನಗರ ಕಾಂಪ್ಲೆಕ್ಸ್ ಪ್ರಶ್ನೆಗಳು

ದಕ್ಷಿಣ ಬೆಂಗಳೂರಿನ ದೊಡ್ಡ ಸುದ್ದಿ ಇದು. ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಕೆಡವಿ ಇರುವುದಕ್ಕಿಂತ ದೊಡ್ಡ ಕಾಂಪ್ಲೆಕ್ಸ್ ಕಟ್ಟಲು ಹೊರಟಿರುವ ವಿಷಯ ನೀವು ಓದಿರುತ್ತೀರಿ. ಹೊಸ ಕಟ್ಟಡದ ವಿನ್ಯಾಸ ಪತ್ರಿಕೆಗಳಲ್ಲೆಲ್ಲ ನೋಡಿರುತ್ತೀರಿ. ಮಲ್ಟಿಪ್ಲೆಕ್ಸ್ ಒಳಗೊಂಡ ಮಾಲ್ ರೀತಿಯ ಡಿಸೈನ್ ಮಾಡಿದ್ದಾರೆ.ಹಾಗೆ ನೋಡಿದರೆ, ಜಯನಗರ ಕಾಂಪ್ಲೆಕ್ಸ್ ಅಷ್ಟೇನೂ ಹಳೆಯದಲ್ಲ. ವಿಧಾನಸೌಧದ ಎದುರು ಇರುವ ಹೈಕೋರ್ಟ್ ಕಟ್ಟಡಕ್ಕೆ 144 ವರ್ಷ ತುಂಬಿದೆ. ಟಿಪ್ಪೂ ಸುಲ್ತಾನ ಬದುಕಿದ್ದ ಕಾಲದಲ್ಲಿ ಬ್ರಿಟಿಷರು ಕಟ್ಟಿದ ಕಚೇರಿ ಅದು. ಎತ್ತರದ ಸೂರಿರುವುದರಿಂದ ಬೇಸಿಗೆಯಲ್ಲೂ ತಂಪಾಗಿರುವ ಈ ಕಟ್ಟಡವನ್ನು ಕಂದಾಯ ಇಲಾಖೆಯ ಕಚೇರಿಯಾಗಿ ಒಂದು ಕಾಲದಲ್ಲಿ ಬಳಸುತ್ತಿದ್ದರು.

 

(ಹದಿನೆಂಟು ಆಫೀಸ್‌ಗಳು ಇರುವುದರಿಂದ ಅಠಾರ- ಅಂದರೆ ಹಿಂದಿಯ ಹಂದಿನೆಂಟು - ಕಚೇರಿ ಎಂಬ ಹೆಸರು ಬಂದಿತಂತೆ). ಇಂಥ ಸುಂದರ ಕಟ್ಟಡವನ್ನೂ ನಮ್ಮ ಅಧಿಕಾರಿಗಳು 1982ರಲ್ಲಿ ಕೆಡವುದಕ್ಕೆ ಹೊರಟಿದ್ದರು.ಆದರೆ ಒಂದು ಸಾರ್ವಜನಿಕ ಹಿತಾಸಕ್ತಿ ಕೇಸ್‌ನಿಂದ ಆ ಕಚೇರಿ ಬಚಾವ್ ಆಯಿತು. ಇಲ್ಲದಿದ್ದರೆ ಈ ಗ್ರೀಸ್ ಮತ್ತು ರೋಮನ್ ಶೈಲಿಯ ಭವನವನ್ನು ಕೆಡವಿ ಅಭಿರುಚಿಯಿಲ್ಲದ ಕಾಂಕ್ರೀಟ್ ಕಟ್ಟಡವೊಂದನ್ನು ಎಬ್ಬಿಸಿಬಿಟ್ಟಿರುತ್ತಿದ್ದರು.ಹೈಕೋರ್ಟ್ ಕಟ್ಟಡ ಇಂದಿಗೂ ಎಷ್ಟು ಚೆನ್ನಾಗಿದೆ ನೋಡಿ. ಸಾರ್ವಜನಿಕರು ಬಂದು ಹೋಗುವ ಕಟ್ಟಡವೊಂದರಲ್ಲಿ ಏನೇನು ಸೌಕರ್ಯ ಬಯಸುತ್ತೇವೋ ಅವೆಲ್ಲದರ ಬಗ್ಗೆ ಸಮರ್ಪಕವಾಗಿ ಆ ಕಾಲದ ವಾಸ್ತುಶಿಲ್ಪಿಗಳು ಯೋಚಿಸಿದ್ದರು.

