ಜಯಲಲಿತಾ ಅಪರಾಧಿಯಲ್ಲ

7
ವಿಶೇಷ ನ್ಯಾಯಾಲಯದ ಆದೇಶ ವಜಾಗೊಳಿಸಿದ ಹೈಕೋರ್ಟ್‌ *ಕೋರ್ಟ್‌ಹಾಲ್‌ನಲ್ಲಿ ಜೈಕಾರ ಹಾಕಿದ ಜಯಾ ಪರ ವಕೀಲರು

ಜಯಲಲಿತಾ ಅಪರಾಧಿಯಲ್ಲ

Published:
Updated:

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರನ್ನು ಕರ್ನಾಟಕ ಹೈಕೋರ್ಟ್ ದೋಷಮುಕ್ತಗೊಳಿಸಿದೆ.ಜಯಾ ಮತ್ತು ಇತರ ಮೂವರು ಅಪರಾಧಿಗಳ ಮೇಲ್ಮನವಿ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಸೋಮವಾರ ಬೆಳಗ್ಗೆ ಪ್ರಕಟಿಸಿದರು.  ‘ಒಬ್ಬ ವ್ಯಕ್ತಿಯು ತನ್ನ ಒಟ್ಟು ಆದಾಯದಲ್ಲಿ ಶೇ 10ರಿಂದ 20ರವರೆಗೆ ಅಕ್ರಮ ಆಸ್ತಿ ಹೊಂದಿದ್ದರೆ ಅದನ್ನು ಮಾನ್ಯ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳುತ್ತದೆ. ಹೀಗಿರುವಾಗ ಈ ಪ್ರಕರಣದಲ್ಲಿ ಜಯಾ ಅವರು ಒಟ್ಟಾರೆ ಶೇ 8.12ರಷ್ಟು ಮಾತ್ರವೇ ಅಕ್ರಮ ಆಸ್ತಿ ಹೊಂದಿರುವುದು ಕಂಡು ಬಂದಿದೆ. ಆದ್ದರಿಂದ ಮುಖ್ಯ ಆರೋಪಿ ವಿರುದ್ಧದ ಆರೋಪಗಳು ಉತ್ಪ್ರೇಕ್ಷೆಯಿಂದ ಕೂಡಿವೆ.   ಎಂದು ಆದೇಶದಲ್ಲಿ ಹೇಳಲಾಗಿದೆ.ತಮ್ಮ ಈ ಆದೇಶಕ್ಕೆ ನ್ಯಾಯಮೂರ್ತಿಗಳು ಕೃಷ್ಣಾನಂದ ಮತ್ತು ಮಧ್ಯಪ್ರದೇಶದ ನಡುವಿನ ಸುಪ್ರೀಂ ಕೋರ್ಟ್‌ ತೀರ್ಪನ್ನು  ಉಲ್ಲೇಖಿಸಿದ್ದಾರೆ.‘ಒಬ್ಬ ವ್ಯಕ್ತಿ ಶೇ 10 ರಷ್ಟು ಅಕ್ರಮ ಆಸ್ತಿ ಹೊಂದಿದ್ದರೆ ಅದಕ್ಕೆ ಮಾನ್ಯತೆ ನೀಡಲಾಗಿದೆ. ಇದೇ ರೀತಿ ಆಂಧ್ರಪ್ರದೇಶ ಸರ್ಕಾರದ ಸುತ್ತೋಲೆಯೊಂದರ ಅನುಸಾರ ಶೇ 20 ಅಕ್ರಮ ಆಸ್ತಿ ಕಾನೂನು ಬಾಹಿರವಲ್ಲ ಎಂಬ ಅಂಶ ಇಲ್ಲಿ ಗಮನಾರ್ಹ’ ಎಂದು ಆದೇಶದಲ್ಲಿ ಕಾಣಿಸಲಾಗಿದೆ.‘ಜಯಾ ಅವರ ಆದಾಯ ಲೆಕ್ಕ ಹಾಕುವಾಗ ಕಂಪೆನಿಗಳು, ಕೃಷಿ ಮತ್ತು ಇತರ ಆದಾಯದ ಮೂಲಗಳನ್ನು ಮಿಶ್ರಣ ಮಾಡಲಾಗಿದೆ. ವಡನಾಡು, ಗ್ರೇಪ್ಸ್‌ ಗಾರ್ಡನ್‌ನಂತಹ ಆಸ್ತಿಗಳ ಆದಾಯವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಯೇ ಇಲ್ಲ. ಎಲ್ಲವನ್ನೂ ಸುಮ್ಮನೇ ಒಂದು ಅಂದಾಜಿನ ಲೆಕ್ಕಾಚಾರದಲ್ಲಿ ಅಕ್ರಮ ಆಸ್ತಿ ಎಂದು ಗುರುತಿಸಲಾಗಿದೆ. ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ವಿಶೇಷ ವಿಚಾರಣಾ ನ್ಯಾಯಾಲಯ ಹಾಗೂ ಅದರ ನಿಲುವುಗಳು ಕಾನೂನು ಪ್ರಕಾರ ಊರ್ಜಿತವಲ್ಲ. ಹೀಗಾಗಿ ಅರ್ಜಿದಾರರ ಕ್ರಿಮಿನಲ್‌ ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕರಿಸಿದ್ದೇನೆ ಹಾಗೂ ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ  ನೀಡಿದ ದಂಡ ಮತ್ತು ಶಿಕ್ಷೆಯನ್ನು  ಅನೂರ್ಜಿತಗೊಳಿಸುತ್ತೇನೆ’ ಎಂದು ವಿವರಿಸಲಾಗಿದೆ.‘ಆರೋಪಿ  ನಿಗದಿತ ಪ್ರಮಾಣ ಮೀರಿ ಆದಾಯ ಹೊಂದಿದ್ದಾರೆ ಎಂಬ ದೂರಿನಲ್ಲಿ ಯಾವುದೇ ಹುರುಳಿಲ್ಲ. 2,3 ಮತ್ತು 4ನೇ ಆರೋಪಿಗಳು ಒಂದನೇ ಆರೋಪಿ ಜೊತೆಗೆ ವಾಸಿಸುತ್ತಿದ್ದರು ಅಂದ ಮಾತ್ರಕ್ಕ ಇವರೆಲ್ಲಾ ಸೇರಿ ಕೂಟ ರಚಿಸಿಕೊಂಡು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ’ ಎಂದು ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ. ‘2, 3 ಮತ್ತು 4ನೇ ಆರೋಪಿಗಳು ಸ್ಥಿರಾಸ್ತಿಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದು ಖರೀದಿಸಿದ್ದಾರೆ.  ಇವುಗಳಿಗೆ ಕಾಲಕಾಲಕ್ಕೆ ಸೂಕ್ತ ಆದಾಯ ತೆರಿಗೆಯನ್ನೂ ಪಾವತಿಸಲಾಗಿದೆ. ಆದ್ದರಿಂದ ಇವನ್ನೆಲ್ಲಾ ಅಕ್ರಮ ಆಸ್ತಿ ಗಳಿಕೆ ಎಂದು ಪರಿಗಣಿಸಲು ಕಷ್ಟವಾಗುತ್ತದೆ.  ಹೀಗಾಗಿ ಚರ ಮತ್ತು ಸ್ಥಿರಾಸ್ತಿಗಳ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆಯ ದೂರುಗಳಲ್ಲಿ  ಯಾವುದೇ ಕಾನೂನು ಮಾನ್ಯತೆ ಕಾಣುತ್ತಿಲ್ಲ’ ಎಂದು  ವಿವರಿಸಲಾಗಿದೆ.‘ವಿಚಾರಣಾ ನ್ಯಾಯಾಲಯವು ಆದಾಯ ತೆರಿಗೆ ಪ್ರಕ್ರಿಯೆಗಳನ್ನು ಕನಿಷ್ಠ ಮಟ್ಟಕ್ಕೂ ಪರಿಗಣಿಸಿಲ್ಲ. ಅಷ್ಟೇಕೆ ಈ ಸಂಗತಿಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನೂ  ಪುರಸ್ಕರಿಸಿಲ್ಲ. ಸಾಕ್ಷಿಗಳು ಒಂದೊಂದು ಹಂತದಲ್ಲಿ ಒಂದೊಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಆರೋಪಗಳು ವಾಸ್ತವಾಂಶಗಳಿಗೆ ದೂರವಾಗಿವೆ’ ಎಂದು ಹೇಳಲಾಗಿದೆ.

***

ನ್ಯಾಯಕ್ಕೆ ನ್ಯಾಯ ಸಿಗಲಿಲ್ಲ...

‘ಓ ದೇವರೇ..! ಏನು ಮಾಡುವುದು... ? ಈಗ ಒಂದು ಟೆಸ್ಟ್‌ ಮ್ಯಾಚ್‌ ಮುಗಿದಿದೆ. ಇನ್ನೊಂದು ಫೈನಲ್‌ ಮ್ಯಾಚ್‌ ಬಾಕಿ ಉಳಿದಿದೆ. ನ್ಯಾಯಕ್ಕೆ ನ್ಯಾಯ ಸಿಗಲಿಲ್ಲ. ಸದ್ಯಕ್ಕೆ ಮೋಡ ಕವಿದಿದೆ. ಸತ್ಯ ಖಂಡಿತಾ ಹೊರಬರುತ್ತದೆ.’

ಬೆಂಗಳೂರು ಹೈಕೋರ್ಟ್‌ನಲ್ಲಿ ತಮ್ಮ ಪ್ರತಿನಿಧಿಯಾಗಿರುವ ವಕೀಲ ಎಚ್.ಪವನಚಂದ್ರಶೆಟ್ಟಿ ಅವರಿಗೆ ಡಾ.ಸುಬ್ರಮಣಿಯನ್‌ ಸ್ವಾಮಿ ಕಳುಹಿಸಿದ ಸಂದೇಶ.ನಾನೀಗ ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಅಪ್ಪಟ ಚಿನ್ನ. ಈ ತೀರ್ಪು  ನನ್ನ ಮೇಲಿನ ಎಲ್ಲ ಆರೋಪ ಅಳಿಸಿಹಾಕಿದೆ.

ಜಯಲಲಿತಾ, ಎಐಎಡಿಎಂಕೆ ಮುಖ್ಯಸ್ಥೆ

ಎಲ್ಲ ನ್ಯಾಯಾಲಯಗಳಿಗಿಂತ ದೊಡ್ಡ ನ್ಯಾಯಾಲಯವೊಂದಿದೆ.  ಅದೇ ನಮ್ಮ ಆತ್ಮಸಾಕ್ಷಿ.

ಕರುಣಾನಿಧಿಡಿಎಂಕೆ ಮುಖ್ಯಸ್ಥಮೋದಿ ಅಭಿನಂದನೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಜಯಲಲಿತಾ ಅವರನ್ನು ‍ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

ಜಯಾ ಅವರೊಂದಿಗೆ ಮೋದಿ ದೂರವಾಣಿ ಮೂಲಕ ಮಾತನಾಡಿ ಅಭಿನಂದಿಸಿದ್ದಾರೆ ಎಂದು  ಎಐಎಡಿಎಂಕೆಯು, ಚೆನ್ನೈನಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry