ಜಯ ಸುಪ್ತ ಪಾಲುದಾರರು

7

ಜಯ ಸುಪ್ತ ಪಾಲುದಾರರು

Published:
Updated:

ಬೆಂಗಳೂರು: ಜಯಾ ಪಬ್ಲಿಕೇಷನ್ಸ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಸುಪ್ತ (ಸೈಲಂಟ್) ಪಾಲುದಾರಿಕೆ ಮಾತ್ರ ಹೊಂದಿದ್ದರು. ಅವರು ಕಂಪೆನಿಯ ಯಾವುದೇ ವ್ಯವಹಾರಗಳಲ್ಲೂ ತಲೆ ಹಾಕುತ್ತಿರಲಿಲ್ಲ ಎಂದು ಜಯಲಲಿತಾ ಅವರ ಗೆಳತಿಯಾಗಿದ್ದ ಶಶಿಕಲಾ ಶನಿವಾರ ನ್ಯಾಯಾಲಯಕ್ಕೆ ತಿಳಿಸಿದರು.ಜಯಲಲಿತಾ ಅವರು ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಕುರಿತು ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ.ಮಲ್ಲಿಕಾರ್ಜುನಯ್ಯ ಅವರ ಎದುರು ಶಶಿಕಲಾ ವಿಚಾರಣೆಗೆ ಹಾಜರಾಗಿದ್ದರು.ಕಳೆದ ಅಕ್ಟೋಬರ್ 21ರಂದು ಜಯಲಲಿತಾ ನೀಡಿದ್ದ ಹೇಳಿಕೆ ಸತ್ಯ ಎಂದು ನ್ಯಾಯಾಲಯಕ್ಕೆ ಅವರು ತಿಳಿಸಿದರು. ಶಶಿಕಲಾ ಅವರನ್ನು ಜಯಲಲಿತಾ ಈಗ ದೂರ ಇಟ್ಟಿದ್ದಾರೆ.`ಜಯಲಲಿತಾ ಅವರು ಕೆಲವು ಕಂಪೆನಿಗಳಲ್ಲಿ ಸುಪ್ತ ಪಾಲುದಾರರಾಗಿದ್ದರು. ಇತರೆ ಪಾಲುದಾರರ ಒತ್ತಾಯದ ಮೇರೆಗೆ ಅವರು ಈ ಕಂಪೆನಿಗಳಲ್ಲಿ ಪಾಲುದಾರಿಕೆ ಪಡೆದಿದ್ದರು. ಯಾವುದೇ ವ್ಯವಹಾರವನ್ನೂ ಜಯಲಲಿತಾ ನಡೆಸುತ್ತಿರಲಿಲ್ಲ. ನಾನೂ ಸೇರಿದಂತೆ ಇತರೆ ಪಾಲುದಾರರೇ ವ್ಯವಹಾರ ನೋಡಿಕೊಳ್ಳುತ್ತಿದ್ದೆವು. ಕಂಪೆನಿಯ ವ್ಯವಹಾರಗಳ ಬಗ್ಗೆ ಯಾವ ಅರಿವೂ ಅವರಿಗೆ ಇರಲಿಲ್ಲ~ ಎಂದು ಶಶಿಕಲಾ ಅವರು ನ್ಯಾಯಾಧೀಶರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪ್ರಕರಣದಲ್ಲಿ ತಮಿಳುನಾಡಿನ ವಿಚಕ್ಷಣ ಮತ್ತು ಭ್ರಷ್ಟಾಚಾರ ನಿಯಂತ್ರಣ ನಿರ್ದೇಶನಾಲಯ (ಡಿವಿಎಸಿ) ಸಲ್ಲಿಸಿರುವ ಆರೋಪಪಟ್ಟಿಯ ಆಧಾರದಲ್ಲಿ ನ್ಯಾಯಾಧೀಶರು ಶಶಿಕಲಾ ಅವರಿಗೆ ಶನಿವಾರ 40 ಪ್ರಶ್ನೆಗಳನ್ನು ಕೇಳಿದರು. ಬಹುತೇಕ ಪ್ರಶ್ನೆಗಳಿಗೆ ಶಶಿಕಲಾ ಉತ್ತರ ನೀಡಿದ್ದಾರೆ. ಇನ್ನೂ ಹಲವು ಪ್ರಶ್ನೆಗಳನ್ನು ನ್ಯಾಯಾಲಯ ಶಶಿಕಲಾ ಅವರಿಗೆ ಕೇಳಲಿದೆ. ಈ ಹಿನ್ನೆಲೆಯಲ್ಲಿ ಗುರುವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.ನಿತ್ಯವೂ ವಿಚಾರಣೆ ನಡೆಯಲಿ: ನ್ಯಾಯಾಲಯ ವಿಚಾರಣೆ ಮುಂದೂಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತಮಿಳುನಾಡು ಡಿವಿಎಸಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ.ಆಚಾರ್ಯ, `ಪ್ರತಿನಿತ್ಯವೂ ಪ್ರಕರಣದ ವಿಚಾರಣೆ ನಡೆಯಬೇಕು ಎಂಬುದು ನಮ್ಮ  ಕೋರಿಕೆ. ಈ ಕಾರಣದಿಂದಾಗಿಯೇ ವಿಚಾರಣೆ ಕಲಾಪದ ನಡುವೆ ದೀರ್ಘ ಅಂತರ ಬೇಡ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ನಿತ್ಯ ವಿಚಾರಣೆಗೆ ಆದೇಶಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು~ ಎಂದರು.ಸಿಟಿ ಸಿವಿಲ್ ನ್ಯಾಯಾಲಯ ಸಂಕೀರ್ಣದ ವಿಶೇಷ ನ್ಯಾಯಾಲಯದಲ್ಲೇ ಶನಿವಾರ ವಿಚಾರಣೆ ನಡೆಯಿತು. ಜಯಲಲಿತಾ ಅವರ ಸಾಕುಮಗ ಸುಧಾಕರನ್ ಕೂಡ ವಿಚಾರಣೆಗೆ ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry