ಸೋಮವಾರ, ಮಾರ್ಚ್ 1, 2021
31 °C
ಹಾಕಿ: ಕೊನೆಯ ನಿಮಿಷದಲ್ಲಿ ಕ್ರಿಸ್ಟೋಫರ್‌ ಗೆಲುವಿನ ಗೋಲು

ಜರ್ಮನಿ ಎದುರು ಭಾರತಕ್ಕೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜರ್ಮನಿ ಎದುರು ಭಾರತಕ್ಕೆ ಆಘಾತ

ರಿಯೊ ಡಿ ಜನೈರೊ (ಪಿಟಿಐ): ಪಂದ್ಯ ಕೊನೆಗೊಳ್ಳಲು ಕೇವಲ ಮೂರು ಸೆಕೆಂಡುಗಳಿರುವಾಗ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಟ್ಟ ಭಾರತ ರಿಯೊ ಒಲಿಂಪಿಕ್‌ ಹಾಕಿ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಅಘಾತ ಅನುಭವಿಸಿತು.ಒಲಿಂಪಿಕ್‌ ಹಾಕಿ ಸೆಂಟರ್‌ನಲ್ಲಿ ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಜರ್ಮನಿ 2–1 ಗೋಲುಗಳ ರೋಚಕ ಜಯ ಸಾಧಿಸಿತು.

ಕೊನೆಯ ನಿಮಿಷದವರೆಗೂ ಉಭಯ ತಂಡಗಳು 1–1 ರಲ್ಲಿ ಸಮಬಲ ಸಾಧಿಸಿದ್ದವು.  ಪಂದ್ಯ ಇನ್ನೇನು ಡ್ರಾದಲ್ಲಿ ಕೊನೆಗೊಳ್ಳಲಿದೆ ಎನ್ನುವಾಗ ಕ್ರಿಸ್ಟೋಫರ್‌ ರುಹ್ರ್‌ ಗೋಲು ಗಳಿಸಿ ಭಾರತದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.ಸತತ ಎರಡು ಗೆಲುವು ಪಡೆದ ಜರ್ಮನಿ ಒಟ್ಟು ಆರು ಪಾಯಿಂಟ್ಸ್‌ಗಳೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ನಾಲ್ಕು ಪಾಯಿಂಟ್ಸ್‌ ಹೊಂದಿರುವ ನೆದರ್ಲೆಂಡ್ಸ್‌ ಎರಡನೇ ಸ್ಥಾನದಲ್ಲಿದ್ದರೆ. ಮೂರು ಪಾಯಿಂಟ್ಸ್‌ ಪಡೆದಿರುವ ಭಾರತ ಮೂರನೇ ಸ್ಥಾನದಲ್ಲಿದೆ. ಪಿ.ಆರ್‌. ಶ್ರೀಜೇಶ್‌ ಬಳಗ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಮಣಿಸಿತ್ತು.ಒಲಿಂಪಿಕ್‌ ಕೂಟದಲ್ಲಿ ಭಾರತದ ಎದುರು ಜರ್ಮನಿ ತಂಡದ ಯಶಸ್ಸಿನ ಓಟ ಮತ್ತೆ ಮುಂದುವರಿದಿದೆ. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಭಾರತ ಕೊನೆಯದಾಗಿ ಜರ್ಮನಿ ತಂಡವನ್ನು ಮಣಿಸಿತ್ತು.ಜಿದ್ದಾಜಿದ್ದಿನ ಪೈಪೋಟಿ: ಎರಡೂ ತಂಡಗಳ ಇತ್ತೀಚೆಗಿನ ಪ್ರದರ್ಶನ ನೋಡಿದಾಗ ಭಾರತ ಈ ಪಂದ್ಯದಲ್ಲಿ ಎದುರಾಳಿಗಳಿಗೆ ಸುಲಭವಾಗಿ ಶರಣಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಶ್ರೀಜೇಶ್‌ ಬಳಗ ಜರ್ಮನಿಗೆ ನಡುಕ ಹುಟ್ಟಿಸಲು ಯಶಸ್ವಿಯಾಯಿತು.ಉಭಯ ತಂಡಗಳ ಆಟಗಾರರು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಮೊದಲ ಕ್ವಾರ್ಟರ್‌ನಲ್ಲಿ ಭಾರತ ಅಲ್ಪ ಮೇಲುಗೈ ಸಾಧಿಸಿತ್ತು.

11ನೇ ನಿಮಿಷದಲ್ಲಿ ನಿಕಿನ್‌ ತಿಮ್ಮಯ್ಯ  ನಡೆಸಿದ ಪ್ರಯತ್ನ ವಿಫಲವಾಯಿತು. ಆಕಾಶ್‌ದೀಪ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ನಿಕಿನ್‌ ಬ್ಯಾಕ್‌ಹ್ಯಾಂಡ್‌ ಹೊಡೆತದ ಮೂಲಕ ಚೆಂಡನ್ನು ಗುರಿ ಸೇರಿಸಲು ಪ್ರಯತ್ನಿಸಿದರೂ ಎದುರಾಳಿ ತಂಡದ ಗೋಲ್‌ಕೀಪರ್‌ ನಿಕೋಲಸ್‌ ಜೇಕಬ್‌ ತಡೆದರು.ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಪ್ರಭುತ್ವ ಮೆರೆದ ಜರ್ಮನಿ ನಿಕ್ಲಸ್‌ ವೆಲೆನ್‌ ತಂದಿತ್ತ ಗೋಲಿನಿಂದ ಮುನ್ನಡೆ ಸಾಧಿಸಿತು. ಆದರೆ ಈ ಮುನ್ನಡೆ ಹೆಚ್ಚುಹೊತ್ತು ಇರಲಿಲ್ಲ.

ಎಸ್‌.ವಿ. ಸುನಿಲ್‌ ಅವರ ಪ್ರಯತ್ನದಿಂದ ಭಾರತಕ್ಕೆ 18ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತು. ರೂಪಿಂದರ್‌ಪಾಲ್‌ ಸಿಂಗ್‌ ಆಕರ್ಷಕ ಫ್ಲಿಕ್‌ ಮೂಲಕ ಚೆಂಡನ್ನು ಗುರಿ ಸೇರಿಸಿ 1–1 ರಲ್ಲಿ ಸಮಬಲ ತಂದಿತ್ತರು.ಜರ್ಮನಿ ಗೋಲಿ ಜೇಕಬ್‌ ಅವರ ಮಿಂಚಿನ ಪ್ರದರ್ಶನ ಇಲ್ಲದೇ ಇರುತ್ತಿದ್ದಲ್ಲಿ ಭಾರತ ಕನಿಷ್ಠ ಮೂರರಿಂದ ನಾಲ್ಕು ಗೋಲುಗಳನ್ನು ಗಳಿಸುತ್ತಿತ್ತು. ಭಾರತಕ್ಕೆ ಲಭಿಸಿದ ಎರಡನೇ ಪೆನಾಲ್ಟಿ ಕಾರ್ನರ್‌ ಅವಕಾಶ ಮತ್ತು ಚಿಂಗ್ಲೇಸನ ಸಿಂಗ್‌ ಅವರ ಗೋಲು ಗಳಿಸುವ ಪ್ರಯತ್ನವನ್ನು ಜೇಕಬ್‌  ಆಕರ್ಷಕವಾಗಿ ತಡೆದರು.47ನೇ ನಿಮಿಷದಲ್ಲಿ ಜರ್ಮನಿಗೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ದೊರೆಯಿತು. ಆದರೆ ನಾಯಕ ಮಾರಿಟ್ಜ್‌ ಫ್ಯುಯೆಸ್ಟೆ ಅವರ ಫ್ಲಿಕ್‌ಅನ್ನು ಸುರೇಂದರ್‌ ಕುಮಾರ್‌ ವಿಫಲಗೊಳಿ ಸಿದರು. ವಿಶ್ವ ರ್‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಭಾರತ ಮೂರನೇ ರ್‍್ಯಾಂಕ್ ಹೊಂದಿರುವ ತಂಡದ ಜತೆ ಪಾಯಿಂಟ್‌ ಹಂಚಿಕೊಳ್ಳಲಿದೆ ಎನ್ನುವಾಗ ಕ್ರಿಸ್ಟೋಫರ್‌ ರುಹ್ರ್‌ ಗೋಲು ಗಳಿಸಿ ಪಂದ್ಯದ ಫಲಿತಾಂಶವನ್ನೇ ಬದಲಿಸಿಬಿಟ್ಟರು.ಮಂಗಳವಾರ ನಡೆಯುವ ತನ್ನ ಮೂರನೇ ಪಂದ್ಯದಲ್ಲಿ ಭಾರತ ತಂಡ ಅರ್ಜೆಂಟೀನಾ ವಿರುದ್ಧ ಪೈಪೋಟಿ ನಡೆಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.