ಜರ್ಮನಿಯಲ್ಲಿ ನಗರದ ವಿದ್ಯಾರ್ಥಿ ಸಾವು

7

ಜರ್ಮನಿಯಲ್ಲಿ ನಗರದ ವಿದ್ಯಾರ್ಥಿ ಸಾವು

Published:
Updated:
ಜರ್ಮನಿಯಲ್ಲಿ ನಗರದ ವಿದ್ಯಾರ್ಥಿ ಸಾವು

ಬೆಂಗಳೂರು: ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಳಿದ್ದ ನಗರದ ಉತ್ತರಹಳ್ಳಿ ಬಳಿಯ ಚಿಕ್ಕಲಸಂದ್ರದ ಲಿಖಿತ್ ಶಶಿಧರ್ (25) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಜರ್ಮನಿ ಪೊಲೀಸರು ಲಿಖಿತ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದರೆ, ಇದನ್ನು ತಳ್ಳಿ ಹಾಕಿರುವ ಪೋಷಕರು ಮಗನ ಸಾವಿನ ಹಿಂದೆ ಹಿರಿಯ ವಿದ್ಯಾರ್ಥಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

`ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಜನವರಿ 9ರಂದು ಕರೆ ಮಾಡಿ ಲಿಖಿತ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದರು. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವ ಅವನದಲ್ಲ. ಮಗ ಕರೆ ಮಾಡಿದಾಗಲೆಲ್ಲಾ ಹಿರಿಯ ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡುತ್ತಿರುವುದಾಗಿ ಹೇಳುತ್ತಿದ್ದ. ಹೀಗಾಗಿ ಸಾವಿನ ಹಿಂದೆ ಅವರ ಪಾತ್ರವಿರುವ ಸಾಧ್ಯತೆ ಇದೆ' ಎಂದು ಲಿಖಿತ್ ತಂದೆ ಶಶಿಧರ್   `ಪ್ರಜಾವಾಣಿ'ಗೆ ತಿಳಿಸಿದರು.`ನಗರದ ಜೈನ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದ ಲಿಖಿತ್, ಎರಡೂವರೆ ವರ್ಷ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು 2012ರ ಅಕ್ಟೋಬರ್ 4ರಂದು ಜರ್ಮನಿಯ ಸೀಗನ್ ವಿಶ್ವವಿದ್ಯಾಲಯಕ್ಕೆ ಸೇರಿದ.ಕಾಲೇಜಿಗೆ ಹತ್ತಿರವಿರುವ ಕ್ರೇಜಲ್ ಎಂಬ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡಿದ್ದ ಆತ, ಕರೆ ಮಾಡಿದಾಗಲೆಲ್ಲಾ ಹಿರಿಯ ವಿದ್ಯಾರ್ಥಿಗಳಿಂದ ತೊಂದರೆಯಾಗುತ್ತಿರುವುದಾಗಿ ಹೇಳುತ್ತಿದ್ದ. ಅವರೊಂದಿಗೆ ಹೊಂದಿಕೊಂಡು ಹೋಗುವಂತೆ ನಾವು ಸಲಹೆ ನೀಡಿದ್ದೆವು. ಅಲ್ಲದೇ, ಲಿಖಿತ್‌ನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಆತನ ಜತೆಗಿದ್ದ ಯಲಹಂಕದ ಮುರಳಿಕೃಷ್ಣನಿಗೂ ತಿಳಿಸಿದ್ದೆ' ಎಂದರು.

ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವಾದರೆ ಮನೆಗೆ ವಾಪಸ್ ಬರುವಂತೆ ಹೇಳಿದ್ದೆ. ಆದರೆ, ಈ `ಜಾಲ'ದಿಂದ ತಪ್ಪಿಸಿಕೊಂಡು ಬರುವುದು ಕಷ್ಟವಾಗುತ್ತದೆ ಎಂದಿದ್ದ. ಆ ಜಾಲ ಯಾವುದು ಎಂಬುದು ನಮಗೆ ಗೊತ್ತಿಲ್ಲ. ಅಲ್ಲದೇ, ಜರ್ಮನಿ ಪೊಲೀಸರು ಮಗನ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ  ಈ ಅಂಶಗಳನ್ನು ಗಮನಿಸಿದರೆ ಮಗನ ಸಾವಿನ ಹಿಂದೆ ಏನೊ ರಹಸ್ಯ ಅಡಗಿದೆ ಎಂದು ಶಶಿಧರ್ ಅನುಮಾನ ವ್ಯಕ್ತಪಡಿಸಿದರು.`ಲಿಖಿತ್ ಮೃತದೇಹವನ್ನು ಗುರುವಾರ ರಾತ್ರಿ 11.45ರ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಶವದ ಪೆಟ್ಟಿಗೆಯಲ್ಲಿದ್ದ ಮರಣೋತ್ತರ ಪರೀಕ್ಷೆ ವರದಿ ಜರ್ಮನ್ ಮತ್ತು ಇಂಗ್ಲಿಷ್ ಭಾಷೆಯಲ್ಲಿತ್ತು. ಶವ ಪಡೆಯುವ ಆತುರದಲ್ಲಿ ವರದಿ ಕಡೆ ಗಮನ ಹರಿಸಲಿಲ್ಲ. ಆದರೆ, ಲಿಖಿತ್ ತನ್ನ ಕೋಣೆಯಲ್ಲೇ ಕಂಪ್ಯೂಟರ್ ಕೇಬಲ್ ಬಳಸಿ ನೇಣು ಹಾಕಿಕೊಂಡಿದ್ದಾನೆ ಎಂದು ಜರ್ಮನಿ ಪೊಲೀಸರು ಹೇಳಿದ್ದಾರೆ' ಎಂದು ಲಿಖಿತ್ ಕುಟುಂಬ ಸದಸ್ಯರು ಮಾಹಿತಿ ನೀಡಿದರು.ಲಿಖಿತ್ ತಂದೆ ಶಶಿಧರ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ತಾಯಿ ಸಿದ್ದಲಿಂಗಮ್ಮ ಕೆ.ಆರ್ ರಸ್ತೆಯಲ್ಲಿರುವ ಜೈನ್ ವಿದ್ಯಾಲಯದಲ್ಲಿ ಗ್ರಂಥಪಾಲಕಿಯಾಗಿದ್ದಾರೆ. ತಂಗಿ ಲೇಖಾ ಬೊಮ್ಮನಹಳ್ಳಿ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಜನವರಿ 8ರಂದು ಅಂತಿಮ ಕರೆ: `ಶನಿವಾರ (ಜ.5) ಕರೆ ಮಾಡಿದ್ದ ಲಿಖಿತ್, ಮನೆಗೆ ವಾಪಸ್ ಬರುವುದಾಗಿ ತಿಳಿಸಿದ್ದ. ಆತನ ನಿರ್ಧಾರವನ್ನು ನಾವು ಸಂತಸದಿಂದಲೇ ಒಪ್ಪಿಕೊಂಡಿದ್ದೆವು. ಆದರೆ, ಮಂಗಳವಾರ (ಜ.8) ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಗ ಕರೆ ಮಾಡಿದಾಗ ನಾನು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದೆ. ಹೀಗಾಗಿ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಮನೆಗೆ ಬಂದು ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು' ಎಂದು ಲಿಖಿತ್ ತಾಯಿ ಸಿದ್ದಲಿಂಗಮ್ಮ ಹೇಳಿದರು.ವಿದೇಶಿ ವ್ಯಾಮೋಹವಿರಲಿಲ್ಲ: `ವಿದೇಶಿ ವ್ಯಾಮೋಹದಿಂದ ಲಿಖಿತ್ ಸಾವನ್ನಪ್ಪಿದ ಎಂದು ಕೆಲ ಮಾಧ್ಯಮಗಳು ಪ್ರಸಾರ ಮಾಡಿದವು. ಆ ಸುದ್ದಿ ನಮಗೆ ಮತ್ತಷ್ಟು ನೋವುಂಟು ಮಾಡಿದೆ. ನಮಗಾಗಲೀ, ಲಿಖಿತ್‌ಗಾಗಲೀ ವಿದೇಶದ ವ್ಯಾಮೋಹ ಇರಲಿಲ್ಲ. ಆತನನ್ನು ವಿದೇಶಕ್ಕೆ ಕಳುಹಿಸುವಷ್ಟು ಶಕ್ತಿವಂತರು ನಾವಲ್ಲ. ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಕಾರಣದಿಂದ ಬ್ಯಾಂಕ್‌ನಲ್ಲಿ ಲಕ್ಷಾಂತರ ರೂ. ಸಾಲ ಮಾಡಿದ್ದೆ. ಸಾಲವನ್ನು ಹೇಗಾದರೂ ತೀರಿಸಬಹುದು. ಆದರೆ, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಆಘಾತವಾಗಿದೆ' ಎಂದು ಶಶಿಧರ್ ಕಣ್ಣೀರು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry