ಮಂಗಳವಾರ, ಮೇ 18, 2021
22 °C

ಜಯಲಲಿತಾ ಖುದ್ದು ಹಾಜರಾತಿ: ವಿನಾಯ್ತಿಗೆ ಸುಪ್ರೀಂ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್ಎಸ್): ಅಸಮಪ್ರಮಾಣದ ಆಸ್ತಿಪಾಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯದಲ್ಲಿ ಹಾಜರಾಗುವಂತೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ನಿರ್ದೇಶಿಸಿದೆ.ಜಯಲಲಿತಾ ಅವರು ಅಕ್ಟೋಬರ್ 20ರಂದು ನ್ಯಾಯಾಲಯದ ಮುಂದೆ ಹಾಜರಾಗುವರು.1991ರಿಂದ 1996ರವರೆಗಿನ ಅವಧಿಯಲ್ಲಿ ತಮ್ಮ ಆದಾಯ ಮೂಲಗಳಿಗೆ ಹೊಂದಿಕೆಯಾಗದಂತಹ ಅಸಮ ಪ್ರಮಾಣದ ಸಂಪತ್ತನ್ನು ಶೇಖರಿಸಿದ್ದರು ಎಂಬ ಆಪಾದನೆಯನ್ನು ಜಯಲಲಿತಾ ಎದುರಿಸುತ್ತಿದ್ದಾರೆ.ಈ ಪ್ರಕರಣವನ್ನು ಚೆನ್ನೈಯಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ವಿಚಾರಣಾ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಬೇಕು ಎಂದು ಜಯಲಲಿತಾ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದರು.ತಾವು ಪ್ರಸ್ತುತ ಮುಖ್ಯಮಂತ್ರಿಯಾಗಿರುವುದರಿಂದ ಭದ್ರತಾ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ತಮಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಬೇಕು ಎಂದು ಜಯಲಲಿತಾ ಮನವಿ ಮಾಡಿದ್ದರು.ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೂ ತಮ್ಮ ಹೇಳಿಕೆಯನ್ನು ದಾಖಲು ಮಾಡಬಹುದು ಎಂದೂ ಒಂದು ಹಂತದಲ್ಲಿ ಜಯಲಲಿತಾ ವಾದಿಸಿದ್ದರು.ನ್ಯಾಯಾಧೀಶರ ಮುಂದೆ ಜಯಲಲಿತಾ ಅವರು ಹಾಜರಾದಾಗ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೂ ಸೂಚಿಸಿದೆ.ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ್ತು ನ್ಯಾಯಮೂರ್ತಿ ದೀಪಕ್ ವರ್ಮಾ ಅವರನ್ನು ಒಳಗೊಂಡ ಪೀಠವು ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೂ ಸೂಚನೆ ನೀಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.