ಜಲಸಂರಕ್ಷಣೆಯ ಹಾದಿಯಲ್ಲಿ...

ಭಾನುವಾರ, ಜೂಲೈ 21, 2019
27 °C

ಜಲಸಂರಕ್ಷಣೆಯ ಹಾದಿಯಲ್ಲಿ...

Published:
Updated:

ನೀರು ಸಕಲ ಜೀವಗಳಿಗೂ ಆಧಾರ. ಆದರೆ ಇಂದಿನ ಜೀವನ ಶೈಲಿ, ಅಕಾಲಿಕ ಋತುಮಾನ ನೀರಸೆಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿವೆ. ನೀರು ಬತ್ತುವುದಕ್ಕೆ ಪ್ರಾಕೃತಿಕ ಕಾರಣಗಳು ಒಂದೆಡೆಯಾದರೆ, ಮಾನವನ ಅವೈಜ್ಞಾನಿಕ ಅನುಕರಣೆ, ನಿರ್ಲಕ್ಷ್ಯಗಳದ್ದೇ ಹೆಚ್ಚಿನ ಪಾಲು.ಕೆರೆಕಟ್ಟೆಗಳ ನೀರಿನಲ್ಲಿ ತುಂಬಿಕೊಳ್ಳುವ ಹೂಳು ಸಹ ಈ ಕಾರಣಗಳಲ್ಲಿ ಒಂದು. ಗೊತ್ತೇ ಆಗದಂತೆ ವರ್ಷದಿಂದ ವರ್ಷಕ್ಕೆ ಸಂಗ್ರಹವಾಗುವ ಕಸಕಡ್ಡಿ, ಮಣ್ಣು, ಗಿಡಗಂಟಿಗಳು ದೊಡ್ಡ ಪ್ರಮಾಣದ ಹೂಳಾಗಿ ಪರಿವರ್ತಿತವಾಗುತ್ತವೆ. ಇದರಿಂದ ಕೆರೆಯಲ್ಲಿ ನಿಲ್ಲುವ ನೀರಿನ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.ಎಷ್ಟೋ ವರ್ಷಗಳ ಕಾಲ ಕೆರೆಯಲ್ಲೇ ಉಳಿಯುವ ಹೂಳು ನೀರಿನ ಮಟ್ಟವನ್ನು ಕುಗ್ಗಿಸುತ್ತದೆ. ನಿರ್ಲಕ್ಷ್ಯ ತೋರಿದಷ್ಟೂ ನೀರು ಸಂಪೂರ್ಣ ಬತ್ತಿ ಹೋಗುವ ಸಾಧ್ಯತೆ ಹೆಚ್ಚು. ಇಷ್ಟೆಲ್ಲಾ ಮಾರಕವೆನಿಸಿರುವ ಹೂಳನ್ನು ತೆಗೆಯುವ ಕಾಯಕಕ್ಕೆ ಮುಂದಡಿಯಿಡುವವರು ಮಾತ್ರ ವಿರಳ.ಆದರೆ ಈ ಕೆಲಸದಲ್ಲಿ ಖಾಸಗಿ ಸಂಸ್ಥೆಯೊಂದು ಭಾಗಿಯಾಗಿ ಹೂಳೆತ್ತುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದೆ. ರಾಮನಗರ ಜಿಲ್ಲೆಯ ಬಿಡದಿ ಸುತ್ತಮುತ್ತ ಪ್ರದೇಶದ ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲೆಂದು ನಿರ್ಮಿಸಿದ್ದ ಕೃತಕ ಕೆರೆ `ನೆಲ್ಲಿಗುಡ್ಡ'ದಲ್ಲಿ ಹೂಳು ತೆಗೆಯುವ ಕೆಲಸವನ್ನು ಪಾನೀಯ ತಯಾರಿಕಾ ಕಂಪೆನಿ ಕೊಕೊಕೋಲಾ ಪ್ರೈವೇಟ್ ಲಿಮಿಟೆಡ್ ನಡೆಸಿಕೊಡುತ್ತಿದೆ.ನೆಲ್ಲಿಗುಡ್ಡ ಕೆರೆ ನಿರ್ಮಿಸಿದಾಗ ಅದರ ವಿಸ್ತೀರ್ಣ ಇದ್ದದ್ದು 8.9596 ಎಂಸಿಎಂ. ಆದರೆ ಹೂಳಿನ ಪರಿಣಾಮವಾಗಿ ಅದು 6.3378 ಎಂಸಿಎಂಗೆ ಕುಗ್ಗಿದೆ. 800 ಮೀಟರ್‌ವರೆಗೂ ಆವರಿಸಿದ್ದ ಹೂಳನ್ನು ತೆಗೆಯಲೆಂದೇ ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ `ವಾಟರ್ ಸ್ಟಿವಾರ್ಡ್‌ಶಿಪ್ ಇನಿಷಿಯೇಟಿವ್ ಪ್ರೋಗ್ರಾಮ್' ಹೆಸರಿನಲ್ಲಿ ಚಾಲನೆ ನೀಡಿದೆ.`ನಾವು ಪ್ರಕೃತಿಯಿಂದ ಎಷ್ಟೆಲ್ಲಾ ಸಂಪನ್ಮೂಲಗಳನ್ನು ಬಾಚಿಕೊಳ್ಳುತ್ತೇವೆ. ಆದರೆ ಹಿಂತಿರುಗಿ ಏನನ್ನೂ ಕೊಡುವುದಿಲ್ಲ. ಅದರಲ್ಲೂ ನೀರಿನ ವಿಷಯದಲ್ಲಿ ಸ್ವೇಚ್ಛಾಚಾರದಿಂದ ನಡೆದುಕೊಳ್ಳುತ್ತೇವೆ. ಆದ್ದರಿಂದ ನಿಸರ್ಗದಿಂದ ಪಡೆದುಕೊಂಡ ನೀರನ್ನು ಮರಳಿ ತುಂಬಿಸಬೇಕೆಂಬುದೇ ನಮ್ಮ ಉದ್ದೇಶ. ಇದೇ ನಿಟ್ಟಿನಲ್ಲಿ ಜಲ ಸಂರಕ್ಷಣೆಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ' ಎನ್ನುತ್ತಾರೆ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಧನಂಜಯ ಕುಲಕರ್ಣಿ.`3 ಆರ್' ಎಂಬ ಪರಿಕಲ್ಪನೆಯಲ್ಲಿ ನೀರುಳಿಸುವ ಕಾರ್ಯ ನಡೆಯುತ್ತಿದೆ. ರೆಡ್ಯೂಸ್ (ನೀರಿನ ಬಳಕೆ ಕಡಿಮೆ ಮಾಡಿ), ರಿಸೈಕಲ್(ನೀರಿನ ಪುನರ್ಬಳಕೆ) ಹಾಗೂ ರೆಪ್ಲೆನಿಶ್ (ನೀರು ಪುನಃರ್ಭರ್ತಿ) ಎಂಬ ಜಲಸಂರಕ್ಷಣೆಯ ಹಾದಿಯಲ್ಲಿ ನಡೆಯುತ್ತಿದೆ. ಇದರ ಹೊರತಾಗಿಯೂ ಮಳೆ ನೀರು ಕೊಯ್ಲು, ಕೆರೆಗಳ ಪುನರ್ಭರ್ತಿ ಕಾರ್ಯವೂ ಸಾಗುತ್ತಿದೆ.`ಹೂಳೆತ್ತುವುದಲ್ಲದೆ ನೀರು ಸಂಗ್ರಹಕ್ಕೆಂದೇ ಕೆರೆಯ ಬಳಿ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಮೂರು ರಿಚಾರ್ಜ್ ಘಟಕ ಕಟ್ಟಲಾಗಿದ್ದು, ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಮೂರು ತಿಂಗಳಿನಿಂದ 168,000 ಸಿಯುಎಂ ಹೂಳು ತೆಗೆಯಲಾಗಿದ್ದು, ಇದರಿಂದ ಶೇ 25ರಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ವೃದ್ಧಿಯಾಗಿದೆ' ಎನ್ನುತ್ತಾರೆ ಧನಂಜಯ್.ಪರಿಸರ ಕಾಳಜಿಯ ಪರವಾಗಿ ಸಾವಿರ ಹೊಂಗೇ ಗಿಡಗಳನ್ನೂ ನೆಟ್ಟಿದ್ದು, ಇದರಿಂದ ಜೀವಸಂಕುಲಕ್ಕೂ ನೆಲೆಯಾಗುವುದಲ್ಲದೆ, ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಜೊತೆಗೆ ಮಣ್ಣುಸವಕಳಿಯನ್ನೂ ತಡೆಗಟ್ಟಬಹುದು ಎಂಬುದು ಕಂಪೆನಿಯ ಭರವಸೆ.ರೈತರಿಗೆ ನೀರಿನೊಂದಿಗೆ ಗೊಬ್ಬರ

ಹೂಳು ತೆಗೆಯುವುದರಿಂದ ಇಲ್ಲಿನ ಕೃಷಿ ಭೂಮಿಗೆ ನೀರಾವರಿ ಸುಗಮವಾಗುತ್ತದೆ. ಇತ್ತೀಚೆಗೆ ಶೇಖರಣೆಯಾಗಿದ್ದ ಹೂಳನ್ನು ರೈತರಿಗೆ ಗೊಬ್ಬರವನ್ನಾಗಿ ಬಳಸಲು ನೀಡಲಾಗಿದೆ. ಇದರಿಂದ ಸುತ್ತಮುತ್ತಲ ಕೃಷಿ ಚಟುವಟಿಕೆ, ನೀರಾವರಿ ಎರಡು ಕಾರ್ಯಗಳಿಗೂ ಸಹಾಯವಾಗಲಿದೆ.ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್, ಬೆಂಗಳೂರು ವಿಶ್ವವಿದ್ಯಾಲಯ, ಸಣ್ಣ ನೀರಾವರಿ ಯೋಜನಾ ಇಲಾಖೆ, ಟ್ಯಾಂಕ್ ವಾಟರ್ ಅನ್ಸರ್ ಕಮಿಟಿ, ಭೋರುಖ ಚಾರಿಟಬಲ್ ಟ್ರಸ್ಟ್, ಎಚ್‌ಕೆವಿ ಪ್ರಾಜೆಕ್ಟ್‌ಗಳು ಕೂಡ ಈ ಕಾಯಕದಲ್ಲಿ ಕೈ ಜೋಡಿಸಿವೆ. ಇದರಿಂದಾಗಿ ಬನ್ನಿಕುಪ್ಪೆ, ಕೆಂಚನಕುಪ್ಪೆ, ಬಿಡದಿಯ ಪಂಚಾಯ್ತಿ ವ್ಯಾಪ್ತಿಯ ಸುಮಾರು 2000 ಕುಟುಂಬಕ್ಕೆ ಸಹಾಯವಾಗಲಿದೆ.`ಮಳೆ ಬಂದರೆ ಮಾತ್ರ ಕೆರೆಯಲ್ಲಿ ನೀರು ತುಂಬಿಕೊಳ್ಳಲು ಸಾಧ್ಯ. ಆಗ ಮಾತ್ರ ನಮ್ಮ ಪ್ರಯತ್ನದ ಫಲ ಕಾಣಬಹುದು. ನೀರಿದ್ದರೆ ತಾನೇ, ಅದನ್ನು ಉಳಿಸಿಕೊಳ್ಳಲು ಸಾಧ್ಯ. ನೆಲ್ಲಿಗುಡ್ಡ ಕೆರೆಯಲ್ಲಿ ಸದ್ಯ ಹೂಳು ತೆಗೆಯಲಾಗಿದ್ದು, ಮಳೆ ಬಂದರೆ ನಮ್ಮ ಕಾರ್ಯ ಕೈಗೂಡಿದಂತೆ. ಮುಂದೆಯೂ ಇದೇ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ' ಎಂದು ಭರವಸೆಯ ಮಾತನ್ನಾಡುತ್ತಾರೆ ಧನಂಜಯ್.

-ಸುಮಲತಾ ಎನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry