ಜಲಲ ಜಲ ನಾದ

7

ಜಲಲ ಜಲ ನಾದ

Published:
Updated:

ಅಲೆ ಅಲೆಯಾಗಿ ತೇಲಿ ಬರುವ ಸಮುದ್ರದ ನೀರಿನ ನಾದ ವಿಶಿಷ್ಟ; ಜಲಪಾತದ ಭೋರ್ಗರೆತದ ಶಬ್ದ ವಿಭಿನ್ನ; ನದಿಯಲ್ಲಿ ಹರಿಯುವ ಶುದ್ಧ ಜಲದ್ದು ಜುಳುಜುಳು ನಾದ. ಘನವಾದ್ಯ ಜಲತರಂಗ ವಾದನದಲ್ಲಿ ಕೇಳಿ ಬರುವುದು ರಾಗಾಧಾರಿತ ಸುನಾದ. ಅದು ಕೂಡ ಸಪ್ತಸ್ವರಗಳಿಂದ ಕೂಡಿದ ನಾದ ಧಾರೆ. ಅದೇ ಜಲಲ ಜಲ ನಾದ... ಕಿವಿಗೆ ಹಿತವೆನಿಸುವ ರಾಗಾಲಾಪ, ತಾನ್, ತರಾನ.

ಪಿಂಗಾಣಿ ಬಟ್ಟಲುಗಳಲ್ಲಿ ನೀರು ಹಾಕಿ ವಿಶಿಷ್ಟ ಕಂಪನದ ಮೂಲಕ ನಾದ ತರುವ ಈ ವಾದ್ಯ ಪ್ರಕಾರ ಜಲತರಂಗ ಘನವಾದ್ಯಗಳ ಸಾಲಿಗೆ ಸೇರಿದ್ದು. ಇದನ್ನು ಇಂಗ್ಲಿಷ್‌ನಲ್ಲಿ `ಬೀಟ್ ಇನ್‌ಸ್ಟ್ರುಮೆಂಟ್~ ಎನ್ನುತ್ತಾರೆ. ನೀರನ್ನು ಬಳಸಿ ಶ್ರುತಿ ಮಾಡಿ ನುಡಿಸುವ ಏಕೈಕ ವಾದ್ಯವಿದು. ಲೋಹ ಅಥವಾ ಸೆರಾಮಿಕ್ ಬಟ್ಟಲುಗಳಲ್ಲಿ ನೀರು ತುಂಬಿ ಮರದ ಕೋಲುಗಳ ಸಹಾಯದಿಂದ ನುಡಿಸುವ ಈ ಅಪರೂಪ ವಾದ್ಯದ ನಾದ ಕೇಳಲು ಬಹಳ ಇಂಪು.

ಜಲ ತರಂಗದ ಉಗಮ ರೋಚಕ. ಸಂಗೀತ ವಿದ್ವಾಂಸರೊಬ್ಬರು ನದಿ ದಂಡೆ ಮೇಲೆ ಕುಳಿತಿದ್ದರಂತೆ. ಆಗ ನೀರಿನ ಜುಳುಜುಳು ನಾದ ಅವರನ್ನಾಕರ್ಷಿಸಿತು. ಮನೆಗೆ ಬಂದ ಕೂಡಲೇ ಪಾತ್ರೆಗಳಲ್ಲಿ ನೀರು ಹಾಕಿ ಸಣ್ಣ ಕೋಲಿನ ಸಹಾಯದಿಂದ ಬಾರಿಸಿದಾಗ ವಿಶಿಷ್ಟ ನಾದ ಹೊಮ್ಮಿತು. ಇದರ ಸಂಸ್ಕರಿತ ರೂಪವೇ ಜಲತರಂಗ.

`ಜಲತರಂಗದಲ್ಲಿ ಒಂದೇ ಸ್ವರ ಬಹಳ ಹೊತ್ತು ನಿಲ್ಲುವುದಿಲ್ಲ. ರಾಗಕ್ಕೆ ಸಂಬಂಧಪಟ್ಟ ಹಾಗೆ ಪಿಂಗಾಣಿ ಬಟ್ಟಲುಗಳಿಗೆ ನೀರು ಹಾಕಿ ಸ್ವರ ಹೊಂದಿಸಿಕೊಳ್ಳಬೇಕು. ಸಂಗೀತದ ಕೋಮಲ, ತೀವ್ರ ಸ್ವರಗಳಿಗೆ ಅನುಗುಣವಾಗಿ ನೀರು ಹಾಕಿ ಶ್ರುತಿ ಮಾಡಿಕೊಳ್ಳಬೇಕು. ಪ್ರತೀ ರಾಗಕ್ಕೂ ನೀರು ಬದಲಾಯಿಸುತ್ತಿರಬೇಕು. ಈ ವಾದ್ಯ ನುಡಿಸಲು ಮುಂದೆ ಬರುವವರ ಸಂಖ್ಯೆ ಕಡಿಮೆ ಎನ್ನುತ್ತಾರೆ ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯಲ್ಲಿ ಜಲತರಂಗ ನುಡಿಸುವ ವಿರಳಾತಿ ವಿರಳ ಕಲಾವಿದರಲ್ಲಿ ಒಬ್ಬರಾದ ಪಂ. ಹೆಗ್ಗಾರ ರಾಜಾರಾಮ್ ಹೆಗಡೆ (ರಾಜು ಹೆಗಡೆ).

`ಜಲತರಂಗ ನುಡಿಸಲು ರಾಗಗಳನ್ನು ಆಧರಿಸಿ ಒಟ್ಟು 20 ಬಟ್ಟಲುಗಳ ಅವಶ್ಯಕತೆಯಿದೆ. ಮೊದಲು 12 ಬಟ್ಟಲುಗಳಿಗೆ (ನಾಲ್ಕು ದೊಡ್ಡ ಗಾತ್ರ, ಉಳಿದೆಲ್ಲವೂ ಒಂದೇ ಅಳತೆಯದ್ದು) ನೀರು ಹಾಕಿ ಶ್ರುತಿ ಮಾಡಿಕೊಳ್ಳಬೇಕು. ನೀರು ಹಾಕುವಾಗ ಕೊಂಚ ಏರುಪೇರಾದರೂ ಶ್ರುತಿ ಕೆಡುತ್ತದೆ. ಅಲ್ಲದೆ ಇದರಲ್ಲಿ ಮಂದ್ರ ಮತ್ತು ತಾರಕ ಎರಡೇ ಸ್ಥಾಯಿಗಳನ್ನು ನುಡಿಸಲು ಸಾಧ್ಯ ಎಂದು ವಿವರಿಸುತ್ತಾರೆ ಧಾರವಾಡ ಆಕಾಶವಾಣಿಯ ಗ್ರೇಡೆಡ್ ಕಲಾವಿದರಾಗಿರುವ ರಾಜು ಹೆಗಡೆ.

`ಒಂದು ಕಛೇರಿಯಲ್ಲಿ ಎರಡು ಮೂರು ರಾಗ, ದೇವರನಾಮಗಳನ್ನು ನುಡಿಸಬಹುದು. ಇದಕ್ಕೆ ತಬಲಾ, ತಂಬೂರಿ ಸಾಥ್ ಇದ್ದರೆ ಸಾಕು ಎನ್ನುವ ಅವರು, ಜನಪ್ರಿಯ ರಾಗಗಳಾದ ಮಾಲ್‌ಕೌಂಸ್, ಅಭೋಗಿ, ಕಾನಡಾ, ಭೀಮಪಲಾಸಿ, ಬಿಭಾಸ್, ಬೈರಾಗಿ ಭೈರವ್, ಸಾರಂಗ, ಹಂಸಧ್ವನಿ, ದುರ್ಗಾ, ಯಮನ್ ರಾಗಗಳನ್ನು ತಾವು ಹೆಚ್ಚಾಗಿ ಜಲತರಂಗ ಕಛೇರಿಗಳಲ್ಲಿ ನುಡಿಸಾಣಿಕೆಗೆ ಆಯ್ಕೆ ಮಾಡಿಕೊಳ್ಳುವುದು. ಜುಗಲ್‌ಬಂದಿ ನುಡಿಸುವುದಾದರೆ ಸಂತೂರ್ ವಾದನದ ಜತೆ ಜಲತರಂಗ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ವಯೊಲಿನ್ ಜತೆಯೂ ಅನೇಕ ಕಛೇರಿ ನೀಡಿರುವುದಾಗಿ ಹೇಳುತ್ತಾರೆ ಅವರು. 

ಉತ್ತರಾದಿ ಮತ್ತು ದಕ್ಷಿಣಾದಿ ಶೈಲಿಗಳಲ್ಲಿ ಜಲತರಂಗ ನುಡಿಸುವ ಕಲಾವಿದರು ಬೆರಳೆಣಿಕೆಯಷ್ಟು ಮಾತ್ರ. ರಾಜು ಹೆಗಡೆ ಅವರನ್ನು ಬಿಟ್ಟರೆ ಹುಬ್ಬಳ್ಳಿಯ ಶಶಿಕಲಾ ಎ. ದಾನಿ ಮತ್ತು ಪುಣೆಯ ಮಿಲಿಂದ್ ತುಲನ್‌ಕರ್ ಹಿಂದೂಸ್ತಾನಿ ಶೈಲಿಯ ಜಲತರಂಗ ಕಲಾವಿದರು. ಅನಯಾಂಪಟ್ಟಿ ಎಸ್. ಗಣೇಶನ್, ಬಿ.ಡಿ. ವೇಣುಗೋಪಾಲ್ ಮತ್ತು ಶ್ರುತಿ ಅಯ್ಯಂಗಾರ್ ಕರ್ನಾಟಕ ಶಾಸ್ತ್ರೀಯ ಶೈಲಿಯಲ್ಲಿ ಜಲತರಂಗ ನುಡಿಸುವ ಕಲಾವಿದರು.

ವಾದ್ಯದ ಅಲಭ್ಯತೆ

ಜಲತರಂಗಕ್ಕೆ ಚೀನೀ ಮಣ್ಣಿನಿಂದ ತಯಾರಿಸಿದ ಸೆರಾಮಿಕ್ ಬಟ್ಟಲುಗಳು ಬೇಕು. ಇದರ ಕೊರತೆ ಮತ್ತು ಜಲತರಂಗ ಕಲಿಸುವವರ, ಕಲಿಯುವವರ ಕೊರತೆಯಿಂದ ಇಂದು ಜಲತರಂಗ ವಾದನ ಕೇಳುವುದು ಬಹಳ ಅಪರೂಪ. ತಬಲಾ, ಹಾರ್ಮೋನಿಯಂನಂತೆ ಇದನ್ನು ಸಾಥಿ ವಾದ್ಯವಾಗಿಯೂ ನುಡಿಸಲು ಸಾಧ್ಯವಿಲ್ಲ. ಚೀನೀ ಮಣ್ಣಿನ ಬಟ್ಟಲುಗಳು ಸಿಗದೇ ಇರುವ ಕಾರಣ ಇದೀಗ ಈ ವಾದ್ಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ರಾಜು ಹೆಗಡೆ ಅವರೇ ಸ್ವತಃ ಕಂಚಿನ ಬಟ್ಟಲುಗಳನ್ನು ತಯಾರಿಸಿದ್ದಾರೆ. ಈ ಬಟ್ಟಲುಗಳಲ್ಲಿ ಜಲತರಂಗ ನುಡಿಸಿದಾಗ ಹೆಚ್ಚು ಕಡಿಮೆ ಪಿಂಗಾಣಿ ಬಟ್ಟಲುಗಳಲ್ಲಿ ನುಡಿಸಿದಂತೆಯೇ ನಾದ ಕೇಳುವುದರಿಂದ ಇದನ್ನು ಈಗ ಕಛೇರಿಗಳಲ್ಲಿ ನುಡಿಸಲು ಬಳಸುತ್ತಿದ್ದಾರೆ. ಇದು ಒಡೆದುಹೋಗದೇ ಇರುವುದರಿಂದ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇದಕ್ಕೆ ತಗಲುವ ಅಂದಾಜು ವೆಚ್ಚ 10 ಸಾವಿರ ರೂಪಾಯಿ.

ಜಲತರಂಗ ವಾದ್ಯ, ವಾದನ, ಅಭ್ಯಾಸ ಕ್ರಮ ಮುಂತಾದ ಮಾಹಿತಿಗಾಗಿ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಪಂ. ರಾಜು ಹೆಗಡೆ ಅವರನ್ನು 08389-254838 ದೂರವಾಣಿಯಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry