ಜಲಕನ್ಯೆ (ಬುಂದೇಲ್ ಖಂಡದ ಜಾನಪದ ಕಥೆ)

7

ಜಲಕನ್ಯೆ (ಬುಂದೇಲ್ ಖಂಡದ ಜಾನಪದ ಕಥೆ)

Published:
Updated:

ಬುಂದೇಲ್ ಖಂಡದ ಒಂದು ನಗರವನ್ನು ಒಬ್ಬ ರಾಜ ವೈಭವದಿಂದ ಆಳುತ್ತಿದ್ದ. ಪ್ರಜೆಗಳೂ ಸುಖವಾಗಿದ್ದರು. ಅರಮನೆಯ ಬಳಿ ಒಂದು ಗುಡಿಸಲು ಇತ್ತು. ಅಲ್ಲಿ ಜಸೌಂದಿ ಎಂಬ ಸಾರಂಗಿ ನುಡಿಸುವವನು ವಾಸವಿದ್ದ. ಅವನು ಹಗಲು-ರಾತ್ರಿ ಎನ್ನದೆ ಸಾರಂಗಿ ನುಡಿಸುತ್ತಿದ್ದ. ಸಾರಂಗಿಯ ನುಡಿ ಮಧುರವಾಗಿತ್ತು. ಹೀಗಾಗಿ ರಾಜ ಖುಷಿಯಾಗಿದ್ದ.ಒಂದು ದಿನ ರಾತ್ರಿ ರಾಜನಿಗೆ ಕನಸು ಬಿತ್ತು: ಒಂದು ಬೆಂಗಾಡು. ಅಲ್ಲೊಂದು ಕೆರೆ. ಕೆರೆಯ ಬಳಿ ದೇವಸ್ಥಾನ. ದೇವಸ್ಥಾನದ ಮಧ್ಯದಲ್ಲಿ ಒಂದು ಸುಳಿ. ಸುಳಿಯ ಮೆಟ್ಟಿಲುಗಳಿಂದ ಇಳಿದಾಗ ಒಂದು ಬಾವಿ. ಬಾವಿಯ ಒಳಗೆ ಒಂದು ಉದ್ಯಾನವನ. ಅದನ್ನು ದಾಟಿದಾಗ ಒಂದು ಅರಮನೆ. ಅರಮನೆಯಲ್ಲಿ ಹದಿನಾರರ ಒಬ್ಬ ಕನ್ಯೆ. ಅವಳು ಶೃಂಗರಿಸಿಕೊಂಡು ನಿಂತಿದ್ದಾಳೆ. ರಾಜ ಅವಳ ಸಮೀಪಕ್ಕೆ ಬರಲಾರಂಭಿಸಿದ, ಆದರೆ ಆಗಲೇ ಸಾರಂಗಿಯ ಧ್ವನಿ ಕೇಳಿ ರಾಜನಿಗೆ ಎಚ್ಚರವಾಯಿತು. ರಾಜ ರೇಗಿ ಆ ಕೂಡಲೇ ಜಸೌಂದಿಯನ್ನು ಹಿಡಿಸಿ ಅರಮನೆಗೆ ಕರೆಸಿದ. `ನೀನು ಮತ್ತೊಮ್ಮೆ ಸಾರಂಗಿ ನುಡಿಸಿದರೆ ನಿನ್ನ ಪ್ರಾಣ ಉಳಿಯುವುದಿಲ್ಲ' ಎಂದು ಎಚ್ಚರಿಕೆಯನ್ನು ಕೊಟ್ಟು ಕಳುಹಿಸಿದ.ಜಸೌಂದಿ ಮನೆಗೆ ಬಂದು ಸಾರಂಗಿಯನ್ನು ಮೂಲೆಗೆ ಎಸೆದ. ಮೂರ್ನಾಲ್ಕು ದಿನಗಳಾದ ಮೇಲೆ ಅವನಿಂದ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಮತ್ತೆ ಸಾರಂಗಿ ನುಡಿಸಿದ. ರಾಜನ ಕಿವಿಗೆ ಈ ಧ್ವನಿ ಬೀಳುತ್ತಲೇ, `ಅವನ ತಲೆಯನ್ನು ಕತ್ತರಿಸಿ. ಅವನ ಎರಡು ಕಣ್ಣುಗಳನ್ನು ನನಗೆ ತಂದು ತೋರಿಸಿ' ಎಂದು ಕಟುಕರಿಗೆ ಆದೇಶಿಸಿದ.