ಶುಕ್ರವಾರ, ಜೂನ್ 18, 2021
20 °C

ಜಲದ ಕಣ್ಣು ತೆರೆಸುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನನ್ನದು ನೆನಪುಗಳ ರಾಜಕಾರಣ. ಜನರು ಏನನ್ನು ಮರೆಯಬಾರದಿತ್ತೋ ಅದನ್ನು ಮರೆತಿದ್ದಾರೆ. ಅವರನ್ನು ಆ ವಿಸ್ಮೃತಿಯಿಂದ ಹೊರಗೆಳೆದು ತರುವುದೇ ಪರ್ಯಾಯ ರಾಜಕಾರಣ. ಅವರಿಗೆ ನೆನಪುಗಳು ಮರುಕಳಿಸಿದರೆ ಅವರ ಬಡತನವನ್ನೂ ಅಸಹಾಯ­ಕತೆಯನ್ನೂ ದುರುಪಯೋಗ­ಪಡಿಸಿ­ಕೊಂಡು ಗೆಲ್ಲುತ್ತಿದ್ದವರು ಹೇಳ ಹೆಸರಿ­ಲ್ಲದೆ ಅಳಿಸಿ ಹೋಗುತ್ತಾರೆ.’ ಕೋಟಿಗಾ­ನಹಳ್ಳಿ ರಾಮಯ್ಯ ಶಿವಗಂಗೆ ಬೆಟ್ಟದ ಮೇಲಿರುವ  ‘ಆದಿಮ’ದ ಅಂಗಳದಲ್ಲಿ ಕುಳಿತು ಹೇಳುತ್ತಲೇ ಹೋದರು.ದಲಿತ ಚಳವಳಿ, ರಂಗಭೂಮಿ, ಕಾವ್ಯ, ಸಾಂಸ್ಕೃತಿಕ ಆಂದೋಲನಗಳ ಮೂಲಕ ಪರಿಚಿತರಾಗಿರುವ ರಾಮಯ್ಯ ಕೋಲಾರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ. ಎರಡು ಹ್ಯಾಟ್ರಿಕ್‌ ದಾಖಲೆಯೊಂದಿಗೆ ಸ್ಪರ್ಧೆಗೆ ಇಳಿಯುತ್ತಿರುವ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿಬಿಡುವ ಭರವಸೆಯಲ್ಲಿ ರಾಮಯ್ಯ ಮಾತನಾಡುತ್ತಿದ್ದರು.ಎಂಬತ್ತರ ದಶಕದ ಉತ್ತರಾರ್ಧದಲ್ಲಿ ದಲಿತ ಸಂಘರ್ಷ ಸಮಿತಿ ಸಕ್ರಿಯ ರಾಜಕಾರಣಕ್ಕೆ ಇಳಿದಾಗ ಅದನ್ನು ಖಂಡತುಂಡವಾಗಿ ವಿರೋಧಿಸಿದ್ದವರಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಪ್ರಮುಖರು. ದಲಿತ ಸಂಘರ್ಷ ಸಮಿತಿ ಚಳವಳಿಯ ರಾಜಕಾರಣದಿಂದ ಶಕ್ತಿ ಪಡೆದುಕೊಂಡ ಸಂಘಟನೆ. ಆ ಹಾದಿಯಿಂದ ವಿಮುಖವಾಗ ಬಾರದು ಎಂಬುದು ಅವರ ನಿಲುವಾಗಿತ್ತು. ಆದರೆ ಅಂದಿನ ರಾಜಕೀಯ ಒತ್ತಡಗಳು ದಲಿತ ಸಂಘರ್ಷ ಸಮಿತಿಯನ್ನು ರಾಜಕೀಯ­ದತ್ತ ಸೆಳೆಯಿತು. ಆ ಮೇಲಿನಿಂದ ಅದು ವಿಘಟಿತವಾಗುತ್ತಲೇ ಹೋಯಿತು. ಈಗ ಹಲವು ಬಣಗಳಾಗಿ ಅಸ್ತಿತ್ವದಲ್ಲಿದೆ.‘ಸಕ್ರಿಯ ರಾಜಕಾರಣ ಹೋರಾಟ­ಗಾರನ ಕೈಗಳನ್ನು ಕಟ್ಟಿ ಹಾಕುತ್ತದೆ ಎನ್ನುತ್ತಿದ್ದವರು ಈಗ ನೀವೇ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದೀರಲ್ಲಾ’ ಎಂಬ ಪ್ರಶ್ನೆ ಮುಂದಿಟ್ಟರೆ ರಾಮಯ್ಯ ಕಾಲ–ದೇಶಗಳ ಪರಿಭಾಷೆಯಲ್ಲಿ ತಮ್ಮ ಅಂದಿನ ನಿಲುವು ಮತ್ತು ಇಂದಿನ ನಿಲುವುಗಳೆರಡನ್ನೂ ಸಮರ್ಥಿಸುತ್ತಾ ಸಾಗಿದರು. ‘ಯಾವ ಸಿದ್ಧತೆಯೂ ಇಲ್ಲದೆ ದಲಿತ ಸಂಘರ್ಷ ಸಮಿತಿ ಸಕ್ರಿಯ ರಾಜಕಾರಣಕ್ಕೆ ಇಳಿಯಲು ಹೊರಟಿತ್ತು. ಇದು ಆತ್ಮಹತ್ಯಾಕಾರಿ ಎಂದು ನಾನು ಹೇಳಿದೆ. ನಾನು ಹೇಳಿದಂತೆಯೇ ಆಯಿತು.

ಅಂದು ರಾಮಕೃಷ್ಣ ಹೆಗಡೆ­ಯ­ವರ ಬಳಿ ದಸಂಸ ಆರು ಸ್ಥಾನಗಳಿಗೆ ಬೇಡಿಕೆಯಿಟ್ಟಿತ್ತು. ಕೊನೆಗೆ ದೊರೆತದ್ದು ಎರಡು. ಇದೇ ಮೊದಲ ಹಂತದ ಸೋಲು. ಈ ಬಗೆಯ ಚೌಕಾಸಿಗಳಲ್ಲಿ ಯಶಸ್ವಿಯಾಗುವುದಕ್ಕೆ ಒಂದು ಸಿದ್ಧತೆಯ ಅಗತ್ಯವಿಲ್ಲದೇ ಹೋದರೆ ನಾವು ಭಿಕ್ಷೆಗಳಿಗೆ ತೃಪ್ತಿ ಪಡಬೇಕಾ­ಗುತ್ತದೆ. ಬಿ.ಕೃಷ್ಣಪ್ಪನವರು ಅದನ್ನು ಒಪ್ಪಿಕೊಂಡು ಬಂದರು. ಅಂದೇ ನಾನು ಅವರಿಗೆ, ನೀವು ಸೋಲುತ್ತೀರಿ ಎಂದು ಹೇಳಿದ್ದೆ. ಅದು ಹಾಗೆಯೇ ಆಯಿತು.

ಅಷ್ಟು ಮಾತ್ರ ಅಲ್ಲ ದಸಂಸದ ಮುಂದಿನ ರಾಜಕೀಯ ನಡೆಗಳೆಲ್ಲವೂ ತಪ್ಪಾಗುತ್ತಲೇ ಹೋದವು. ಒಮ್ಮೆ ಜನತಾದಳದ ಜೊತೆಗೆ ಹೋಗಿ ಮಾಡಿದ ತಪ್ಪನ್ನೇ ಮುಂದೆ ಇಡೀ ಸಂಘಟನೆಯನ್ನು ಬಿಎಸ್‌ಪಿ ಜೊತೆ ವಿಲೀನಗೊಳಿಸುವ ನಿರ್ಧಾರದಲ್ಲಿಯೂ ಆಯಿತು. ಪರಿಣಾಮವಾಗಿ ದಸಂಸ ಸಕ್ರಿಯ ರಾಜ­ಕಾರಣ­ದಲ್ಲಿ ಯಶಸ್ವಿಯಾ­ಗಲಿಲ್ಲ. ಚಳವಳಿಯ ರಾಜಕಾರಣದಲ್ಲಿ ಅದಕ್ಕಿದ್ದ ಶಕ್ತಿ ಹಂಚಿ ಹೋಯಿತು’.‘ಆದರೆ ಇಂದಿನ ಸ್ಥಿತಿ ಹಾಗಿಲ್ಲ. ಇದು ಸಕ್ರಿಯ ರಾಜಕಾರಣದಲ್ಲಿ ನನ್ನಂಥವರು ತೊಡಗಿಸಿಕೊಳ್ಳಲೇ ಬೇಕಾದ ಕಾಲ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ದುಡ್ಡಿನ ರಾಜಕಾರಣದ ಈ ಕಾಲದಲ್ಲಿ ಅದಕ್ಕೊಂದು ಪರ್ಯಾಯವಿದೆ, ಅದಕ್ಕೆ ದುಡ್ಡು ಬೇಕಾಗಿಲ್ಲ ಎಂದು ತೋರಿಸಿಕೊಟ್ಟಿದೆ. ಜನರೂ ಇಂಥದ್ದೊಂದು ಪರ್ಯಾಯವನ್ನು ಎಲ್ಲೆಡೆ ನಿರೀಕ್ಷಿಸುತ್ತಿದ್ದಾರೆ. ಎಲ್ಲ ನಿರಾಶೆಗಳ ನಡುವೆ ಇಂಥದ್ದೊಂದು ಸಾಧ್ಯತೆಯನ್ನು ತೆರೆದ ಪಕ್ಷದಿಂದ ಸ್ಪರ್ಧಿಸುವುದು ಈಗ ನನಗೆ ಸರಿ ಎನಿಸುತ್ತಿದೆ’ಸ್ವಾತಂತ್ರ್ಯೋತ್ತರ ದಿನಗಳಿಂದಲೂ ಕೋಲಾರ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದೆ. ಕ್ಷೇತ್ರ ಪುನರ್ವಿಂಗಡಣೆಯಾದ ಮೇಲೂ ಈ ಮೀಸಲಾತಿ ಬದಲಾಗಿಲ್ಲ. ಅದಕ್ಕೂ ಮಿಗಿಲಾಗಿ ಇದು ಒಮ್ಮೆ ಅಂದಿನ ಜನತಾಪಕ್ಷಕ್ಕೆ ಒಲಿದದ್ದು ಬಿಟ್ಟರೆ ಮತ್ತೆ ಎಂದೂ ಕಾಂಗ್ರೆಸ್‌ನಿಂದ ಈ ಕ್ಷೇತ್ರ ದೂರವಾಗಿಲ್ಲ. ಆರು ಚುನಾವಣೆಗಳಿಂದ ಕೆ.ಎಚ್.ಮುನಿಯಪ್ಪ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಈಗಂತೂ ಸಚಿವನಾಗಿ ಮಾಡಿದ ಕೆಲಸಗಳ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಎಲ್ಲದರ ಆಚೆಗೆ ಮುನಿಯಪ್ಪನವರ ಖ್ಯಾತಿ ಇರುವುದೇ ಪಕ್ಷಾತೀತವಾಗಿ ತಮ್ಮ ವೋಟುಗಳಿಗಾಗಿ ‘ಸಮನ್ವಯ’ ಸಾಧಿಸುವ ಅವರ ತಂತ್ರದಲ್ಲಿ.ಇಲ್ಲಿ ಆಮ್ ಆದ್ಮಿ ಪಾರ್ಟಿಗೆ ಇರುವ ಸಾಧ್ಯತೆಗಳೆಷ್ಟು ಎಂದರೆ ರಾಮಯ್ಯ ಭರವಸೆಯಿಂದ ಹೇಳುತ್ತಾರೆ ‘ಕೋಲಾರದ ಮಣ್ಣು ನೀರಿಗಾಗಿ ಕಾತರಿಸುತ್ತಾ ಇರುವಂತೆಯೇ ಪರ್ಯಾಯ ರಾಜಕಾರಣಕ್ಕಾಗಿಯೂ ಕಾತರಿಸುತ್ತಿದೆ’. ಕೆ.ಎಚ್. ಮುನಿಯಪ್ಪನವರ ಕೋಟೆಗಳಲ್ಲಿ ಬಿರುಕುಗಳನ್ನು ತರುವುದಕ್ಕೆ ಕಳೆದ ಆರು ಚುನಾವಣೆ­ಗಳಲ್ಲಿ ಬಿಜೆಪಿ, ಜೆಡಿಎಸ್, ಬಿಎಸ್‌ಪಿ­ಗಳೆಲ್ಲವೂ ಹಲವು ರೀತಿಯ ಪ್ರಯತ್ನಗಳನ್ನು ನಡೆಸಿ ಈ ತನಕ ಸೋತಿವೆ. ಈ ಬಾರಿಯೂ ಇವೆಲ್ಲವೂ ಮುಖ್ಯವಾಹಿನಿಯ ತಂತ್ರಗಳ ಮೂಲಕ ಸಕ್ರಿಯವಾಗಿವೆ. ಎಲ್ಲಾ ಮುಖ್ಯವಾಹಿನಿಯ ಪಕ್ಷಗಳಿಗೂ ಕೋಲಾರದ ಆದ್ಯತೆ­ಗಳು ಮನೋಗತ.

ಇಲ್ಲಿ ಭಾಷಣಗಳಿಗಾಗಿ ಶಾಶ್ವತ ನೀರಾವರಿ ಯೋಜನೆ ಬೇಕು. ಉದ್ಯೋಗಕ್ಕೆ ಉದ್ದಿಮೆ­ಗಳು ಬೇಕು. ನೆನಪಿಸಿಕೊಳ್ಳುವುದಕ್ಕೆ ಕೋಲಾರದ ಚಿನ್ನದ ಗಣಿಯನ್ನು ಪುನರಾರಂಭಿಸುವ ಭರವಸೆಯೂ ಬೇಕು. ಇದೇ ಹೊತ್ತಿಗೆ ಓಟುಗಳನ್ನು ಪಡೆಯಲು ಏನೇನು ಬಳಸಬೇಕು ಎಂಬುದೂ ಅವುಗಳಿಗೆ ತಿಳಿದಿದೆ. ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳ ಮತದಾರರು ತಮ್ಮ ಅಭ್ಯರ್ಥಿಗಳಿಂದ ನೇರ ನಗದು ವರ್ಗಾ­ವಣೆಯ ಲಾಭ ಪಡೆದಿದ್ದರು. ಟ್ಯಾಂಕರ್ ಜಲಭಾಗ್ಯವೂ ದೊರೆತಿತ್ತು. ಚುನಾವಣೆ ಘೋಷಣೆ­ಯಾದದ್ದರ ಹಿಂದೆಯೇ ಬೇಸಿಗೆ ಮುಗಿಯುವ ತನಕವೂ ಮತದಾನ ಆಗದೇ ಇರಲಿ ಎಂದು ಆನೇಕರು ಆಶಿಸಿದ್ದೂ ಇತ್ತು. ಇದಕ್ಕೆ ಕಾರಣ ಕೆ.ಜಿ.ಎಫ್.ನ ಗೃಹಿಣಿಯೊಬ್ಬರ ಮಾತುಗಳಲ್ಲಿದೆ,  ‘ಬೇಸಿಗೆ ಮುಗಿ­ಯುವ ತನಕವೂ ಯಾರಾದರೊಬ್ಬರು ಅಭ್ಯರ್ಥಿ ನೀರನ್ನೂ ಕೊಡುತ್ತಿದ್ದರು. ಕಳೆದ ಬೇಸಿಗೆಯ ದಿನ­ಗಳನ್ನು ನಾವು ಹೀಗೆಯೇ ಕಳೆದಿದ್ದೆವು. ಈ ವರ್ಷ ಯಾರೂ ಇನ್ನೂ ನೀರು ಕೊಡುತ್ತಿಲ್ಲ!’ತಕ್ಷಣದ ನೀರಿನ ನಿರೀಕ್ಷೆಯಲ್ಲಿರುವ ಜನರಿಗೆ ಕೋಟಿಗಾನಹಳ್ಳಿ ರಾಮಯ್ಯ ಮುಂದಿಡುತ್ತಿರುವ ‘ನಮ್ಮ ನೆಲದ ಜಲದ ಕಣ್ಣುಗಳನ್ನು ತೆರೆಯುವ ಕೆಲಸ’. ಇದು ಎಷ್ಟರ ಮಟ್ಟಿಗೆ ಮತದಾರರಿಗೆ ಆಕರ್ಷಣೀಯ ಎಂಬ ಪ್ರಶ್ನೆಗೂ ರಾಮಯ್ಯ ಉತ್ತರಿಸುತ್ತಾರೆ, ‘ನಮ್ಮ ಪಕ್ಷ ಮಾಡುತ್ತಿರುವುದು ನೆನಪಿನ ರಾಜಕಾರಣ. ಜನಗಳಿಗೆ ಅವರ ಶಕ್ತಿಯನ್ನು ನೆನಪಿಸಿಕೊಡುವುದು. ನಾವು ಅವರೊಂದಿಗೆ ಸೇರಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೇ ಹೊರತು ನಮ್ಮ ನೆಲಕ್ಕೆ ಹೊರತಾದ, ಕಾರ್ಯರೂಪಕ್ಕೆ ಬಾರದ ಭರವಸೆ­ಗಳನ್ನು ಕೊಡುವುದು ನಮ್ಮ ರಾಜ­ಕಾರಣವಲ್ಲ. ನೇತ್ರಾವತಿ ತಿರುಗಿಸುವುದು, ಎತ್ತಿನ ಹೊಳೆಯ ನೀರು ಎತ್ತಿ ತರುವುದೆಲ್ಲಾ ಬೂಟಾಟಿಕೆಯ ಮಾತು ಎಂದು ಜನರಿಗೆ ಹೇಳುತ್ತೇನೆ. ನಮ್ಮ ಮುಚ್ಚಿ ಹಾಕಿರುವ ಜಲದ ಕಣ್ಣು ತೆರೆಯುವ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೇನೆ.’ಕೋಲಾರ ಜಿಲ್ಲೆ ಕರ್ನಾಟಕದ ಅನೇಕ ಜನಪರ ಚಳವಳಿಗಳನ್ನು ಆರಂಭಿಸಿದ ಜಿಲ್ಲೆ. ಪರಿಶಿಷ್ಟ ಜಾತಿಗಳ ಮತದಾರರು ಅತಿ ಹೆಚ್ಚು ಸಂಖ್ಯೆಯಲ್ಲಿರುವ ದೇಶದ ಕೆಲವೇ ಜಿಲ್ಲೆಗಳಲ್ಲಿ, ಅತಿ ಹಳೆಯ ಮೀಸಲು ಕ್ಷೇತ್ರ­ಗಳಲ್ಲಿ ಇದೂ ಒಂದು. ಆದರೆ ಇವೆಲ್ಲಕ್ಕೂ ಸಕಾರಾತ್ಮಕ ಆಯಾಮಗಳಿರುವಂತೆ ಋಣಾತ್ಮಕ ಸಾಮಾಜಿಕ ವಾಸ್ತವಗಳೂ ಇಲ್ಲಿವೆ. ಯಾರು ಗೆದ್ದರೆ ನಮಗೇನು ಎಂಬ ದಲಿತೇತರ ಜಾತಿಗಳ ನಿರ್ಲಕ್ಷ್ಯದಲ್ಲಿಯೇ ಒಂದು ಬಗೆಯ ಜಾತಿ ಯಜಮಾನಿಕೆ ಮನೋ­ಧರ್ಮ­ವಿದೆ. ಇದನ್ನು ಪೋಷಿಸುವ ಮುಖ್ಯವಾಹಿನಿ ರಾಜ­ಕಾರಣ ಆರು ದಶಕಕ್ಕೂ ಮೀರಿ ಬೆಳೆದುನಿಂತಿದೆ. ನೆಲ­ದೇವತೆಗಳ ಜಾಡು ಹಿಡಿದು ಪರ್ಯಾಯ ರಾಜ­ಕಾರಣ ಮಾಡಲು ಹೊರಟಿರುವ ರಾಮಯ್ಯ ಈ ಯಾಜ­­ಮಾನ್ಯವನ್ನು ಸಣ್ಣ ಮಟ್ಟಿಗೆ ಮೀರಿದರೂ ಅದು ದೊಡ್ಡ ಸಾಧನೆಯಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.