ಶುಕ್ರವಾರ, ಅಕ್ಟೋಬರ್ 18, 2019
28 °C

ಜಲಶೋಧ: ತಂತ್ರಜ್ಞಾನದ ಬದಲು ತೆಂಗಿನಕಾಯಿ!

Published:
Updated:

ಕುಷ್ಟಗಿ: ಭೂಗರ್ಭಶಾಸ್ತ್ರ ಜಲತಜ್ಞರು ಗುರುತಿಸಿದ ಪಾಯಿಂಟ್‌ಗಳಲ್ಲಿ ಮಾತ್ರ ಕೊಳವೆ ಬಾವಿಗಳನ್ನು ತೋಡುವುದು ಸಹಜ. ಅದರಲ್ಲೂ ಸರ್ಕಾರದ ಬಾವಿಗಳಿಗೆ ಅದು ಕಡ್ಡಾಯವೂ ಹೌದು. ಆದರೆ ಇಲ್ಲಿಯ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದವರು ಮಾತ್ರ ವೈಜ್ಞಾನಿಕ ಯುಗದಲ್ಲೂ ಭೂಗರ್ಭದಲ್ಲಿ ಅಡಗಿರುವ ಜಲ ಗುರುತಿಸುವುದಕ್ಕೆ ಭೂಗರ್ಭಶಾಸ್ತ್ರಜ್ಞರ ಬದಲು ತೆಂಗಿನಕಾಯಿ ಹಿಡಿದು ನೀರು ತೋರಿಸುವ `ತಜ್ಞ~ರ ಮೊರೆಹೋಗಿರುವುದು ಅಚ್ಚರಿ ಮೂಡಿಸಿದೆ.ಕೆಡಿಪಿ ಸಭೆಯಲ್ಲಿ ಕೊಳವೆ ಬಾವಿತೋಡುವ ವಿಷಯದಲ್ಲಿ ವಿವರಿಸಿದ ಎಂಜಿನಿಯರ್ ಎ.ಸಿ.ಒಣಕುದರಿ, `ಜಿಯಾಲಾಜಿಸ್ಟು ತೋರಿಸಿದ ಸ್ಥಳದಲ್ಲಿ ಬಾವಿ ಕೊರ‌್ದರ ಶೇ 10ರಷ್ಟೂ ಸಕ್ಸೆಸ್ ಆಗಿಲ್ರಿ, ಅದ ಟೆಂಗಿನಕಾಯಿ ಹಿಡ್ದು ಪಾಯಿಂಟ್ ಮಾಡೋರ ಕಡೀಂದ ಪಾಯಿಂಟ್ ಮಾಡ್ಸೀದ ಹೆಚ್ಚಿನ ಕೊಳವೆಬಾವಿ ಪಾಸ್ ಆಗ್ಯಾವ~ ಎಂದು ಸಮರ್ಥಿಸಿಕೊಂಡರು. ವೈಜ್ಞಾನಿಕ ಯುಗಕ್ಕೆ ಸವಾಲೊಡ್ಡುವ ಎಂಜಿನಿಯರ್‌ರ ಈ ಸಮರ್ಥನೆಯನ್ನು ಒಪ್ಪಿಕೊಳ್ಳಬೇಕೆ ಬೇಡವೆ ಎಂಬ ಗೊಂದಲ ಸದಸ್ಯರದಾಗಿತ್ತು. ಆದರೆ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.ಡಾಬಾದಲ್ಲಿ ಬಸ್: `ಇನ್ನೂ ಹತ್ ನಿಮಿಷ ಕಳ್ದರ ಹುಬ್ಬಳ್ಳಿ ಬಸ್ಟ್ಯಾಂಡು ಬರತೈತಿ, ಹತ್ತು ಕಿಮೀ ದಾರಿ, ಆದ್ರ ಪುಗ್ಸಟ್ಟೆ ಊಟ ಸಿಗತೈತಿ ಅಂತಾ ಸರ್ಕಾರಿ ಬಸ್ ಶಿರಗುಪ್ಪಿ ಡಾಬಾದಕಡಿಗೆ ರೈಟ್ ಹೇಳ್ತಾವ, ಅದರಿಂದ ಮುಂದ ಪ್ರಯಾಣ ಮಾಡೋರ‌್ಗೆ ಎಷ್ಟು ತೊಂದ್ರಿ ಆಕೈತೆನ್ನೋದು ನಿಮಗ ಗೊತೈತೇನ್? ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲರ ಈ ಪ್ರಶ್ನೆಗೆ ಉತ್ತರಿಸಬೇಕಿದ್ದ ಘಟಕ ವ್ಯವಸ್ಥಾಪಕ ಬಸವರಾಜ ತಬ್ಬಿಬ್ಬು. ಅಚ್ಚರಿಯಂದರೆ ಸದಸ್ಯರ ಬದಲು ಪಂ.ರಾ ಎ.ಇ.ಇ ಒಣಕುದರಿಯವರೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡದ್ದು.ಬರ ಪರಿಹಾರ ಕಾಮಗಾರಿಗಳಲ್ಲಿ ಹೊಸ ಕೊಳವೆ ಬಾವಿಗಳಿಗೆ ಜಿಲ್ಲಾಧಿಕಾರಿ ಅವಕಾಶ ನೀಡಿಲ್ಲ, ಅಲ್ಲದೇ ರಸ್ತೆ ಇತರೆ ಕೆಲಸಗಳ ಪ್ರಸ್ತಾವನೆ ಸಲ್ಲಿಸಿದರೂ ಹಣ ಬಂದಿಲ್ಲ, ಈ ಬಗ್ಗೆ ನಿವೇ ಮಾತನಾಡಿದರೆ ಒಳ್ಳೆಯದು ಎಂದೆ ಎ.ಇ.ಇ ಮತ್ತು ಸಹಾಯಕ ಎಂಜಿನಿಯರ್ ಸಭೆಯಲ್ಲೇ ಸದಸ್ಯರಿಗೆ `ಕಿವಿಮಾತು~ ಹೇಳಿದರು.ಎಲ್ಲ ಇಲಾಖೆಗಳ ಪರಿಶೀಲನೆ ಮುಗಿದ ನಂತರ ಪಂಚಾಯತ್‌ರಾಜ್ ಇಲಾಖೆಯದ್ದು ಕೊನೆ ಸರದಿ, ಆದರೆ ಸಭೆಯಲ್ಲಿ ಗಂಭೀರವಾಗಿ ಪ್ರಗತಿ ಅನುಷ್ಟಾನದ ವಿವರ ನೀಡಬೇಕಿದ್ದ ಎಂಜಿನಿಯರ್‌ರು ಸದಸ್ಯರೊಂದಿಗೆ `ಗುಸುಗುಸು~ ಮಾತನಾಡತೊಡಗಿದರು. ಅಲ್ಲದೇ ಸಭೆ ನಡೆಸುವ ಜವಾಬ್ದಾರಿ ಹೊತ್ತ ತಾಲ್ಲೂಕು ಪಂಚಾಯಿತಿಯವರೇ ತಮ್ಮ ಇಲಾಖೆ ಪ್ರಗತಿ ವರದಿ ಮಂಡಿಸದಿರುವುದು  ವಿಪರ್ಯಾಸ ಎನಿಸಿತು.

Post Comments (+)