ಬುಧವಾರ, ನವೆಂಬರ್ 13, 2019
23 °C
ಹಿಮಾಯತ್‌ಗೆ ಗಲ್ಲು ಶಿಕ್ಷೆ

ಜರ್ಮನ್ ಬೇಕರಿ ಸ್ಫೋಟ ಪ್ರಕರಣ

Published:
Updated:

ಪುಣೆ (ಪಿಟಿಐ): ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಅಪರಾಧಿಯಾದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮಿರ್ಜಾ ಹಿಮಾಯತ್ ಬೇಗ್‌ಗೆ  (31) ಪುಣೆಯ ಜಿಲ್ಲಾ ಸತ್ರ ನ್ಯಾಯಾಲಯ ಗುರುವಾರ ಮರಣದಂಡನೆ ವಿಧಿಸಿದೆ.ಸ್ಫೋಟ ಪ್ರಕರಣದಲ್ಲಿ ಸಂಚು ನಡೆಸಿದ ಅಪರಾಧಕ್ಕಾಗಿ ಬೇಗ್‌ಗೆ  ಭಾರತೀಯ ದಂಡ ಸಂಹಿತೆ (ಐಪಿಸಿ), `ಕಾನೂನು ಬಾಹಿರ ಚಟುವಟಿಕೆ ತಡೆ' (ಯುಎಪಿಎ) ಮತ್ತು `ಸ್ಫೋಟಕ ವಸ್ತುಗಳ ಕಾಯ್ದೆ'ಗಳ ವಿವಿಧ ಕಲಂ ಅನ್ವಯ ಗಲ್ಲು ಶಿಕ್ಷೆ ವಿಧಿಸಲಾಗಿದೆ.ಈ ಪ್ರಕರಣದಲ್ಲಿ ಬಂಧಿತನಾದ ಏಕೈಕ ಆರೋಪಿ ಬೇಗ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎನ್.ಪಿ. ಧೋತೆ ಅವರು ಏ. 15ರಂದು ಆತನನನ್ನು ಅಪರಾಧಿ ಎಂದು ಸಾರಿದ್ದರು. ಆದರೆ, ಶಿಕ್ಷೆಯ ಪ್ರಮಾಣವನ್ನು ಘೋಷಿಸಿರಲಿಲ್ಲ.ಗುರುವಾರ ಶಿಕ್ಷೆಯ ಪ್ರಮಾಣ ಕುರಿತು ನಡೆದ ಪ್ರಾಸಿಕ್ಯೂಷನ್ ಮತ್ತು ಅಪರಾಧಿ ಪರ ವಕೀಲರ ವಾದವನ್ನು ನ್ಯಾಯಾಧೀಶರು ಆಲಿಸಿದರು. ನಂತರ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಿದರು.ಬೇಗ್, ಮಹಾರಾಷ್ಟ್ರದ ಭೀಡ್ ಜಿಲ್ಲೆಯ ನಿವಾಸಿ. ಈತನ ವಿರುದ್ಧ ಐಪಿಸಿ ಕಲಂಗಳಾದ 302 (ಕೊಲೆ), 307 (ಕೊಲೆ ಯತ್ನ), 435 (ಸ್ಫೋಟಕ ವಸ್ತುಗಳು ಇಲ್ಲವೆ ಬೆಂಕಿ ಅನಾಹುತ), 474 (ಫೋರ್ಜರಿ), 153(ಎ) (ಧರ್ಮ, ಜಾತಿ, ಜನ್ಮಸ್ಥಳ, ಭಾಷೆ ಹೆಸರಿನಲ್ಲಿ ಮತ್ತು ಪೂರ್ವಗ್ರಹದಿಂದ ಸೌಹಾರ್ದಕ್ಕೆ ಧಕ್ಕೆ ತರಲು ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ), 120(ಬಿ) (ಕ್ರಿಮಿನಲ್ ಒಳಸಂಚು) ಹಾಗೂ ಯುಎಪಿಎ ಮತ್ತು `ಸ್ಫೋಟಕ ವಸ್ತುಗಳ ಕಾಯ್ದೆ'ಗಳ ವಿವಿಧ ಕಲಂ ಅನ್ವಯ ಈ ಶಿಕ್ಷೆ ನೀಡಲಾಗಿದೆ.2010ರ ಫೆ. 13ರಂದು ಸಂಭವಿಸಿದ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ 17 ಜನರು ಸಾವನ್ನಪ್ಪಿದ್ದರು. 64 ಮಂದಿ ಗಾಯಗೊಂಡಿದ್ದರು.

ಮುಂಬೈ ವರದಿ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಬೇಗ್‌ನ ಕುಟುಂಬದವರು ಪುಣೆ ಜಿಲ್ಲಾ ನ್ಯಾಯಾಲಯದ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಲ್ಪಸಂಖ್ಯಾತ ಸಮುದಾಯದ ಸ್ವಯಂ ಸೇವಾ ಸಂಸ್ಥೆಗಳ (ಎನ್‌ಜಿಒ) ಸಹಾಯ ಕೋರಿದ್ದಾರೆ.ಅಂಬಾಲ ವರದಿ: ಸ್ಫೋಟದಿಂದ ಸಾವನ್ನಪ್ಪಿದ್ದ ಯುವತಿ ಅದಿತಿಯ ತಂದೆ ಜಿಂದಾಲ್ ಅವರು ನ್ಯಾಯಾಲಯ ನೀಡಿರುವ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. `ಇದು ಮಾನವೀಯತೆಗೆ ಸಂದ ನ್ಯಾಯ' ಎಂದಿದ್ದಾರೆ.

ಪ್ರತಿಕ್ರಿಯಿಸಿ (+)