ಬುಧವಾರ, ಆಗಸ್ಟ್ 4, 2021
22 °C

ಜಯನಗರ ವಾಣಿಜ್ಯ ಸಂಕೀರ್ಣಕ್ಕೆ ಭೇಟಿ, ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಯನಗರ 4ನೇ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣದ ಕೊನೆಯ ಅಂತಸ್ತಿನ ತಾರಸಿ ಪ್ರದೇಶವನ್ನು  ‘ತಡಕಾ ಬಾರ್ ಮತ್ತು ರೆಸ್ಟೋರೆಂಟ್’ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿರುವ ಬಗ್ಗೆ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಜಯನಗರ ವಾಣಿಜ್ಯ ಸಂಕೀರ್ಣಕ್ಕೆ ಶನಿವಾರ ಭೇಟಿ ನೀಡಿ ತಪಾಸಣೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ತಾರಸಿಯ ಮೇಲೆ ‘ತಡಕಾ ಬಾರ್ ಮತ್ತು ರೆಸ್ಟೋರೆಂಟ್’ ನಡೆಸಲು ಪಾಲಿಕೆ ಅಧಿಕಾರಿಗಳು 2005ರಲ್ಲೇ ಅನುಮತಿ ನೀಡಿದ್ದಾರೆ. ತಾರಸಿಯ ಮೇಲೆ 3731.51 ಚದರ ಅಡಿ ಪ್ರದೇಶವಿದ್ದು, ಪ್ರತಿ ಚದರ ಅಡಿಗೆ 2 ರೂ. ಬಾಡಿಗೆ ಸಂಗ್ರಹಿಸಲಾಗುತ್ತಿದೆ. ತೆರೆದ ಜಾಗದಲ್ಲಿ ತಡಿಕೆಗಳಿಂದ ಬಾರ್ ಮತ್ತು ರೆಸ್ಟೋರೆಂಟ್ ನಿರ್ಮಿಸಲಾಗಿದೆ. ಕಡತಗಳನ್ನು ಪರಿಶೀಲಿಸಿ ಅಕ್ರಮವಾಗಿ ನಿರ್ಮಿಸಿರುವುದು ಕಂಡುಬಂದರೆ ಕ್ರಮ ಜರುಗಿಸಲಾಗುವುದು’ ಎಂದರು.

ಸಂಕೀರ್ಣದ ಒಳ ಭಾಗದ ಉದ್ಯಾನದಲ್ಲಿನ ತ್ಯಾಜ್ಯವನ್ನು ಗಮನಿಸಿದ ಅವರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ತೋಟಗಾರಿಕೆ ವಿಭಾಗಕ್ಕೆ ಪತ್ರ ಬರೆಯುವಂತೆ ಸೂಚಿಸಿದರು. ‘ಸಂಕೀರ್ಣದಲ್ಲಿನ ಮಳಿಗೆಗಳ ಮಾಲೀಕರು ಪಾದಚಾರಿ ಮಾರ್ಗಗಳಲ್ಲೇ ವಾಹನಗಳ ನಿಲುಗಡೆ ಮಾಡುವುದರಿಂದ ಮತ್ತು ವಸ್ತುಗಳನ್ನು ಅಲ್ಲೇ ಸಂಗ್ರಹಿಸಿಡುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ವಾಣಿಜ್ಯ ಸಂಕೀರ್ಣದ ಹೊರ ಭಾಗದ ರಸ್ತೆಗಳಲ್ಲಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಮಳಿಗೆಗಳನ್ನು ತೆರವುಗೊಳಿಸಲಾಗುವುದು’ ಎಂದರು. ಸಮಿತಿ ಸದಸ್ಯರಾದ ವೆಂಕಟೇಶ್ ಬಾಬು, ಕೆ.ಚಂದ್ರಶೇಖರ್, ಮಂಜುಳಾ ದೇವಿ, ವೀಣಾ ನಾಗರಾಜ್ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.