ಶನಿವಾರ, ಆಗಸ್ಟ್ 17, 2019
27 °C

ಜಲಾಶಯದ ನೀರು ಅರಣ್ಯದ ಪಾಲು

Published:
Updated:

ಮುಂಡಗೋಡ:  ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ಸನವಳ್ಳಿ ಭಾಗದ ನೂರಾರು ಎಕರೆಗೆ ನೀರುಣಿಸುವ ಸನವಳ್ಳಿ ಜಲಾಶಯಕ್ಕೆ ಹರಿದುಬರಬೇಕಾಗಿದ್ದ ನೀರು ಅರಣ್ಯದತ್ತ ಹರಿದು ಪೋಲಾಗುತ್ತಿರುವುದು ಬೆಳಕಿಗೆ ಬಂದಿದೆ.ಶಿಗ್ಗಾವಿ ತಾಲ್ಲೂಕಿನ ಗಡಿಭಾಗದ ಅರಣ್ಯದಿಂದ ಜಲಾಶಯಕ್ಕೆ ನೀರು ಹರಿದು ಬರಲು ಕಾಲುವೆ ತೋಡಲಾಗಿದ್ದು ಕಾಲುವೆಯಲ್ಲಿ ಬರುತ್ತಿರುವ ನೀರು ಅರಣ್ಯದತ್ತ ಹರಿದುಹೋಗುತ್ತಿದೆ. ಸನವಳ್ಳಿಯಿಂದ ಕೆಲವೇ ಮೀಟರ್ ಅಂತರದಲ್ಲಿ ಕಾಲುವೆಯ ದಡ ಒಡೆದು ಜಲಾಶಯಕ್ಕೆ ಸೇರಬೇಕಾಗಿದ್ದ ನೀರು ಅರಣ್ಯದ ಪಾಲಾಗುತ್ತಿದೆ. ಈ ಬಗ್ಗೆ ಕೃಷಿಕ ಸಮಾಜದ ಅಧ್ಯಕ್ಷ ಸಂಗಮೇಶ ಬಿದರಿ ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದರು.ತಾಲ್ಲೂಕಿನ ಗಡಿಭಾಗದ ಅರಣ್ಯದಲ್ಲಿರುವ ಕಾಲುವೆ ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿರುವುದು ಕಂಡುಬಂತು. ಸದ್ಯ ಕಾಲುವೆಯ ಮೂಲಕ ಜಲಾಶಯಕ್ಕೆ ಬರುತ್ತಿರುವ ನೀರಿನ ಎರಡರಷ್ಟು ಪ್ರಮಾಣದ ನೀರು ಅರಣ್ಯಕ್ಕೆ ಸೇರುತ್ತಿದೆ. ಮೊದಲೇ ಜಲಾಶಯ ಖಾಲಿಯಾಗಿ ಕುಡಿಯುವ ನೀರಿಗಾಗಿ ಜನ ತೊಂದರೆ ಪಟ್ಟಿದ್ದರು. ಈ ವರ್ಷವಾದರೂ ಜಲಾಶಯ ಭರ್ತಿಯಾಗಿ ನೀರಿನ ಆಹಾಕಾರ ಏಳದಿರಲಿ ಎಂದು ಬಯಸುತ್ತಿರುವಾಗಲೇ ಅಸಮರ್ಪಕ ಕಾಲುವೆ ನಿರ್ವಹಣೆಯಿಂದ ಅಮೂಲ್ಯ ನೀರು ವ್ಯರ್ಥವಾಗಿ ಹರಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಚಿಕ್ಕ ನೀರಾವರಿ ಇಲಾಖೆಯ ಎಂಜಿನಿಯರ್ ಆರ್.ಎನ್. ನಾಯ್ಕ ಮಾತನಾಡಿ, `ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದರೆ ಕಾಲುವೆಯ ದಡ ಒಡೆದು ಅರಣ್ಯದತ್ತ ಹೋಗುವುದು ಸಹಜ' ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಗಮೇಶ ಬಿದರಿ, `ಸಾಮರ್ಥ್ಯದಷ್ಟೇ ನೀರು ಹರಿದುಬರುತ್ತಿದೆ. ಆದರೆ ಕಾಲುವೆಯ ದಡವನ್ನು ಒಡೆದಿರುವುದರಿಂದ ಈ ರೀತಿ ನೀರು ಪೋಲಾಗುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.ಪ್ರಸಕ್ತ ಬೇಸಿಗೆಯಲ್ಲಿ ಜಲಾಶಯ ಬರಿದಾದ ಸಂದರ್ಭದಲ್ಲಿ ಹನಿ ನೀರಿಗಾಗಿ ಜನರು ತೀವ್ರ ತೊಂದರೆ ಅನುಭವಿಸಿದ್ದರು. ಜಲಾಶಯಕ್ಕೆ ನೀರು ಹರಿದು ಬರಲು ತೆಗೆದಿರುವ ಕಾಲುವೆಗಳನ್ನು ದುರಸ್ತಿಗೊಳಿಸುವಂತೆ ಹಲವು ಸಲ ಒತ್ತಾಯಿಸಿದ್ದರೂ ಸಂಬಂಧಿಸಿದ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ನೀರು ಹರಿದು ಬರುವ ಸಂದರ್ಭದಲ್ಲಿ ಕಾಲುವೆಯ ದಡ ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿದೆ. ಜಲಾಶಯಕ್ಕೆ ಸೇರಬೇಕಾಗಿದ್ದ ನೀರು ಅರಣ್ಯಕ್ಕೆ ಹರಿದುಹೋಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

Post Comments (+)