ಜಲಾನಯನ ಅಭಿವೃದ್ಧಿ ಅಧಿಕಾರಿಗೆ ತರಾಟೆ

7

ಜಲಾನಯನ ಅಭಿವೃದ್ಧಿ ಅಧಿಕಾರಿಗೆ ತರಾಟೆ

Published:
Updated:

ಹುಣಸೂರು:  ತಾಲ್ಲೂಕಿಗೆ ಸರ್ಕಾರದಿಂದ ಜಲಾನಯನ ಅಭಿವೃದ್ಧಿಗೆ 20.10 ಕೋಟಿ ರೂಪಾಯಿ ಖರ್ಚಾಗಿದ್ದರೂ ಇದಕ್ಕೆ ತಕ್ಕನಾದ ಕೆಲಸ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಶಾಸಕ ಎಚ್.ಪಿ.ಮಂಜುನಾಥ್ ಜಲಾನಯನ ಅಭಿವೃದ್ಧಿ ಅಧಿಕಾರಿ ಜಯಕುಮಾರ್ ಮೇಲೆ ಹರಿಹಾಯ್ದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ನೀರಿನ ಕ್ಷಾಮ ಎದುರಿಸುತ್ತಿರುವ ಪ್ರದೇಶದಲ್ಲಿ ತೆಗೆದುಕೊಳ್ಳಬೇಕಾಗಿತ್ತು. ಆದರೆ ಹೊರ ಶಕ್ತಿಗಳ ಒತ್ತಡಕ್ಕೆ ಮಣಿದ ಅಧಿಕಾರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಹನಗೋಡಿನಲ್ಲಿ ಅನುಷ್ಠಾನಗೊಳಿಸಿ ರೂ 20.10 ಕೋಟಿ ವ್ಯಯ ಮಾಡಲಾಗಿದೆ. ಆದರೆ ಸ್ಥಳದಲ್ಲಿ ಖರ್ಚು ಮಾಡಿದ ಹಣಕ್ಕೆ ತಕ್ಕನಾದ ಆಸ್ತಿ ಕಾಣುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ತನಿಖೆ:

ಜಲಾನಯನ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿರುವ ರೂ 20 ಕೋಟಿ ವೆಚ್ಚದ ಯೋಜನೆಯಲ್ಲಿ ಲೋಪ ಹೊರ ನೋಟಕ್ಕೆ ಕಾಣಿಸುತ್ತಿದ್ದು, ಈ ಯೋಜನೆ ತನಿಖೆ ನಡೆಸಲು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿ ಒಳಗೊಂಡಂತೆ ತಂಡ ರಚಿಸಿ ಸ್ಥಳ ಪರಿಶೀಲನೆ ನಡೆಸಲು ಶಾಸಕರು ತಹಶೀಲ್ದಾರ್ ಅವರಿಗೆ ಸೂಚಿಸಿದರು.ತಾಲ್ಲೂಕಿನಲ್ಲಿ 285 ಶಾಲೆಯಲ್ಲಿ ಆಸನದ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಕುಳಿತು ಪುಟ್ಟ ಮಕ್ಕಳು ಪಾಠ ಕೇಳುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯೊಂದಿಗೆ ಈಗಾಗಲೇ ಮಾತನಾಡಿ ಸಂಸ್ಥೆಯ ಸಹಯೋಗದಲ್ಲಿ ಕ್ಷೇತ್ರದ ಶಾಲೆಗಳಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಈ ಯೋಜನೆಗೆ ನನ್ನ ತಾಯಿ ಹೆಸರಿನಲ್ಲಿ ರೂ 10 ಲಕ್ಷ ಹಣವನ್ನು ನೀಡಿ ಕ್ಷೇತ್ರಕ್ಕೆ ಆಸನದ ವ್ಯವಸ್ಥೆ ಕಲ್ಪಿಸುವ ಎಲ್ಲಾ ಸಿದ್ಧತೆಗಳು ನಡೆದಿದೆ ಎಂದರು.ತಾಲ್ಲೂಕಿನಲ್ಲಿ ಗಿರಿಜನರಿಗಾಗಿ ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ನಿರ್ಮಿಸುತ್ತಿರುವ ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ಆಮೆ ವೇಗದಲ್ಲಿ ಸಾಗುತ್ತಿದೆ. ಈ ಬಗ್ಗೆ ಕ್ಷೇತ್ರದಲ್ಲಿ ಹಲವಾರು ಜನರು ಅವರಿಗೆ ಮನತೋಚಿದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಯೋಜನೆ ಪೂರ್ಣಗೊಳಿಸಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಗಿರಿಜನರಿಗೆ ಮನೆ ನಿರ್ಮಿಸಿ ನೀಡಲು ಈಗಾಗಲೇ ಸರ್ವ ಸಿದ್ಧತೆ ನಡೆದಿದೆ. ಯೋಜನೆಯಲ್ಲಿ ರೂ 1.25 ಲಕ್ಷಕ್ಕೆ ಮನೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.ವಜಾಗೊಂಡ ಎಂಜಿನಿಯರ್

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಶಾಲಾ ಕಟ್ಟಡ ಮತ್ತು ಬಿಸಿಯೂಟ ಸಿದ್ಧಪಡಿಸುವ ಮನೆಗಳ ನಿರ್ಮಾಣದಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂಜಿನಿಯರ್ ಶ್ರೀಧರ್ ಸೇವೆಯಿಂದ ಮುಕ್ತಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಅವರಿಗೆ ಶಾಸಕರು ಸೂಚಿಸಿದರು.ಎಂಜಿನಿಯರ್ ಕೆಲಸ ನಿರ್ವಹಿಸುವ ಬದಲಿಗೆ ತಾಲ್ಲೂಕಿನ ಶಾಲೆಗಳ ಎಸ್.ಡಿ.ಎಂ.ಸಿ ಸದಸ್ಯರೊಂದಿಗೆ ಶಾಮೀಲಾಗಿ ಈತನೇ ಗುತ್ತಿಗೆ ನಡೆಸಿ ಕಳಪೆ ಕಾಮಗಾರಿ ನಡೆಸಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರೂ ಅಲ್ಪ ಹಣಕ್ಕೆ ಕೈ ಚಾಚಿ ಸರ್ಕಾರದಿಂದ ಬಂದ ಅನುದಾನ ಅಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಡಾ.ಪುಷ್ಟಾವತಿ ಅಮರನಾಥ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಚೇಗೌಡರೊಂದಿಗೆ ಚರ್ಚಿಸಿ, ತಾಲ್ಲೂಕಿನಲ್ಲಿ ರೈತರು ಕೃಷಿಗೆ ಸಂಬಂಧಿಸಿದ ಸಲಹೆ ನೀಡಲು ಸಹಾಯವಾಣಿ ಕಲ್ಪಿಸಬೇಕು. ಈ ವ್ಯವಸ್ಥೆ ಕಲ್ಪಿಸುವುದರಿಂದ ಅಧಿಕಾರಿಗಳೊಂದಿಗೆ ಕೃಷಿಕರು ನೇರವಾಗಿ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.ಹುಣಸೂರು ಉಪವಿಭಾಗದಲ್ಲಿ ಅತಿ ಹೆಚ್ಚು ಟ್ರಾನ್ಸ್‌ಫಾರ್ಮರ್ ಸುಟ್ಟಿರುವ ದಾಖಲೆ ಹುಣಸೂರು ತಾಲ್ಲೂಕಿಗೆ ಸೇರುತ್ತದೆ. ಪಿರಿಯಾಪಟ್ಟಣ ತಾಲ್ಲೂಕಿನ ರೈತರು ಪಂಪ್‌ಸೆಟ್‌ಗಳಿಗೆ ಅನಧಿಕೃತ ಕ್ಯಾಪಾಸಿಟರ್‌ಗಳನ್ನು ಬಳಸುವ ರೈತನಿಗೆ ರೈತರೇ ಮುಂದಾಗಿ ದಂಡ ವಿಧಿಸಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗದ ರೀತಿ ಕಾಪಾಡಿಕೊಂಡು ಬೆಳೆಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇದು ಎಲ್ಲಾ ತಾಲ್ಲೂಕಿನ ರೈತನಿಗೆ ಮಾದರಿ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವರಾಜ್, ಕೆ.ಮಂಜು, ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದೇವಿಕಾ ತಿಮ್ಮನಾಯಕ, ಉಪಾಧ್ಯಕ್ಷ ಮಹದೇವ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry