ಭಾನುವಾರ, ಮಾರ್ಚ್ 7, 2021
20 °C

ಜಲಕಲಹ: ಹೊಸ ಯಕ್ಷಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲಕಲಹ: ಹೊಸ ಯಕ್ಷಪ್ರಯೋಗ

ಪೌರಾಣಿಕ ಪ್ರಸಂಗಗಳನ್ನು ರಂಗದ ಮೇಲೆ ತಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಕ್ಷಗಾನ ಕಲಾಪ್ರಕಾರ ಬಹು ಸಮರ್ಥವೆನಿಸಿದೆ. ಕರಾವಳಿ ತೀರದ ಹಿರಿಯರಿಂದ ಹಿಡಿದು ಕಿರಿಯರ ತನಕ ರಾಮಾಯಣ ಮಹಾಭಾರತ ಪುರಾಣಗಳನ್ನು ಲೀಲಾಜಾಲವಾಗಿ ಜನರು ಮಾತಾಡಿಕೊಳ್ಳುವಂತೆ ಮಾಡಿರುವುದು ಯಕ್ಷಗಾನ. ಆದರೆ ಅಷ್ಟಕ್ಕೇ ಸೀಮಿತಗೊಳ್ಳದೆ ಐತಿಹಾಸಿಕ ಘಟನೆಗಳು ಕಾಲ್ಪನಿಕ ಕಥೆಗಳು, ಜಾನಪದೀಯ ಪದಗಳೂ ಹಾಗೂ ಅತಿ ನವ್ಯ ಸಾಮಾಜಿಕ ವಿಷಯಗಳನ್ನು ಇಟ್ಟುಕೊಂಡು ಯಕ್ಷಗಾನ ಪ್ರಸಂಗ ರೂಪ ತಳೆದಿದೆ.ಇಂತಹದೇ ಇನ್ನೊಂದು ಯಕ್ಷಗಾನ ಪ್ರಯೋಗಕ್ಕೆ ರಾಧಾಕೃಷ್ಣ ಉರಾಳ್ ಸಿದ್ಧತೆ ನಡೆಸಿದ್ದು, ಇದೇ ಭಾನುವಾರ (ಜೂನ್ 21) ಸಂಜೆ 6ಕ್ಕೆ ಕೆ.ಎಸ್.ಆರ್.ಟಿ.ಸಿ. ಲೇಔಟ್ ಉತ್ತರಹಳ್ಳಿಯಲ್ಲಿ ಚಿಕ್ಕಲಸಂದ್ರದ ಸಿದ್ಧಿಗಣಪತಿ ದೇವಾಲಯ ಸಮಿತಿ ಆವರಣದಲ್ಲಿನ ಮನೋರಂಜನಿ ಸಭಾಂಗಣದಲ್ಲಿ ‘ಜಲಕಲಹ’ ನಡೆಯಲಿದೆ.ಮೌಖಿಕವಾಗಿ ಬಂದ ಗಂಗೆ ಗೌರಿಯರ ಹಗರಣದ ಜಾನಪದೀಯ ಹಾಡುಗಳು ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದು ತುರುವೇಕೆರೆ ದೊಂಬಿದಾಸರ ಪದಗಳು ಈಗಾಗಲೇ ದಾಖಲಾಗಿವೆ. ಗಂಗೆ ಮತ್ತು ಗೌರಿಯರ ನಡುವಿನ ಮಾತಿನ ಮುನಿಸು ಪರಸ್ಪರ ಪ್ರತಿಷ್ಠೆಯ ಕಾರಣವಾಗಿ ಜಾತಿ, ಕಸುಬುಗಳ ತಿಕ್ಕಾಟದ ಮಾತಿನ ಮುನಿಸನ್ನು ಮೀರಿ, ಕೈ ಕೈ ಮಿಲಾಯಿಸಿ ಕಾದಾಟಕ್ಕೆ ಬಂದಾಗ ಗೌರಿ ಸೂತಕವಾಗುತ್ತಾಳೆ.ಮಡಿ ಮೈಲಿಗೆಯನ್ನು ಕಳೆಯಲು ನೀರು ಸಿಗದೆ ಪರದಾಡುತ್ತಾಳೆ. ಗಂಗೆ ಆಕೆಗೆ ನೀರು ಸಿಗದಂತೆ ಮಾಡುತ್ತಾಳೆ. ನೀರಿಲ್ಲದೆ ಜಗವಿಲ್ಲ, ಅದರ ಪ್ರಾಮುಖ್ಯವನ್ನು ಅರಿತು ಕಾಪಿಟ್ಟುಕೊಳ್ಳುವುದು ಮುಖ್ಯ. ಹಣ ಕೊಟ್ಟರೂ, ಯಾವುದೇ ವಶೀಲಿ ಮಾಡಿದರೂ ಸಿಗದಂತ ಜಲಸಂಪತ್ತಿನ ಕುರಿತಾಗಿ ಅಸಡ್ಡೆ ಮಾಡಿದರೆ ಆಗುವ ದೀನ ಸ್ಥಿತಿ ಇಲ್ಲಿ ಅನಾವರಣಗೊಳ್ಳಲಿದೆ. ನೀರಿಗಿಂತ ಹೆಚ್ಚಾಗಿ ವೈಯಕ್ತಿಕ ಪ್ರತಿಷ್ಠೆಯನ್ನೇ ಇರಿಸಿಕೊಂಡು  ಕಾಲ್ಕೆರೆಯುತ್ತಿರುವ ನಂಜು ಮನಸುಗಳಿಗೆ ಚುಚ್ಚುವಂತಹ ಕಥಾಸಾರ ‘ಜಲಕಲಹ’ ಪ್ರಯೋಗದಲ್ಲಿದೆ.ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗ ಹಾಗೂ ಸಮಗ್ರ ಆರೋಗ್ಯ ಚಿಂತನೆ ಕುರಿತಾಗಿ ವೈ.ವಿ. ಗುಂಡೂರಾವ್, ಯೋಗಗುರು ರಂಗರಾಜು ಅವರಿಂದ ಉಪನ್ಯಾಸವಿದೆ. ‘ಜಲಕಲಹ’ ಪ್ರಯೋಗವನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ಸಿದ್ಧಗೊಳಿಸಲಾಗಿದೆ.  ಪ್ರದರ್ಶನಕ್ಕೆ ಕಲಾಕದಂಬ, ಸಿದ್ಧಿಗಣಪತಿ ದೇವಾಲಯ ಸಮಿತಿ, ಸೋಹಂ ಕ್ರಿಯಾಯೋಗ ಸಹಕಾರ ನೀಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.