 

ಆದರೆ ಇಂದು ಸರ್ಕಾರ ಯೋಚಿಸುವ ಕ್ರಮ ತದ್ವಿರುದ್ಧವಾಗಿದೆ: ಜಯನಗರದ ಕಾಂಪ್ಲೆಕ್ಸ್ ನಲವತ್ತು ವರ್ಷಕ್ಕೇ ಜೀರ್ಣವಾಗಿದೆ ಎಂಬಂತೆ ಎಲ್ಲರೂ ಮಾತಾಡುತ್ತಿದ್ದಾರೆ. ಇಷ್ಟು ಅಲ್ಪಾಯುಷ್ಯದ ಕಟ್ಟಡಕ್ಕೆ ಸಾರ್ವಜನಿಕ ದುಡ್ಡನ್ನು ಪೋಲು ಮಾಡಿದ ಬಗ್ಗೆಯಾಗಲೀ, ಹಾಗೆಯೇ ಈಗ ಖರ್ಚು ಮಾಡಲು ಹೊರಟಿರುವ ದುಡ್ಡಿನ ಬಗ್ಗೆಯಾಗಲೀ ಸರ್ಕಾರದ ವಲಯಗಳಲ್ಲಿ ವಿಷಾದವೆಲ್ಲೂ ಕಂಡುಬಂದಿಲ್ಲ.  ಎಪ್ಪತ್ತರ ದಶಕದಲ್ಲಿ ಕಟ್ಟಿದ ಈ ವ್ಯಾಪಾರ ಮಳಿಗೆ ಇರುವ ಜಾಗದಲ್ಲಿ ಮೊದಲು ದೊಡ್ಡ ಆಟದ ಮೈದಾನವಿತ್ತು. ಹುಡುಗರು ಕ್ರಿಕೆಟ್ ಆಡುತ್ತಿದ್ದರು. ತೆರೆದ ಕೂಡಲೇ ಈ ಕಾಂಪ್ಲೆಕ್ಸ್ ಜನಪ್ರಿಯವಾಯಿತು. (ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್ ಜನಪ್ರಿಯವಾಗಲು ಹಲವು ವರ್ಷ ಹಿಡಿಯಿತು). ಆ ಕಾಲಕ್ಕೆ ಏಕೆ, ಇಂದಿಗೂ ಅಷ್ಟು ವಿಸ್ತಾರವಾದ ವ್ಯಾಪಾರ ಮಳಿಗೆಗಳು ಬೆಂಗಳೂರಿನಲ್ಲಿ ವಿರಳ.ತರಕಾರಿ ಅಲ್ಲದೆ ಜವಳಿ, ವಾಚು, ಪುಸ್ತಕ, ಸಂಗೀತದ ಕೆಸೆಟ್‌ಗಳನ್ನು ಕೊಳ್ಳಲು  ಜನ ಅಲ್ಲಿಗೆ ಹೋಗುತ್ತಿದ್ದರು. ಇಂದು ಅಲ್ಲಿನ ನಡೆದಾಡುವ ಜಾಗದಲ್ಲೆಲ್ಲ ಅಕ್ರಮ ಅಂಗಡಿಗಳು ಎದ್ದಿವೆ. ತರಕಾರಿ ಮಳಿಗೆಯೊಳಗಿನ ದಾರಿಯ ಮುಕ್ಕಾಲು ಭಾಗ ಅಂಗಡಿಯವರೇ ಒತ್ತರಿಸಿಕೊಂಡಿದ್ದಾರೆ.  ಎಪ್ಪತ್ತರ ದಶಕದಲ್ಲಿ ಜಯನಗರದಲ್ಲಿ ಹೆಚ್ಚಾಗಿ ಮಧ್ಯಮವರ್ಗದ ಕುಟುಂಬಗಳು ವಾಸವಾಗಿದ್ದವು. ಆ ಕಾಲದ ಎಷ್ಟೋ ಮಕ್ಕಳು ಈಗ ಅಮೆರಿಕದಲ್ಲಿದ್ದಾರೆ. ಇಂಥ ಎಂಜಿನಿಯರ್, ಡಾಕ್ಟರ್‌ಗಳ ಅಪ್ಪ ಅಮ್ಮಂದಿರು ಹಲವರು ಇಲ್ಲೇ ಇದ್ದಾರೆ. ಈ ಪ್ರದೇಶದಲ್ಲಿ ಟ್ರಾಫಿಕ್ ಹೇಗಿದೆ ಅಂದರೆ ಹಿರಿಯರಿಗೆ ಇಂದು ಕಾಂಪ್ಲೆಕ್ಸ್‌ಗೆ ಬರುವುದು ದುಸ್ಸಾಹಸದಂತೆ ಕಾಣುತ್ತಿದೆ.

 

ಕಟ್ಟೆಯ ಮೇಲೆ ಕೂತು ವಯೋವೃದ್ಧರು ಹರಟೆ ಹೊಡೆಯುವ 90ರ ದಶಕದ ಪರಿಪಾಠವೂ ಈಗಿಲ್ಲ. ಪ್ರತಿದಿನ ಸಂಜೆ ಅಲ್ಲೊಂದು ರೌಂಡ್ ಹೊಡೆದು ಕಡ್ಲೆಕಾಯಿ ತಿಂದು ಮನೆಗೆ ಹೋಗುವ ರೂಢಿ ಜಯನಗರದ ಹಲವು ವಾಸಿಗಳಿಗಿತ್ತು.

 

ಆರ್‌ಟಿ ಓ ಮತ್ತು ನಗರ ಪಾಲಿಕೆಯ ಕಚೇರಿಗಳು ಇಲ್ಲಿಂದ ಕೆಲಸ ಮಾಡುತ್ತಿವೆ. ಹಳಬರಿಗೆ ಗೊತ್ತಿರುವಂತೆ, ಇಲ್ಲಿ ಪೂನಂ ಎಂಬ ಹೆಸರಿನ ಚಿತ್ರಮಂದಿರವಿತ್ತು. ಅದರಲ್ಲಿ ಕನ್ನಡವೂ ಸೇರಿದಂತೆ ಹಲವು ಭಾಷೆಯ ಚಿತ್ರಗಳನ್ನು ತೋರಿಸುತ್ತಿದ್ದರು. ಅದೇ ನಂತರ ಪುಟ್ಟಣ್ಣ ಆದದ್ದು.ಎದುರಿಗೇ ಇರುವ ಬಸ್ ನಿಲ್ದಾಣವನ್ನು ಈಚೆಗೆ ಪುನರ್ ನಿರ್ಮಾಣ ಮಾಡಿದ್ದಾರೆ. ಸೌಂದರ್ಯ ಪ್ರಜ್ಞೆಯೇ ಇಲ್ಲದ ಈ ಕಟ್ಟಡದಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಇದೆ. ಎಲ್ಲೆಲ್ಲೂ ಇಕ್ಕಟ್ಟಾದ, ಅಗತ್ಯಕ್ಕಿಂತ ಚಿಕ್ಕ ಲಿಫ್ಟ್ ಇರುವ ಈ ಕಟ್ಟಡದ ಥರವೇ ಹೊಸ ಶಾಪಿಂಗ್ ಕಾಂಪ್ಲೆಕ್ಸ್ ಕೂಡ ಮೂಡಿಬರುವ ಎಲ್ಲ ಸೂಚನೆ ಇದೆ.

 

ಈಗ ಇರುವ ಕಾಂಪ್ಲೆಕ್ಸ್‌ನ ನಿರ್ಮಾಣ ವಿಸ್ತೀರ್ಣ 14,624 ಚದರ ಮೀಟರ್. ಇದನ್ನು 43,480 ಚದರ ಮೀಟರ್‌ಗೆ, ಅಂದರೆ ಮೂರು ಪಟ್ಟಿಗಿಂತ ಹೆಚ್ಚು, ವಿಸ್ತರಿಸಲು ಹೊರಟಿದ್ದಾರೆ. ಸುಮಾರು 750 ಕಾರು ನಿಲ್ಲಿಸುವ ಸೌಕರ್ಯ ಕಲ್ಪಿಸುತ್ತಿದ್ದಾರೆ.ಶನಿವಾರ ಸಂಜೆ ಕಾಂಪ್ಲೆಕ್ಸ್‌ನ ಹತ್ತಿರ ನೀವು ಹೋಗಿದ್ದರೆ ಅಲ್ಲಿರುವ ಟ್ರಾಫಿಕ್ ಗೋಜಲಿನ ಬಗ್ಗೆ ನಿಮಗೆ ಗೊತ್ತಿರುತ್ತದೆ. ಇನ್ನು ಈ ವ್ಯಾಪಾರ ಮಳಿಗೆಯನ್ನು ದೊಡ್ಡದಾಗಿಸಿ ಇಲ್ಲಿ ಮತ್ತೊಂದು ಮಂತ್ರಿ ಮಾಲ್ ರೀತಿಯ ಸಂಚಾರಿ ನರಕವನ್ನು ಸೃಷ್ಟಿಸಲು ಹೊರಟಂತಿದೆ. ಹಳೆಯ ನೆನಪುಗಳನ್ನು ಕಟ್ಟಿಕೊಂಡು ಸಾರ್ವಜನಿಕ ಮಳಿಗೆಗಳನ್ನು ಇದ್ದಂತೆಯೇ ಉಳಿಸಿಕೊಳ್ಳಿ ಎಂದು ಹೇಳಲಾಗುವುದಿಲ್ಲ.

 

ಆದರೆ ಸದಭಿರುಚಿಯ, ಗಾಳಿ, ಬೆಳಕು, ನೀರಿನಂಥ ಸೌಕರ್ಯ ಚೆನ್ನಾಗಿರುವ, ವೃದ್ಧರು, ಮಕ್ಕಳು ಮತ್ತು ಅಂಗವಿಕಲರ ಅಗತ್ಯಗಳ ಅರಿವಿರುವ ವಿನ್ಯಾಸವನ್ನು ಸಾರ್ವಜನಿಕ ಕಟ್ಟಡಗಳಲ್ಲಿ ನಿರೀಕ್ಷೆ ಮಾಡುವುದು ನಮ್ಮೆಲ್ಲರ ನ್ಯಾಯಯುತ ಹಕ್ಕು.ಹೊಸ ಕಾಂಪ್ಲೆಕ್ಸ್ ಕಟ್ಟಲು ಎರಡು ವರ್ಷ ಹಿಡಿಯುತ್ತದಂತೆ. ನಮ್ಮ ಊರಿನ ಸಾರ್ವಜನಿಕ ಪ್ರಾಜೆಕ್ಟ್‌ಗಳು ಯಾವುವೂ ಹೇಳಿದ ಸಮಯಕ್ಕೆ ಮುಗಿಯುವುದಿಲ್ಲ ಎಂದು ನಮ್ಮೆಲ್ಲರಿಗೂ ಗೊತ್ತು. ಅಂದರೆ ಮುಂದಿನ ಕೆಲವು ವರ್ಷಗಳಲ್ಲಿ ಜಯನಗರದ ಮಧ್ಯಭಾಗ ಹೇಗಿರಬಹುದು ಎಂದು ಊಹಿಸಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ!ಇನ್ನಷ್ಟು ಉಪ್ಪಿಟ್ಟು ಚಿಂತೆ

ಉಪ್ಪಿಟ್ಟು ಎಂಬ ಪದ ಬೆಂಗಳೂರಿನ ಹೋಟೆಲ್, ದರ್ಶಿನಿಗಳಿಂದ ನಾಪತ್ತೆಯಾದ ಬಗೆಗಿನ ನನ್ನ ಹೋದವಾರದ ಟಿಪ್ಪಣಿಗೆ ಪ್ರಶಾಂತ್ ಪಂಡಿತ್ ಎಂಬ ಸಿನಿಮಾ ಉತ್ಸಾಹಿ ಹೀಗೆ ಇಮೇಲ್ ಕಳಿಸಿದ್ದಾರೆ:  ~ನೀವು ಗುರುತಿಸಿದಂತೆ ನಮ್ಮ ಹೋಟೆಲುಗಳಲ್ಲಿ ಉಪ್ಪಿಟ್ಟು ಕಾಣೆಯಾಗಿರುವುದು ಮಾತ್ರವಲ್ಲ. ಇನ್ನೂ ಏನೇನೋ ವಿಚಿತ್ರ ತಿಂಡಿತಿನಿಸುಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ರೈಸ್ ಭಾತ್, ವೈಟ್ ರೈಸ್ ಮತ್ತು ಕಲರ್ ರೈಸ್.ಅನ್ನದಿಂದ ದಿನಕ್ಕೊಂದು ಬಗೆಯ ವ್ಯಂಜನ ಮಾಡುವ ಇವರಿಗೆ ಪುಳಿಯೋಗರೆ, ಬಿಸಿಬೇಳೆ ಭಾತ್ ಎಂದೆಲ್ಲ ಕರೆಯಲು ಸೋಮಾರಿತನವೋ ಏನೋ? ಅದಕ್ಕೇ ರೈಸ್ ಭಾತ್ ಎಂದೋ, ಕಲರ್ ರೈಸ್ ಎಂದೋ ಹೇಳುತ್ತಾರೆ. ಪುಣೆಯ ನನ್ನ ಸ್ನೇಹಿತರು ರೈಸ್ ಭಾತ್ ಎಂಬ ಹೆಸರು ಕೇಳಿ ವಿಚಿತ್ರವಾಗಿ ನೋಡುತ್ತಾ ಇದೇನು ಎಂದು ಕೇಳುತ್ತಾರೆ.ಹಾಗೆಯೇ ನಾನು ಮೊನ್ನೆ ಪುಣೆಗೆ ಹೋದಾಗ ಬೇರೆಯೇ ಅನುಭವವಾಯಿತು. ಅಲ್ಲಿನ ಹೋಟೆಲ್‌ಗಳಲ್ಲಿ ದೇವನಾಗರಿ ಲಿಪಿಯಲ್ಲಿ ಉಪ್ಪಿಟ್, ಶಿರಾ, ಮೆದುವಡಾ ಎಂದು ಬರೆದಿರುವುದು ಸಾಮಾನ್ಯವಾಗಿತ್ತು.

 

ಅಲ್ಲಿ ಪೋಹೆ (ನಮ್ಮ ಅವಲಕ್ಕಿ) ಎಷ್ಟು ಸಹಜವಾದ, ಚಿಕ್ಕ ಮತ್ತು ದೊಡ್ಡ ಹೊಟೆಲುಗಳಲ್ಲಿ ಸಿಗುವ ಖಾದ್ಯವೋ ಹಾಗೆಯೇ ಉಪ್ಪಿಟ್ಟು ಕೂಡ ಹೌದು. ಅಲ್ಲಿಯೂ ಉಪ್ಪಿಟ್ ಎಂದು, ಕೆಲವು ಕಡೆ ಉಪ್ಮಾ ಎಂದೂ ಹೇಳುವುದು ಸಾಮಾನ್ಯವಾಗಿತ್ತು. ನಮ್ಮ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಉಪ್ಪಿಟ್ಟು, ಶಿರಾ (ಸಜ್ಜಿಗೆ) ಎಂಬ ಹೆಸರುಗಳೇ ಚಾಲ್ತಿಯಲ್ಲಿದೆ.ಇನ್ನೊಂದು ಬೆಳವಣಿಗೆಯೆಂದರೆ ಪುಣೆಯಲ್ಲಿ ಸೆಕ್ಯೂರಿಟಿ ಗಾರ್ಡ್, ಹೋಟೆಲ್ ಮಾಣಿಗಳು, ಬಡಗಿ ಕೆಲಸ ಮಾಡುವ ಬಹುತೇಕರು ನಮ್ಮ ಬೆಳಗಾವಿ, ಬಿಜಾಪುರ, ಗುಲ್ಬರ್ಗಾದಿಂದ ವಲಸೆಹೋದ ಕನ್ನಡಿಗರು. ಅವರು ಕನ್ನಡದಲ್ಲಿ ಮಾತಾಡಿಕೊಳ್ಳುವುದು ಸಾಮಾನ್ಯ. ವಿಚಿತ್ರವೆಂದರೆ ಹೋಟೆಲ್ ಉದ್ಯಮದಲ್ಲಿರುವವರಲ್ಲಿ ಕುಂದಾಪುರ, ಮಂಗಳೂರು ಮೂಲದವರೇ ಹೆಚ್ಚು.ಇತ್ತೀಚೆಗೆ ಜಿ. ವೆಂಕಟಸುಬ್ಬಯ್ಯನವರು ಹೇಳಿದಂತೆ ಅಡುಗೆಮನೆಯಲ್ಲಿಯೇ ಕನ್ನಡ ಕಾಣೆಯಾಗುತ್ತಿದೆ. ಟೀವಿಯಲ್ಲಿ ಬರುವ ಅಡುಗೆ ಕಾರ್ಯಕ್ರಮಗಳನ್ನು ನೋಡಿದರೆ ಇದು ಇನ್ನೂ ಸ್ಪಷ್ಟವಾಗುತ್ತದೆ.~  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.