ಜಯಾ ಬೆಂಬಲಕ್ಕೆ ನಾಯಕರ ದಂಡು

7

ಜಯಾ ಬೆಂಬಲಕ್ಕೆ ನಾಯಕರ ದಂಡು

Published:
Updated:

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಗುರುವಾರ ಮೊದಲ ಬಾರಿಗೆ ವಿಚಾರಣೆ ಎದುರಿಸಿದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಸಚಿವರು, ಶಾಸಕರು, ಸಂಸದರು ಬೆಂಗಾವಲಾಗಿದ್ದರು. ಎಐಎಡಿಎಂಕೆಯ ನಾಯಕಗಣವೇ ಗುರುವಾರ ಪರಪ್ಪನ ಅಗ್ರಹಾರದಲ್ಲಿ ನೆರೆದಿತ್ತು.ಹಣಕಾಸು ಸಚಿವ ಪನ್ನೀರ್ ಸೆಲ್ವಂ ಸೇರಿದಂತೆ ಕೆಲ ಸಚಿವರು ಜಯಲಲಿತಾ ಅವರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ್ದರು. ಕೃಷಿ ಸಚಿವ ಸೆಂಗೋಟೆಯನ್, ಉನ್ನತ ಶಿಕ್ಷಣ ಸಚಿವ ಪಳನಿಯಪ್ಪನ್ ಸೇರಿದಂತೆ ಏಳು ಸಚಿವರು, 40ಕ್ಕೂ ಹೆಚ್ಚು ಶಾಸಕರು ಮತ್ತು ಆರು ಸಂಸದರು ತಮ್ಮ ನಾಯಕಿಗೆ ಬೆಂಬಲ ಸೂಚಿಸಲು ವಿಶೇಷ ನ್ಯಾಯಾಲಯಕ್ಕೆ ಬಂದಿದ್ದರು.ಸಚಿವರು, ಶಾಸಕರು ಮತ್ತು ಸಂಸದರಿಗೆ ನ್ಯಾಯಾಲಯದ ಒಳಕ್ಕೆ ಪ್ರವೇಶ ನೀಡಿರಲಿಲ್ಲ. ನ್ಯಾಯಾಲಯದ ಆವರಣದೊಳಗೆ ಅವರು ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲಿಯೇ ತಂಗಿದ್ದರು. ನ್ಯಾಯಾಲಯದ ಕಲಾಪ ಅಂತ್ಯಗೊಳ್ಳುತ್ತಿದ್ದಂತೆ ಎಲ್ಲರೂ ಅಲ್ಲಿಂದ ವಾಪಸಾದರು.ತಮಿಳುನಾಡಿನ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಹೊರತುಪಡಿಸಿ ಉಳಿದ ಸಚಿವರು, ಶಾಸಕರು ಶುಕ್ರವಾರ ಬರಲಾರರು ಎಂದು ಮೂಲಗಳು ತಿಳಿಸಿವೆ.ನ್ಯಾಯಾಲಯದ ಕಲಾಪ ವೀಕ್ಷಿಸಿಲೆಂದೇ ತಮಿಳುನಾಡಿನ ವಿವಿಧೆಡೆಗಳಿಂದ ವಕೀಲರು ಬಂದಿದ್ದರು. ಆದರೆ, ಕೆಲವೇ ವಕೀಲರಿಗೆ ಮಾತ್ರ ನ್ಯಾಯಾಲಯದ ಆವರಣಕ್ಕೆ ಪ್ರವೇಶ ನೀಡಲಾಗಿತ್ತು. ಉಳಿದವರಿಗೆ ಅವಕಾಶ ನಿರಾಕರಿಸಲಾಯಿತು. ವಕೀಲರು ಪದೇ ಪದೇ ಒಳಹೋಗಲು ಪ್ರಯತ್ನಿಸಿದರೂ, ಪೊಲೀಸರು ಮಣಿಯಲಿಲ್ಲ.ದಾರಿಯುದ್ದಕ್ಕೂ ಕಾದಿದ್ದರು: ತಮಿಳುನಾಡಿನಿಂದ ಬರುತ್ತಿದ್ದ ಖಾಸಗಿ ವಾಹನಗಳನ್ನು ಹೊಸೂರು ಗಡಿ ಭಾಗದಲ್ಲೇ ತಡೆದು ನಿಲ್ಲಿಸಲಾಗುತ್ತಿತ್ತು. ಪರಿಣಾಮವಾಗಿ ಶಾಸಕರೂ ಸೇರಿದಂತೆ ಕೆಲವರು ಆಟೊದಲ್ಲೇ ಪ್ರಯಾಣಿಸಿ, ಪರಪ್ಪನ ಅಗ್ರಹಾರ ತಲುಪಬೇಕಾಗಿತ್ತು. ಆದರೂ, ಬೇರೆ ಮಾರ್ಗಗಳಲ್ಲಿ ನಗರಕ್ಕೆ ಬಂದಿದ್ದ ನೂರಾರು ಮಂದಿ ಪರಪ್ಪನ ಅಗ್ರಹಾರದಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದುದ್ದಕ್ಕೂ ದಿನವಿಡೀ ಕಾದು ಕುಳಿತಿದ್ದರು.ಎಐಎಡಿಎಂಕೆ ಮುಖಂಡರು, ಜಯಲಲಿತಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾದಿದ್ದರು. ನಗರದ ವಿವಿಧ ಕಡೆಗಳಿಂದ ಬಂದಿದ್ದ ಹಲವರೂ ಜಯಲಲಿತಾ ದರ್ಶನಕ್ಕಾಗಿ ಕಾದರು.ಪ್ರತಿಭಟನೆಯ ಕಾವು: ನೆರೆ ರಾಜ್ಯದ ಮುಖ್ಯಮಂತ್ರಿಗೆ ಭದ್ರತೆ ಒದಗಿಸಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಅವರ ಪ್ರಯಾಣದ ಅವಧಿಯಲ್ಲಿ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನದಂತಹ ಬೆಳವಣಿಗೆಗಳು ನಡೆಯದಂತೆ ತಡೆಯಲು ಸನ್ನದ್ಧರಾಗಿದ್ದರು. ಆದರೆ, ಜಯಲಲಿತಾ ಅವರು ನ್ಯಾಯಾಲಯದ ಆವರಣ ಪ್ರವೇಶಿಸಿದ ಬಳಿಕ ಸಮತಾ ಸೈನಿಕ ದಳದ ಸದಸ್ಯರು ನಾಗನಾಥಪುರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಇತ್ತೀಚೆಗೆ ಪರಮಕುಡಿಯಲ್ಲಿ ದಲಿತರ ಮೇಲೆ ನಡೆದ ಗೋಲಿಬಾರ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಜಯಲಲಿತಾ ವಿರುದ್ಧ ಘೋಷಣೆಗಳನ್ನೂ ಕೂಗಿದರು. ನ್ಯಾಯಾಲಯದತ್ತ ನುಸುಳಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆದರು.`ವೆಜ್‌ರೋಲ್~ ಸವಿದರು: ಜಯಲಲಿತಾ ಅವರು ಕಂದುಬಣ್ಣದ ಸೀರೆ ಉಟ್ಟು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಉಡುಗೆಗೆ ಸರಿಹೊಂದುವಂತೆ ಬಳೆ, ವಾಚು ಮತ್ತು ಕನ್ನಡಕ ಧರಿಸಿದ್ದರು.ಮಧ್ಯಾಹ್ನ ಊಟಕ್ಕಾಗಿ ನ್ಯಾಯಾಲಯದ ಆವರಣವೊಂದರ ಕೊಠಡಿಯನ್ನು ಆರೋಪಿಗಳಿಗೆ ಬಿಟ್ಟು ಕೊಡಲಾಗಿತ್ತು. ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರೊಂದಿಗೆ ಅಲ್ಲಿಯೇ ಊಟ ಮಾಡಿದ ಜಯಲಲಿತಾ ಎರಡು `ವೆಜ್‌ರೋಲ್~ಗಳನ್ನು ತಿಂದು, ನ್ಯಾಯಾಲಯಕ್ಕೆ ಮರಳಿದರು ಎಂದು ಮೂಲಗಳು ತಿಳಿಸಿವೆ.ತಿರುಚ್ಚಿ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಉಪ ಚುನಾವಣೆ ನಡೆದಿತ್ತು. ಗುರುವಾರ ಮತ ಎಣಿಕೆ ನಡೆಯಿತು. ಎಐಎಡಿಎಂಕೆ ಅಭ್ಯರ್ಥಿ ಪರಂಜ್ಯೋತಿ ಗೆಲುವು ಸಾಧಿಸಿದ್ದಾರೆ ಎಂಬ ಸುದ್ದಿ ಜಯಲಲಿತಾ ಅವರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ತಲುಪಿತ್ತು. ಇದರಿಂದ ಅವರು ಖುಷಿಯಾಗಿದ್ದರು.ಸಂತಸದಿಂದಲೇ ನ್ಯಾಯಾಲಯದತ್ತ ಪ್ರಯಾಣಿಸಿದರು ಎಂದು ಎಐಎಡಿಎಂಕೆ ಮುಖಂಡರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry