ಶನಿವಾರ, ಅಕ್ಟೋಬರ್ 19, 2019
27 °C

ಜಲವಿದ್ಯುತ್ ಯೋಜನೆಗೆ ಅರಣ್ಯ ಬಲಿ

Published:
Updated:
ಜಲವಿದ್ಯುತ್ ಯೋಜನೆಗೆ ಅರಣ್ಯ ಬಲಿ

ಸಕಲೇಶಪುರ: ತಾಲ್ಲೂಕಿನ ಪಶ್ಚಿಮಘಟ್ಟದ ಕಾಗಿನಹರೆ ಹಾಗೂ ಕೆಂಚನಕುಮರಿ ಕಾಯ್ದಿರಿಸಿದ ರಕ್ಷಿತ ಅರಣ್ಯದ ಮಳೆಕಾಡುಗಳನ್ನು ಜಲವಿದ್ಯುತ್ ಯೋಜನೆ ಹೆಸರಿನಲ್ಲಿ ಅವ್ಯಾಹತವಾಗಿ ನಾಶಗೊಳಿರುವ ಬೆಂಗಳೂರಿನ ಮಾರುತಿ ಪವರ್ ಜೆನ್ (ಇಂಡಿಯಾ) ಪ್ರೈವೆಟ್ ಲಿಮಿಟೆಡ್ ವಿರುದ್ಧ 1980ರ ಅರಣ್ಯ ಸಂರಕ್ಷಣಾ ಕಾಯಿದೆ ಉಲ್ಲಂಘನೆಯ ತೂಗುಗತ್ತಿ ನೇತಾಡುತ್ತಿದೆ.ಕೆಂಚನಕುಮರಿ ಸರ್ವೆ ಸಂಖ್ಯೆ 16 ಹಾಗೂ ಕಾಗಿನಹರೆ ಸರ್ವೆ ಸಂಖ್ಯೆ 1 ಈ ಎರಡೂ ರಕ್ಷಿತ ಅರಣ್ಯಗಳ 8.21 ಹೆಕ್ಟೇರ್ ಪ್ರದೇಶದಲ್ಲಿ ಎರಡು ಕಿರು ಜಲ ವಿದ್ಯುತ್ ಯೋಜನೆಗಳನ್ನು ನಿರ್ಮಾಣ ಮಾಡಿ,  18.9 ಮತ್ತು 19 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರ 2010ರ ಏಪ್ರಿಲ್ 15ರಂದು ಮಂಜೂರಾತಿ ನೀಡಿದೆ. ಯೋಜನೆ ನಡೆಯುತ್ತಿರುವ ಪ್ರದೇಶ ನಿತ್ಯ ಹರಿದ್ವರ್ಣ ದಟ್ಟ ಮಳೆ ಕಾಡು. ಅಪರೂಪದ ಜೀವ ವೈವಿಧ್ಯತೆಯಿಂದ ಕೂಡಿದ ವನ್ಯಜೀವಿಗಳ ಆವಾಸ ಸ್ಥಳ. ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಷೆಡ್ಯೂಲ್ 1ರ ಅಡಿಯಲ್ಲಿ ಕಲಂ 2ರ ಅನ್ವಯ ಹಾಗೂ ಕಾಯ್ದಿರಿಸಿದ ರಕ್ಷಿತ ಅರಣ್ಯ ಕಾಯಿದೆ ಪ್ರಕಾರ ಇಂತಹ ಕಾಡುಗಳ ಒಳಗೆ ಮನುಷ್ಯರ ಪ್ರವೇಶ ಕಾನೂನುಬಾಹಿರ. ಆದರೂ ಸರ್ಕಾರ ಇಂತಹ ಅಮೂಲ್ಯ ರಕ್ಷಿತ ಅರಣ್ಯದ ಗರ್ಭದಲ್ಲಿ ಕಿರು ಜಲ ವಿದ್ಯುತ್ ಯೋಜನೆಗೆ ಅನುಮತಿ ನೀಡಿದ್ದಾದರೂ ಹೇಗೆ ಎಂಬ ಪ್ರಶ್ನೆಯನ್ನು, ಕಳೆದ ಜೂನ್ 13ರಂದು ಈ ಯೋಜನೆಯಿಂದ ಸಾಕಷ್ಟು ಅರಣ್ಯ ನಾಶವಾಗಿರುವ ಸ್ಥಳ ಪರಿಶೀಲನೆ ನಡೆಸಿದ್ದ ಕರ್ನಾಟಕ ವನ್ಯ ಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆ, ಅಕ್ಟೋಬರ್‌ನಲ್ಲಿ ಸ್ಥಳ ಪರಿಶೀಲಿಸಿದ್ದ ರಾಜ್ಯ ಅರಣ್ಯ ಸಚಿವ ಯೋಗೇಶ್ವರ್ ಅವರೇ ಪ್ರಶ್ನೆ ಮಾಡಿದ್ದರು.ಒಂದು ಕಿರು ಜಲ ವಿದ್ಯುತ್ ಯೋಜನೆ, ಅದೂ ರಾಜ್ಯದಲ್ಲಿ ವಿದ್ಯುತ್ ಅಭಾವ ಇರುವಂತಹ ಬೇಸಿಗೆಯಲ್ಲಿ ಉತ್ಪಾದನೆ ಇಲ್ಲದೆ, ಮಳೆಗಾಲದ ನಾಲ್ಕು ತಿಂಗಳು ಮಾತ್ರ ವಿದ್ಯುತ್ ಉತ್ಪಾದಿಸುವ, ಯಾವುದೋ ಒಂದು ಖಾಸಗಿ ಕಂಪನಿಯ ಲಾಭದ ಉದ್ದೇಶಕ್ಕೆ, ಮರುಸೃಷ್ಟಿ ಮಾಡಲು ಸಾಧ್ಯವಾಗದ ನೈಸರ್ಗಿಕ ಅರಣ್ಯವನ್ನು ನಾಶಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಸಚಿವ ಯೋಗೇಶ್ವರ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.`ಮಾರುತಿ ಪವರ್ ಜೆನ್ ಕಂಪನಿಯವರು ಕಾಯ್ದಿರಿಸಿದ ಅರಣ್ಯದಲ್ಲಿ ಸ್ಪೋಟಕ ಬಳಸುತ್ತಿರುವುದು ಸ್ಥಳ ಭೇಟಿಯಲ್ಲಿ ಕಂಡು ಬಂದಿದೆ. ವನ್ಯ ಜೀವಿಗಳ ಆವಾಸ ಸ್ಥಳದಲ್ಲಿ ಸ್ಪೋಟಕ ಬಳಸುವಿಕೆ ಗುರುತರವಾದ ಪ್ರಮಾದ ಆಗಿರುತ್ತದೆ. ಇಂತಹ ಅರಣ್ಯಗಳನ್ನು ಯಾವುದೇ ಉದ್ದೇಶಕ್ಕೆ ಬಳಸಲು ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ವನ್ಯ ಜೀವಿಗಳ ಮಂಡಳಿ ಅನುಮೋದನೆ ಪಡೆಯುವುದು ಅವಶ್ಯ ಇರುತ್ತದೆ. ಆದ್ದರಿಂದ ಅರಣ್ಯದಲ್ಲಿ ಸಿಡಿಮದ್ದುಗಳನ್ನು ಸ್ಪೋಟಿಸುತ್ತಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ~ ಎಂದು ಜಿಲ್ಲಾಡಳಿತಕ್ಕೆ ರಾಜ್ಯ ವನ್ಯ ಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆಯವರು ಪತ್ರ ಬರೆದಿದ್ದರು.ಆದರೆ ಕಳೆದ ಜುಲೈ 28ರಂದು ಲಿಖಿತ ವರದಿ ಸಲ್ಲಿಸಿದ ಇಲ್ಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರೇಗೌಡ, ಈ ಯೋಜನೆಯಿಂದ  ವನ್ಯ ಜೀವಿಗಳ ಸಂರಕ್ಷಣಾ ಕಾಯಿದೆಯ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಕಾಮಗಾರಿಯಿಂದ ವನ್ಯಜೀವಿಗಳಿಗೆ ಹಾನಿಕಾರಕ ಆಗುವುದಿಲ್ಲ ಎಂದು  ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು.ಸಚಿವ ಯೋಗೇಶ್ವರ್ ಖುದ್ದು ಸ್ಥಳ ಪರಿಶೀಲನೆ ನಡೆಸಿದ ನಂತರ ಅರಣ್ಯ ಇಲಾಖೆ ತರಾತುರಿಯಲ್ಲಿ ಮಾರುತಿ ಪವರ್ ಜೆನ್ 1980ರ ಅರಣ್ಯ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಮಾಡಿದೆ ಎಂದು ಮೊಕದ್ದಮೆ ದಾಖಲು ಮಾಡಲಾಗಿದೆ. ಅನುಮತಿ ಇಲ್ಲದೆ ಅರಣ್ಯದ ಒಳಗೆ ಹಲವೆಡೆ ರಸ್ತೆಗಳನ್ನು ನಿರ್ಮಾಣ ಮಾಡಿರುವುದು, ರಸ್ತೆ ನಿರ್ಮಾಣ ಮಾಡುವಾಗ ನೂರಾರು ಮರಗಿಡಗಳು ಹಾಗೂ ಸಸ್ಯಸಂಕುಲ ನಾಶಗೊಳಿಸಿರುವುದು, ಕಾಮಗಾರಿ ಮಾಡುವಾಗ ತ್ಯಾಜ್ಯ ವಸ್ತುಗಳನ್ನು ನದಿ ಹಾಗೂ ಅರಣ್ಯದ ಒಳಗೆ ಸುರಿದಿರುವುದು, ಅನುಮತಿ ಇಲ್ಲದ ಪ್ರದೇಶಗಳಲ್ಲಿ ಸುರಂಗಗಳನ್ನು ನಿರ್ಮಾಣ ಮಾಡಿರುವುದು. ಕಬ್ಬಿಣದ ಸೇತುವೆ ನಿರ್ಮಿಸಿರುವುದು ಸೇರಿದಂತೆ ಕಾಯ್ದಿರಿಸಿದ ಅರಣ್ಯವನ್ನು ಮನಸೋ ಇಚ್ಚೆ ಸರ್ವನಾಶ ಮಾಡಿರುವ ಮಹಾಪರಾಧ ಇದೀಗ ಮಾರುತಿ ಪವರ್ ಜೆನ್ ವಿರುದ್ಧ ದಾಖಲಾಗಿದೆ. ಆದರೆ ಮಾಡಿರುವ ಅಪರಾಧಕ್ಕೆ ಅರಣ್ಯ ಇಲಾಖೆ ಮಾತ್ರ ಇದುವರೆಗೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Post Comments (+)