ಕಾಡಿನಲ್ಲಿ ಜಸೌಂದಿ ಕಟುಕರಿಗೆ ಹೇಳಿದ, `ನನ್ನನ್ನು ಬಿಟ್ಟುಬಿಡಿ, ಮುಂದೆ ಒಂದು ದಿನ ರಾಜ ಮತ್ತೆ ನನ್ನನ್ನು ಅರಮನೆಗೆ ಕರೆತರಲು ನಿಮಗೆ ಆಜ್ಞಾಪಿಸಿದರೆ ಏನು ಮಾಡುವಿರಿ?' ಎಂದು ಪ್ರಶ್ನಿಸಿದ. ಕಟುಕರಿಗೆ ಹೌದು ಅನ್ನಿಸಿತು. ಅವರು ಒಂದು ಕುರಿಯ ಕಣ್ಣುಗಳನ್ನು ತಂದು ರಾಜನಿಗೆ ತೋರಿಸಿದರು.ಕೆಲವು ದಿನಗಳಾದ ಮೇಲೆ ರಾಜನಿಗೆ ಮತ್ತೆ ಈ ಹಿಂದಿನಂತೆಯೇ ಕನಸು ಬಿತ್ತು. ಆದರೆ ಈ ಕನಸಿನಲ್ಲಿ ರಾಜ ಆ ಕನ್ಯೆಯನ್ನು ಮದುವೆಯಾಗಿದ್ದ. ಅವನಿಗೆ ಎಚ್ಚರವಾದಾಗ, ತಾನು ವ್ಯರ್ಥವಾಗಿ ಜಸೌಂದಿಯನ್ನು ಕೊಲ್ಲಿಸಿದೆ ಎಂದು ದುಃಖವಾಯಿತು.ಇತ್ತ ಜಸೌಂದಿ ಅಲೆಯುತ್ತ ಒಂದು ಬೆಂಗಾಡಿಗೆ ಬಂದ. ಅಲ್ಲೊಂದು ಕೆರೆ ಇತ್ತು. ಈ ಕೆರೆಯ ಬಗ್ಗೆ ರಾಜ ಅವನಿಗೆ ವರ್ಣಿಸಿದ್ದ. ಮರುದಿನ ಹದಿನಾರರ ಕನ್ಯೆಯೊಬ್ಬಳು ದೇವಸ್ಥಾನಕ್ಕೆ ಪೂಜೆ ಮಾಡಲು ಬಂದಳು. ಅವಳು ಹೊಸಿಲಿಗೆ ಏಳು ಮುಷ್ಟಿ ಹಿಟ್ಟನ್ನು ಇಟ್ಟು ಒಳಗೆ ಹೋದಳು. ಆಗಲೇ ನಾಯಿಯೊಂದು ಬಂದು ಅದನ್ನು ತಿಂದಿತು. ಮರುದಿನವೂ ಕನ್ಯೆ ಹಿಟ್ಟನ್ನು ಇಟ್ಟು ಒಳಗೆ ಹೋದಾಗ, ಜಸೌಂದಿ ಆ ಹಿಟ್ಟಿನಿಂದ ಏಳು ರೊಟ್ಟಿಗಳನ್ನು ಮಾಡಿಟ್ಟು ಸ್ನಾನಕ್ಕೆ ಹೋದ. ನಾಯಿ ಅವುಗಳನ್ನು ಕಚ್ಚಿಕೊಂಡು ಓಡಿತು.ಅದನ್ನು ನೋಡಿದ ಜಸೌಂದಿ ಅದರ ಬಾಲ ಹಿಡಿದುಕೊಂಡ. ನಾಯಿ ಸುಳಿ ದಾಟಿ, ಬಾವಿಯಲ್ಲಿ ಹಾರಿ, ಉದ್ಯಾನವನಕ್ಕೆ ಹೋಗಿ ರಾಜಕುಮಾರಿ ಎದುರು ನಿಂತಿತು. ರಾಜಕುಮಾರಿ ಅವನನ್ನು ಪರೀಕ್ಷಿಸಲು ಹಿತ್ತಾಳೆ ಮತ್ತು ಬೆಳ್ಳಿಯ ಪಾತ್ರೆಯಲ್ಲಿ ನೀರು ಕೊಟ್ಟಳು. ಜಸೌಂದಿ ಹಿತ್ತಾಳೆ ಪಾತ್ರೆಯ ನೀರು ಕುಡಿದ. ಕಡೆಗೆ ಒಂದು ದಿನ ನಾಯಿಯ ಬಾಲ ಹಿಡಿದುಕೊಂಡು ಮತ್ತೆ ಹೊರಕ್ಕೆ ಬಂದ. ನಗರಕ್ಕೆ ಬಂದು ರಾಜನಿಗೆ ಎಲ್ಲಾ ವಿಷಯ ತಿಳಿಸಿದ.ರಾಜ ಜಸೌಂದಿಯೊಂದಿಗೆ ಆ ಕೆರೆಗೆ ಹೋದ. ಇಬ್ಬರೂ ಸುಳಿಯಲ್ಲಿಳಿದು ಬಾವಿ ದಾಟಿ ಅರಮನೆಗೆ ಬಂದರು. ರಾಜ ಕನ್ಯೆ ಕೊಟ್ಟ ಬೆಳ್ಳಿಯ ಪಾತ್ರೆಯ ನೀರು ಕುಡಿದ. ಕನ್ಯೆ ಇವನು ರಾಜನೆಂದು ಅರ್ಥಮಾಡಿಕೊಂಡು ಅವನನ್ನು ವರಿಸಿದಳು. ಜಸೌಂದಿ ಮಂತ್ರಿಯಾದ.