ಜಯಲಲಿತಾ ಭದ್ರತೆಗೆ ಸಿಗದ ಭರವಸೆ...

7

ಜಯಲಲಿತಾ ಭದ್ರತೆಗೆ ಸಿಗದ ಭರವಸೆ...

Published:
Updated:

ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ತಿಂಗಳ 20ರಂದು ಬೆಂಗಳೂರಿನ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಬೇಕಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡುವಲ್ಲಿ ವಿಫಲವಾಗಿರುವ ಕರ್ನಾಟಕ ಸರ್ಕಾರದ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.ಜಯಲಲಿತಾ ಅವರು ಖುದ್ದಾಗಿ ಹಾಜರಾಗಬೇಕು ಎಂದು ಸೆಪ್ಟೆಂಬರ್ ಆರಂಭದಲ್ಲಿಯೇ ಆದೇಶಿಸಲಾಗಿದೆ. ಪ್ರಕರಣದ ತ್ವರಿತ  ವಿಲೇವಾರಿಗೆ ಹಾಜರಾತಿ ಅಗತ್ಯವೆನ್ನುವುದು ಗೊತ್ತು. ಅದೇ ರೀತಿಯಲ್ಲಿ ಅವರ ಸುರಕ್ಷತೆಯೂ ಅಷ್ಟೆ ಮಹತ್ವದ್ದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.ಜಯಲಲಿತಾ ಅವರಿಗೆ ಎನ್‌ಎಸ್‌ಜಿ ಭದ್ರತೆ ಒದಗಿಸಲಾಗಿದ್ದು, ಕರ್ನಾಟಕದಲ್ಲೂ ವಿಶೇಷ ಭದ್ರತೆ ಒದಗಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ್ತು ದೀಪಕ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ಕರ್ನಾಟಕ ಸರ್ಕಾರದ ಪರ ವಕೀಲರಾದ ಅನಿತಾ ಶೆಣೈ ಅವರಿಗೆ ತಿಳಿಸಿತು.ಜಯಲಲಿತಾ ಅವರಿಗೆ ಭದ್ರತೆ ಒದಗಿಸುವ ವ್ಯವಸ್ಥೆ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಮುಖ್ಯ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾ ನಿರ್ದೇಶಕರಿಂದ ತಿಳಿದುಕೊಂಡು ಬುಧವಾರ 10.30ಕ್ಕೆ ಈ ನ್ಯಾಯಪೀಠಕ್ಕೆ ತಿಳಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.ಇದುವರೆಗೆ ಭದ್ರತಾ ವ್ಯವಸ್ಥೆಯ ಬಗ್ಗೆ ಸ್ಪಷ್ಟ ಮಾಹಿತಿ ದೊರಕದಿರುವುದರಿಂದ ಜಯಲಲಿತಾ ಅವರು ಈ ತಿಂಗಳ 20ರಂದು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಲು ಕಷ್ಟವಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ಜಯಲಲಿತಾ ಮುಂದುವರಿಕೆ ಪ್ರಶ್ನಿಸಿದ್ದ ಅರ್ಜಿ ವಜಾ: ಆದಾಯ ಮೀರಿ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿ ಅ.21ರಂದು ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗಲಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಪಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂಕೋರ್ಟ್ ವಜಾ ಮಾಡಿದೆ.`ಇದೊಂದು ಔಚಿತ್ಯರಹಿತ ದಾವೆ. ಈ ಸಂಬಂಧ ಆಗುವ ವೆಚ್ಚವನ್ನು ಅರ್ಜಿದಾರರೇ ಭರಿಸಬೇಕೆಂದು ನಿರ್ದೇಶಿಸಬಹುದಾಗಿದೆ~ ಎಂದು ನ್ಯಾಯಮೂರ್ತಿಗಳಾದ ದಳವೀರ್ ಭಂಡಾರಿ ಮ್ತು ದೀಪಕ್ ಮಿಶ್ರಾ ಹೇಳಿದರು. ವಕೀಲ ಸತೀಶ್ ಗಲ್ಲ, ಐ.ವೆಂಕಟ ಹರಿಕೃಷ್ಣ ಮತ್ತು ಕೆ.ಆರ್.ರಾಮಸ್ವಾಮಿ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು.ಜಯಲಲಿತಾ ಸರ್ಕಾರದ ಮುಖ್ಯಸ್ಥರಾಗಿದ್ದುಕೊಂಡು ವಿಚಾರಣೆಯ ಮೇಲೆ ಪ್ರಭಾವ ಬೀರಬಹುದು ಎಂದು ಅವರು ದೂರಿದ್ದರು.`ಇಂತಹ ಊಹೆಗಳನ್ನು ಆಧರಿಸಿ ಹೇಗಾದರೂ ಪಿಐಎಲ್ ಹಾಕುತ್ತೀರಿ?~ ಎಂದು ನ್ಯಾಯಮೂರ್ತಿಗಳು ಕೇಳಿದರುಕೇಂದ್ರದ ವಿರುದ್ಧ ಗುಡುಗು

ಚೆನ್ನೈ (ಪಿಟಿಐ):
ಕೂಡುಂಕುಳಂ ಅಣು ಸ್ಥಾವರ ನಿರ್ಮಾಣವನ್ನು ಕೈಬಿಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ತೀರ್ಮಾನಕೈಗೊಳ್ಳಲು ವಿಫಲವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತೆ ಗುಡುಗಿದ್ದಾರೆ.ಸ್ಥಳೀಯರ ಕಳವಳ, ಆತಂಕಕ್ಕೆ ಕೇಂದ್ರ ಸೂಕ್ತ ಸಮಾಧಾನ ನೀಡುವವರೆಗೆ ವಿವಾದಾತ್ಮಕವಾದ ಈ ಅಣು ಸ್ಥಾವರ ಘಟಕ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂಬ ನಿಲುವನ್ನು ತಮ್ಮ ಸರ್ಕಾರ ಹೊಂದಿದೆ ಎಂದು ಅವರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸುರಕ್ಷತೆ ಬಗ್ಗೆ ಇಲ್ಲಿನ ಜನರು ದಿಗಿಲುಗೊಂಡಿದ್ದಾರೆ. ಅಣು ಸ್ಥಾವರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.  ಆದರೆ, ಕೇಂದ್ರ ಸರ್ಕಾರ ಇದ್ಯಾವುದನ್ನು ಲೆಕ್ಕಿಸಿದೆ ಭಾರತ- ರಷ್ಯ ಜಂಟಿ ಯೋಜನೆಯಾದ ಈ ಅಣು ಸ್ಥಾವರ ನಿರ್ಮಾಣ ಕಾರ್ಯವನ್ನು ಮುಂದುವರಿಸಿದೆ ಅವರು ತೀಕ್ಷ್ಣವಾಗಿ ಟೀಕಿಸಿದ್ದಾರೆ.ಈ ಅಣು ಸ್ಥಾವರ ಕುರಿತಂತೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಸಚಿವ ವಿ. ನಾರಾಯಣಸ್ವಾಮಿ ನೀಡಿದ ಹೇಳಿಕೆಗೆ ಜಯಲಲಿತಾ ತೀವ್ರ  ಆಕ್ಷೇಪ ವ್ಯಕ್ತಪಡಿಸಿದ್ದಾರೆ.`ಕೂಡುಂಕುಳಂ ಅಣು ಸ್ಥಾವರ ಕುರಿತು ಸ್ಥಳೀಯರ ಆತಂಕವನ್ನು ನಿವಾರಿಸಲು ತಜ್ಞರ ಸಮಿತಿಯೊಂದನ್ನು ಅಲ್ಲಿಗೆ ಕಳುಹಿಸುವುದಾಗಿ  ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ. ಆದರೆ,  ಈ ಸಮಿತಿ ರಚಿಸುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ, ಅದಕ್ಕಾಗಿ ಕಾಯುತ್ತಿದ್ದೇವೆ. ಆದ್ದರಿಂದ ವಿಳಂಬವಾಗುತ್ತಿದೆ~ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದ್ದರು.ಈ ಹೇಳಿಕೆಗೆ ಕೆಂಡಮಂಡಲವಾಗಿರುವ ಜಯಲಲಿತಾ, `ಕೇಂದ್ರ ಉದ್ದೇಶಪೂರ್ವಕವಾಗಿಯೇ ರಾಜ್ಯ ಸರ್ಕಾರವನ್ನು ದೂಷಿಸುತ್ತಿದೆ. ಇದನ್ನು ನೋಡಿದರೆ ಕೇಂದ್ರಕ್ಕೆ ಈ ವಿಚಾರದಲ್ಲಿ ಆಸ್ತಿಯೇ ಇಲ್ಲ ಎಂಬ ಶಂಕೆ ಮೂಡುತ್ತದೆ~ ಎಂದಿದ್ದಾರೆ.`ಕೂಡುಂಕೂಳಂನಲ್ಲಿ ಪ್ರತಿಭಟನಾಕಾರರನ್ನು ಭೇಟಿ ಮಾಡಲು ಪ್ರಧಾನಿ ಅವರ ಪ್ರತಿನಿಧಿಯಾಗಿ ಆಗಮಿಸಿದ್ದ ಸಚಿವ ನಾರಾಯಣಸ್ವಾಮಿ ಸ್ಥಳೀಯರ ಕಳವಳವನ್ನು ದೂರ ಮಾಡುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ~ ಎಂದು ಅವರು ದೂರಿದ್ದಾರೆ. ಕಲಾಂ ಮಾರ್ಗದರ್ಶನ ಪಡೆಯಲು ಇಚ್ಛಿಸಿದ ಕೇಂದ್ರ:ಪ್ರಧಾನಿ ಮನಮೋಹನ್ ಸಿಂಗ್ ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಕೂಡುಂಕುಳಂ ಅಣು ಸ್ಥಾವರ ಕುರಿತಂತೆ ತಜ್ಞರ ಸಮಿತಿ ರಚಿಸುವ ಸಂಭವವಿದೆ. ಈ ನಿಟ್ಟಿನಲ್ಲಿ ಮಾಜಿ ರಾಷ್ಟ್ರಪತಿ ಮತ್ತು ಅಣು ವಿಜ್ಞಾನಿಯೂ ಆಗಿರುವ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾರ್ಗದರ್ಶನ ಪಡೆಯಲು ಕೇಂದ್ರ ಇಚ್ಛಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry