ಭಾನುವಾರ, ಮೇ 9, 2021
27 °C

ಜಯಾ ಮನವಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದೃಢೀಕರಿಸದ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಅವರ ಸ್ನೇಹಿತೆ ಶಶಿಕಲಾ ನಟರಾಜನ್ ಅವರು ಮಾಡಿದ ಮನವಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಶನಿವಾರ ತಿರಸ್ಕರಿಸಿತು.ಮನವಿಯಲ್ಲಿ ಹುರುಳಿಲ್ಲ ಎಂದು ಹೇಳಿದ ಪರಪ್ಪನ ಅಗ್ರಹಾರದ `ಗಾಂಧಿ ಭವನ~ದಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ. ಮಲ್ಲಿಕಾರ್ಜುನಯ್ಯ ಅವರು, ಪ್ರಕರಣದಲ್ಲಿ ಆರೋಪಿಗಳಾದ ಶಶಿಕಲಾ, ಇಳವರಸಿ ಮತ್ತು ವಿ. ಸುಧಾಕರನ್ ಅವರು ಶನಿವಾರ ನಡೆದ ವಿಚಾರಣೆಯ ಸಂದರ್ಭ ಹಾಜರಾಗದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. `ಆರೋಪಿಗಳು ಪ್ರಕರಣವನ್ನು ಲಘುವಾಗಿ ಪರಿಗಣಿಸಿದಂತೆ ಭಾಸವಾಗುತ್ತಿದೆ~ ಎಂದ ಅವರು, ಇದೇ 23ರಂದು ನ್ಯಾಯಾಲಯದಲ್ಲಿ ಹಾಜರಾಗಬೇಕು, ಹೇಳಿಕೆ ದಾಖಲಿಸಲು ಸಹಕರಿಸಬೇಕು ಎಂದು ಸೂಚಿಸಿ, ಖುದ್ದು ಹಾಜರಾತಿಯಿಂದ ಶನಿವಾರದ ಮಟ್ಟಿಗೆ ವಿನಾಯಿತಿ ನೀಡಿದರು.ಇದಕ್ಕೂ ಮೊದಲು ಶಶಿಕಲಾ ಅವರ ಪರ ವಾದ ಮಂಡಿಸಿದ ವಕೀಲ ಸಿ. ಮಣಿಶಂಕರ್, ಆರೋಪಿಗಳಿಗೆ ದೃಢೀಕರಿಸದ ದಾಖಲೆಗಳನ್ನು ಪರಿಶೀಲಿಸುವ ಹಕ್ಕು ಇದೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ. ಆಚಾರ್ಯ ಅವರು, `ಸದುದ್ದೇಶದಿಂದ ಈ ಮನವಿ ಮಾಡಿಲ್ಲ. ವಿಚಾರಣೆಯನ್ನು ಅನಗತ್ಯವಾಗಿ ಲಂಬಿಸಬೇಕು ಎಂಬುದೇ ಇದರ ಉದ್ದೇಶ. ಮನವಿ ಪುರಸ್ಕರಿಸಬಾರದು~ ಎಂದು ನ್ಯಾಯಾಧೀಶರನ್ನು ಕೋರಿದರು.ಜಯಲಲಿತಾ ಅವರು 1991ರಿಂದ 95ರವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನುವ ಆರೋಪದ ಕುರಿತ ವಿಚಾರಣೆ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.