ಗುರುವಾರ , ಮಾರ್ಚ್ 4, 2021
29 °C

ಜರ್ದಾರಿಗೆ ಪ್ರಧಾನಿ ಅಶ್ರಫ್ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜರ್ದಾರಿಗೆ ಪ್ರಧಾನಿ ಅಶ್ರಫ್ ಬೆಂಬಲ

 ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಅವರ ಸ್ಥಾನದ ಕಾರಣದಿಂದ ದೊರಕಿರುವ ರಕ್ಷಣೆಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ರಜಾ ಪರ್ವೇಜ್ ಅಶ್ರಫ್, ಅವರು ಆ ಹುದ್ದೆಯಿಂದ ಕೆಳಗೆ ಇಳಿಯುವವರೆಗೆ ರಕ್ಷಣೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.ಜರ್ದಾರಿ ಅವರ ವಿರುದ್ಧ ಇರುವ ಭ್ರಷ್ಟಾಚಾರದ ಪ್ರಕರಣಗಳ ಮರು ವಿಚಾರಣೆ ಆರಂಭಿಸಲು ಸುಪ್ರೀಂಕೋರ್ಟ್ ಜುಲೈ 12ರ ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ಅಶ್ರಫ್ ಈ ಪ್ರತಿಕ್ರಿಯೆ ನೀಡಿದ್ದಾರೆ.

`ಅವರು (ಜರ್ದಾರಿ) ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಧ್ಯಕ್ಷರು. ಕಾನೂನಿನ ಪ್ರಕಾರ ಅವರು ಆ ಸ್ಥಾನದಲ್ಲಿ ಮುಂದುವರಿಯುವತನಕ ಸಂವಿಧಾನಾತ್ಮಕ ರಕ್ಷಣೆ  ಇರುತ್ತದೆ. ಎಲ್ಲ ಕಾನೂನು ತಜ್ಞರು ಸರ್ಕಾರಕ್ಕೆ ಇದೇ ಅಭಿಪ್ರಾಯ ನೀಡಿದ್ದಾರೆ~ ಎಂದು ಅಶ್ರಫ್ ತಿಳಿಸಿದ್ದಾರೆ.ಜರ್ದಾರಿ ವಿರುದ್ಧದ ಪ್ರಕರಣಗಳ ತನಿಖೆಗೆ ಸ್ವಿಸ್ ಸರ್ಕಾರಕ್ಕೆ ಪತ್ರ ಬರೆಯುವಿರಾ ಎಂಬ ಪ್ರಶ್ನೆಗೆ, ತಮ್ಮ ನಿರ್ಧಾರವನ್ನು ಜುಲೈ 12ರಂದು ತಿಳಿಸುವುದಾಗಿ ಅಶ್ರಫ್ ಹೇಳಿದ್ದಾರೆ. ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮರು ತನಿಖೆಗೆ ಆದೇಶಿಸಲು ನಿರಾಕರಿಸಿದ ಕಾರಣ, ಹಿಂದಿನ ಪ್ರಧಾನಿ ಗಿಲಾನಿ ಸಂಸತ್ ಸದಸ್ಯತ್ವವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.ಪಾಕ್ ಹಿಂದಿನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ನೀಡಿದ್ದ ಕ್ಷಮಾದಾನದಿಂದ ಜರ್ದಾರಿ ಹಾಗೂ 8000ಕ್ಕೂ ಹೆಚ್ಚು ಪ್ರಭಾವಿ ವ್ಯಕಿಗಳ ವಿರುದ್ಧ ದಾಖಲಾದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ತಡೆ ನೀಡಲಾಗಿತ್ತು.ಮುಷರಫ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ 2009ರಲ್ಲಿ ರದ್ದುಗೊಳಿಸಿದ್ದು, ಆಗಿನಿಂದ ಪಾಕ್ ಸರ್ಕಾರಕ್ಕೆ ಜರ್ದಾರಿ ವಿರುದ್ಧ ತನಿಖೆಗೆ ಆದೇಶಿಸುವಂತೆ, ಅವರ ಅಕ್ರಮ ಖಾತೆಗಳ ಬಗ್ಗೆ ಮಾಹಿತಿ ಪಡೆಯಲು ಸ್ವಿಟ್ಜರ್‌ಲೆಂಡ್ ಸರ್ಕಾರಕ್ಕೆ ಪತ್ರ ಬರೆಯುವಂತೆ ತಾಕೀತು ಮಾಡುತ್ತಲೇ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.