ಒಂದು ದಿನ ಮೂವರೂ ತಿರುಗಾಡಲು ಹೊರಟರು. ರಸ್ತೆಯಲ್ಲಿ ಅವರಿಗೆ ಒಂದು ಸತ್ತ ಗಿಳಿ ಕಂಡಿತು. `ಈ ಗಿಳಿಯನ್ನು ಬದುಕಿಸಿ' ಎಂದು ರಾಣಿ ಕೇಳಿಕೊಂಡಳು. ರಾಜ ಜಸೌಂದಿಗೆ, `ನೀನು ಅರಮನೆಗೆ ಹೋಗಿ ಸಂಜೀವಿನಿ ಮಂತ್ರ ಇರುವ ಪುಸ್ತಕವನ್ನು ತೆಗೆದುಕೊಂಡು ಬಾ, ಆದರೆ ಬರುವಾಗ ಪುಸ್ತಕವನ್ನು ತೆರೆದು ನೋಡಬೇಡ' ಎಂದ. ಆದರೆ ಜಸೌಂದಿ ಪುಸ್ತಕ ತೆರೆದು ಮಂತ್ರ ಕಲಿತ. ರಾಜ ತನ್ನ ಪ್ರಾಣ ಕೊಟ್ಟು ಗಿಳಿಯನ್ನು ಬದುಕಿಸಿದಾಗ ಜಸೌಂದಿ ಮೋಸದಿಂದ ತನ್ನ ಜೀವವನ್ನು ರಾಜನ ಶರೀರದೊಳಗೆ ಬಿಟ್ಟುಕೊಂಡ. ರಾಣಿಗೆ, `ನಡಿ, ಅರಮನೆಗೆ ಹೋಗೋಣ' ಎಂದ.ರಾಣಿಗೆ ಇವನು ರಾಜನಲ್ಲ ಎಂದು ಅನ್ನಿಸಿತು. ಅರಮನೆಗೆ ಬಂದ ಅವಳು `ನಾನು ಮೂರು ವರ್ಷಗಳವರೆಗೆ ವ್ರತ ಕೈಗೊಳ್ಳುವೆ. ಆಮೇಲೆ ನಾವು ರಾಜ-ರಾಣಿಯಂತೆ ಇರೋಣ' ಎಂದಳು.ಇತ್ತ ರಾಣಿ ರಾಜ್ಯದ ಜನರಿಗೆ, `ಯಾರು ಎಷ್ಟು ಗಿಳಿಗಳನ್ನು ಹಿಡಿದು ತರುತ್ತಾರೋ ಅವರಿಗೆ ಅಷ್ಟು ಯೋಗ್ಯ ಬಹುಮಾನ ಕೊಡಲಾಗುವುದು' ಎಂದು ಹೇಳಿದಳು. ಒಂದು ದಿನ ಬೇಟೆಗಾರನ ಬಲೆಗೆ `ರಾಜಗಿಳಿ' ಸಿಲುಕಿತು. ಆ ಗಿಳಿಯೇ ಅವನಿಗೆ `ನನ್ನನ್ನು ರಾಣಿಗೆ ಮಾರು' ಎಂದು ಹೇಳಿತು. ರಾಣಿ ಆ ಗಿಳಿಯನ್ನು ಸುರಕ್ಷಿತವಾಗಿ ಇಟ್ಟುಕೊಂಡಳು. ಒಂದು ದಿನ ಒಂದು ಬೆಕ್ಕು ಒಂದು ಗಿಳಿಯನ್ನು ಹಿಚುಕಿ ಸಾಯಿಸಿತು. ರಾಣಿ ಜಸೌಂದಿಗೆ, `ಮಹಾರಾಜರೇ, ನೀವು ಈ ಸತ್ತ ಗಿಳಿಗೆ ಪ್ರಾಣ ಬರುವಂತೆ ಮಾಡಿ' ಎಂದು ವಿನಂತಿಸಿದಳು. ಜಸೌಂದಿ ತನ್ನ ಪ್ರಾಣವನ್ನು ಗಿಳಿಗೆ ಹಾಕಿ ಅದನ್ನು ಬದುಕಿಸಿದ. ಆಗ `ರಾಜಗಿಳಿ' ಆ ಗಿಳಿಯಿಂದ ಜೀವ ತೆಗೆದು ತನ್ನೊಳಗೆ ಹಾಕಿಕೊಂಡಿತು. ಜಸೌಂದಿ ಆ ಕೂಡಲೇ ಸತ್ತು ಹೋದ. ಬಳಿಕ ಗಿಣಿರೂಪದ ರಾಜ ಮತ್ತು ರಾಣಿ ಸುಖವಾಗಿ ರಾಜ್ಯವಾಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry