ಬುಧವಾರ, ಮೇ 25, 2022
31 °C

ಜಯಲಲಿತಾಗೆ 379 ಪ್ರಶ್ನೆಗಳ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯಲಲಿತಾಗೆ 379 ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಇಲ್ಲಿನ ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ಎದುರಿಸಿದರು. ಐದೂವರೆ ಗಂಟೆಗಳ ಅವಧಿಯಲ್ಲಿ ನಡೆದ ವಿಚಾರಣೆಯಲ್ಲಿ 379 ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದು, ಶುಕ್ರವಾರವೂ ವಿಚಾರಣೆ ಮುಂದುವರಿಯಲಿದೆ.ಬಿಗಿ ಭದ್ರತೆಯ ನಡುವೆ ನಡೆದ ವಿಚಾರಣೆಯಲ್ಲಿ ಜಯಲಲಿತಾ ಅವರೊಂದಿಗೆ ಸಹ ಆರೋಪಿಗಳಾಗಿರುವ ಸ್ನೇಹಿತೆ ಶಶಿಕಲಾ, ಸಾಕು ಮಗ ಸುಧಾಕರನ್ ಮತ್ತು ಇಳವರಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಆರೋಪಿಗಳು, ತಮಿಳುನಾಡಿನ ಜಾಗೃತ ಮತ್ತು ಭ್ರಷ್ಟಾಚಾರ ನಿಯಂತ್ರಣ ನಿರ್ದೇಶನಾಲಯದ (ಡಿವಿಎಸಿ) ಅಧಿಕಾರಿಗಳು ಹಾಗೂ ಎರಡೂ ಕಡೆಯ ವಕೀಲರಿಗೆ ಮಾತ್ರವೇ ನ್ಯಾಯಾಲಯದ ಒಳಕ್ಕೆ ಪ್ರವೇಶ ನೀಡಲಾಗಿತ್ತು.2001ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು 57 ಕೋಟಿ ರೂಪಾಯಿ ವೆಚ್ಚದಲ್ಲಿ ಲಂಡನ್ ನಗರದಲ್ಲಿ ಎರಡು ಹೋಟೆಲ್‌ಗಳನ್ನು ಖರೀದಿಸಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

 

1991ರಿಂದ 1996ರ ಅವಧಿಯಲ್ಲಿ ರೂ 97 ಕೋಟಿ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ ಮತ್ತೊಂದು ಮೊಕದ್ದಮೆ ದಾಖಲಾಗಿತ್ತು. ಜಯಲಲಿತಾ ಅವರ ಕೋರಿಕೆಯಂತೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು.ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಯಲಲಿತಾ ಅವರು ಈವರೆಗೂ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಅವರನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಮೊಕದ್ದಮೆಗಳ ಬಗ್ಗೆ ತನಿಖೆ ನಡೆಸಿದ್ದ ಡಿವಿಎಸಿ 1997ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಅದರ ಆಧಾರದಲ್ಲೇ ಜಯಲಲಿತಾ ಅವರನ್ನು ವಿಚಾರಣೆ ನಡೆಸಲಾಗಿದೆ.ಬಿಗಿ ಭದ್ರತೆಯಲ್ಲೇ ಆಗಮನ: ಚೆನ್ನೈನಿಂದ ವಿಶೇಷ ವಿಮಾನದಲ್ಲಿ ಬಂದ ಜಯಲಲಿತಾ ಅವರು ನಗರದ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಿಗ್ಗೆ 10.30ರ ಸುಮಾರಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಎದುರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಬಂದರು.ಒಂಬತ್ತು ಭದ್ರತಾ ವಾಹನಗಳ ಕಣ್ಗಾವಲಿನಲ್ಲಿ ಗುಂಡು ನಿರೋಧಕ ವಾಹನದಲ್ಲಿ ಬಂದ ಅವರೊಂದಿಗೆ ಶಶಿಕಲಾ ಮತ್ತು ಇಳವರಸಿ ಇದ್ದರು. ಸುಧಾಕರನ್ ತಡವಾಗಿ ಪ್ರತ್ಯೇಕ ವಾಹನದಲ್ಲಿ ನ್ಯಾಯಾಲಯಕ್ಕೆ ಬಂದರು.ಬೆಳಿಗ್ಗೆ 11 ಗಂಟೆಗೆ ಆರಂಭವಾದ ವಿಚಾರಣೆ ಮಧ್ಯಾಹ್ನ 2ರವರೆಗೆ ನಡೆಯಿತು. ಮತ್ತೆ 2.45ಕ್ಕೆ ಆರಂಭವಾದ ವಿಚಾರಣೆ ಸಂಜೆ 5.15ರವರೆಗೂ ನಡೆಯಿತು. ಈ ಎರಡೂ ಪ್ರಕರಣಗಳ ವಿಚಾರಣೆಗಾಗಿಯೇ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ.ಮಲ್ಲಿಕಾರ್ಜುನಯ್ಯ ಅವರು ಜಯಲಲಿತಾ ಅವರನ್ನು ಪ್ರಶ್ನಿಸಿದರು. ಡಿವಿಎಸಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ರಾಜ್ಯದ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ವಿಚಾರಣೆ ವೇಳೆ ಹಾಜರಿದ್ದರು.379 ಪ್ರಶ್ನೆಗಳಿಗೆ ಉತ್ತರ: ಈ ಅವಧಿಯಲ್ಲಿ 379 ಪ್ರಶ್ನೆಗಳನ್ನು ಜಯಲಲಿತಾ ಅವರಿಗೆ ಕೇಳಲಾಗಿದೆ. ಡಿವಿಎಸಿ ಸಲ್ಲಿಸಿರುವ ಆರೋಪಪಟ್ಟಿ ಆಧಾರದಲ್ಲಿ ಆಸ್ತಿ ಖರೀದಿ, ವಾಹನ, ಭೂಮಿ, ಕೃಷಿ ಭೂಮಿ ಖರೀದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಶೇಕಡ 90ರಷ್ಟು ಪ್ರಶ್ನೆಗಳಿಗೆ ಅವರು, `ನನಗೆ ಗೊತ್ತಿಲ್ಲ~ ಎಂಬ ಉತ್ತರ ನೀಡಿದ್ದಾರೆ. ಕೆಲ ಪ್ರಶ್ನೆಗಳಿಗೆ ದೀರ್ಘ ಉತ್ತರ ಒದಗಿಸಿದ್ದಾರೆ.ಗುರುವಾರ ನ್ಯಾಯಾಲಯದ ಕಲಾಪ ಮುಗಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಜಯಲಲಿತಾ ಪರ ವಕೀಲ ಬಿ.ಕುಮಾರ್, `ನ್ಯಾಯಾಲಯ ಕೇಳಿರುವ 379 ಪ್ರಶ್ನೆಗಳಿಗೂ ಜಯಲಲಿತಾ ಅವರು ಉತ್ತರಿಸಿದ್ದಾರೆ. ಕೆಲವು ಪ್ರಶ್ನೆಗಳಿಗೆ ಚುಟುಕಾಗಿ ಉತ್ತರ ನೀಡಿದ್ದರೆ, ಕೆಲವು ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದಾರೆ~ ಎಂದು ತಿಳಿಸಿದರು.`ನ್ಯಾಯಾಲಯದ ಕಲಾಪದಲ್ಲಿ ಅವರು ಸಂಯಮದಿಂದಲೇ ಭಾಗಿಯಾದರು. ಯಾವುದೇ ಹಂತದಲ್ಲೂ ಉದ್ವೇಗಕ್ಕೆ ಒಳಗಾಗಿಲ್ಲ. ಪ್ರಶ್ನೆಗಳನ್ನು ಎದುರಿಸುವ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳಲಿಲ್ಲ. ನ್ಯಾಯಾಲಯಕ್ಕೆ ಸಮರ್ಪಕವಾಗಿ ಉತ್ತರ ಒದಗಿಸಿದ್ದಾರೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇನ್ನೂ 200 ಪ್ರಶ್ನೆ: ಆರೋಪ ಪಟ್ಟಿಯಲ್ಲಿರುವ ಅಂಶಗಳನ್ನು ಆಧರಿಸಿ ಸಿದ್ಧಪಡಿಸಿರುವ ಇನ್ನೂ 200 ಪ್ರಶ್ನೆಗಳಿಗೆ ಜಯಲಲಿತಾ ಅವರು ನ್ಯಾಯಾಲಯಕ್ಕೆ ಉತ್ತರ ನೀಡಬೇಕಿದೆ. ಶುಕ್ರವಾರ ನಡೆಯುವ ವಿಚಾರಣೆಯ ವೇಳೆ 200 ಪ್ರಶ್ನೆಗಳನ್ನೂ ಕೇಳುವ ಸಾಧ್ಯತೆ ಇದೆ.ಈ ಪ್ರಕರಣದ ಇತರೆ ಆರೋಪಿಗಳಾಗಿರುವ ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರನ್ನೂ ನ್ಯಾಯಾಲಯ ಪ್ರಶ್ನಿಸಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 259 ಸಾಕ್ಷಿದಾರರನ್ನು ಡಿವಿಎಸಿ ಆರೋಪಪಟ್ಟಿಯಲ್ಲಿ ಹೆಸರಿಸಿದೆ. ಈ ಪೈಕಿ 92 ಸಾಕ್ಷಿಗಳ ವಿಚಾರಣೆ ಮುಗಿದಿದೆ. ಇನ್ನೂ 167 ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ದಿನದ ವಿಚಾರಣೆ ಮುಗಿದ ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಜಯಲಲಿತಾ ಅವರು ಚೆನ್ನೈಗೆ ತೆರಳಿದರು.ಬಿಗಿ ಭದ್ರತೆ: ಜಯಲಲಿತಾ ಅವರ ಭದ್ರತೆಗೆಂದೇ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಮತ್ತು ಸಂಜೆ ಅವರ ಪ್ರಯಾಣದ ಅವಧಿಯಲ್ಲಿ ಆ ಮಾರ್ಗದ ರಸ್ತೆಗಳಲ್ಲಿ ಸಂಚಾರವನ್ನು ಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ದಾರಿಯುದ್ದಕ್ಕೂ ಸಶಸ್ತ್ರ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಎದುರಿನ ವಿಶೇಷ ನ್ಯಾಯಾಲಯ ತಲುಪುವ ಮಾರ್ಗದಲ್ಲಿ ಒಂದು ಕಿಲೋಮೀಟರ್ ದೂರದಲ್ಲೇ ಪೊಲೀಸರು ತಡೆಗೋಡೆ ನಿರ್ಮಿಸಿ, ಸಾರ್ವಜನಿಕರ ಪ್ರವೇಶ ನಿಯಂತ್ರಿಸಿದ್ದರು. ನ್ಯಾಯಾಲಯದ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.ನಗರದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಭದ್ರತೆಯ ನೇತೃತ್ವ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.ಪೊಲೀಸ್ ಕಮಿಷನರ್ ಕೆ.ಜ್ಯೋತಿಪ್ರಕಾಶ್ ಮಿರ್ಜಿ ಮಧ್ಯಾಹ್ನದ ನಂತರ ಅಲ್ಲೇ ಇದ್ದು, ಭದ್ರತೆಯ ಮೇಲುಸ್ತುವಾರಿ ನಿರ್ವಹಿಸಿದರು.ತಮಿಳುನಾಡು ಪೊಲೀಸರು ಕೂಡ ವಿಶೇಷ ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

25 ಸದಸ್ಯರ ಅತಿಗಣ್ಯ ವ್ಯಕ್ತಿಗಳ ಭದ್ರತಾ ವಿಭಾಗದ ಪೊಲೀಸರು ಬೆಳಿಗ್ಗೆಯೇ ನ್ಯಾಯಾಲಯಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.