ಮಂಗಳವಾರ, ಜನವರಿ 28, 2020
25 °C

ಜರ್ದಾರಿಗೆ ವಿನಾಯಿತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ):  ದೇಶ-ವಿದೇಶಗಳಲ್ಲಿರುವ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪ್ರಾಸಿಕ್ಯೂಷನ್‌ನಿಂದ ಸಂಪೂರ್ಣ ವಿನಾಯಿತಿ ಪಡೆಯಲಿದ್ದಾರೆ ಎಂದು ಪ್ರಮುಖ ವಕೀಲರೊಬ್ಬರು ಬುಧವಾರ ತಿಳಿಸಿದ್ದಾರೆ.ಅಧ್ಯಕ್ಷರಿಗೆ ಸಾಂವಿಧಾನಿಕ ವಿನಾಯಿತಿ ಇರುವುದರಿಂದ ಗಿಲಾನಿ ಅವರ ವಿರುದ್ಧ ಹೊರಡಿಸಲಾದ ನ್ಯಾಯಾಂಗ ನಿಂದನೆ ನೋಟಿಸ್ `ಅಸಿಂಧು~ ಎಂದು ಮಾಜಿ ಸಚಿವ, ಗಿಲಾನಿ ಪರ ವಕೀಲ ಐತಜಾಜ್ ಅಹ್ಸಾನ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಜರ್ದಾರಿ ವಿರುದ್ಧ ದಾಖಲಾಗಿರುವ ಪ್ರಕರಣಗಳು ಅಪರಾಧ ಪ್ರಕರಣಗಳ ವಿಭಾಗದಲ್ಲಿ ಬರುತ್ತವೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗದು. ಈ ಪ್ರಕರಣಗಳನ್ನು ಮರು ವಿಚಾರಣೆಗೆ ಒಳಪಡಿಸುವಂತೆ ಪಾಕಿಸ್ತಾನ ಸರ್ಕಾರವು ಸ್ವಿಟ್ಜರ್‌ಲೆಂಡ್ ಅಧಿಕಾರಿಗಳಿಗೆ ಪತ್ರ ಬರೆದರೂ ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನ್ಯಾಯಾಂಗ ನಿಂದನೆ ನೋಟಿಸ್ ವಿಷಯದಲ್ಲಿ ಗಿಲಾನಿ ಅವರನ್ನು ಸುಪ್ರೀಂಕೋರ್ಟ್ ಪೀಠದ ಮುಂದೆ ಹೇಗೆ ಸಮರ್ಥಿಸಿಕೊಳ್ಳುವಿರಿ ಎಂಬ ಪ್ರಶ್ನೆಗೆ `ಈ ವಿಷಯದಲ್ಲಿ ನನ್ನ ಧೋರಣೆಯನ್ನು ಹೇಳಲಾಗದು~ ಎಂದಷ್ಟೇ ಪ್ರತಿಕ್ರಿಯಿಸಿದರು.ಪ್ರತಿಕ್ರಿಯೆ ಕೇಳಿದ ಕೋರ್ಟ್:  ಸರ್ಕಾರ ತಮ್ಮನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಮಾಜಿ ರಕ್ಷಣಾ ಕಾರ್ಯದರ್ಶಿ ಲೆ.ಜನರಲ್ (ನಿವೃತ್ತ) ಖಲೀದ್ ನಯೀಂ ಲೋಧಿ ಅವರು ಸಲ್ಲಿಸಿರುವ ಮೇಲ್ಮನವಿಗೆ ಇಸ್ಲಾಮಾಬಾದ್ ಹೈಕೋರ್ಟ್, ಅಧ್ಯಕ್ಷ ಜರ್ದಾರಿ ಹಾಗೂ ಪ್ರಧಾನಿ ಗಿಲಾನಿ ಅವರಿಂದ ಪ್ರತಿಕ್ರಿಯೆ ಕೇಳಿದೆ. ಅಲ್ಲದೆ ಪ್ರಕರಣವನ್ನು ಫೆಬ್ರುವರಿ ಎರಡನೇ ವಾರದವರೆಗೆ ಮುಂದೂಡಿದೆ.ಇಜಾಜ್‌ಗೆ ವೀಸಾ: ಮೆಮೊಗೇಟ್ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಮುಂದೆ ಹೇಳಿಕೆ ನೀಡುವುದಕ್ಕೆ ಇದೇ 24ರಂದು ಪಾಕಿಸ್ತಾನಕ್ಕೆ ತೆರಳಲು ವಿವಾದಿತ ಉದ್ಯಮಿ ಮನ್ಸೂರ್ ಇಜಾಜ್ ಅವರಿಗೆ ವೀಸಾ ದೊರೆತಿದೆ.ಯೂರೋಪ್‌ನಲ್ಲಿ ವಾಸಿಸುತ್ತಿರುವ ಅವರಿಗೆ ಸ್ವಿಟ್ಜರ್‌ಲೆಂಡ್‌ನ ಬರ್ನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ವೀಸಾ ನೀಡಿದೆ. ಇಜಾಜ್ ಲಂಡನ್‌ನಿಂದ ವಿಶೇಷ ವಿಮಾನದಲ್ಲಿ ಪಾಕಿಸ್ತಾನಕ್ಕೆ ಬರುವರು ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.ಗಿಲಾನಿ `ಆತ್ಮಘಾತಕ ಸಂಘರ್ಷದ ಹಾದಿ~ಯಲ್ಲಿ ಇದ್ದಂತಿದೆ ಎಂದು `ನ್ಯೂಸ್ ಇಂಟರ್‌ನ್ಯಾಷನಲ್~ ಪತ್ರಿಕೆ ಬುಧವಾರದ ಸಂಪಾದಕೀಯದಲ್ಲಿ ವಿಶ್ಲೇಷಿಸಿದೆ.

ಪ್ರತಿಕ್ರಿಯಿಸಿ (+)