ಜಲಾಶಯ ಹೂಳು; ನೀರಿನ ಸಂಗ್ರಹದಲ್ಲಿ ಕುಸಿತ

7

ಜಲಾಶಯ ಹೂಳು; ನೀರಿನ ಸಂಗ್ರಹದಲ್ಲಿ ಕುಸಿತ

Published:
Updated:

ಬೆಳಗಾವಿ: ಕುಡಿಯುವ ನೀರು, ನೀರಾ­ವರಿ, ವಿದ್ಯುತ್‌ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾ­ಗಿ­ರುವ ರಾಜ್ಯದ ಪ್ರಮುಖ ಜಲಾಶಯ­ಗಳು ಹೂಳಿನ ಸಮಸ್ಯೆಯನ್ನು ಎದುರಿ­ಸು­ತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ­ಯಾಗುತ್ತಿವೆ.ವಿಧಾನಮಂಡಲದ ಪ್ರಸಕ್ತ ಅಧಿ­­ವೇಶನ­ದಲ್ಲಿ ಜಲ­ಸಂಪ­ನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ನೀಡಿರುವ, ರಾಜ್ಯದ ವಿವಿಧ ಜಲಾಶಯಗಳಲ್ಲಿ ಶೇಖರಣೆಯಾಗಿರುವ ಹೂಳಿನ ಪ್ರಮಾ­­ಣದ ಮಾಹಿತಿಯನ್ನು ಅವಲೋ­ಕಿಸಿದರೆ ಈ ವಿಷಯ ಸ್ಪಷ್ಟ­ವಾಗುತ್ತದೆ. ನೀರಾ­ವರಿ ಯೋಜನೆ(ದೊಡ್ಡ ಮತ್ತು ಚಿಕ್ಕ ಪ್ರಮಾ­ಣದ್ದು) ಉದ್ದೇಶಗಳಿಗೆ ನಿರ್ಮಿಸ­ಲಾ­ಗಿರುವ 57 ಜಲಾ­ಶಯಗಳ ಪೈಕಿ 14­ರಲ್ಲಿ ಹೂಳಿನ ಸಮಸ್ಯೆ ಇದೆ. ಇವು­ಗ­ಳಲ್ಲಿ ಕೆಲವು ಜಲಾಶಯಗಳಲ್ಲಿನ ಸಮಸ್ಯೆ ಗಂಭೀರ ಸ್ವರೂಪದ್ದಾಗಿದೆ.ತುಂಗಭದ್ರೆಗೆ ಮೊದಲ ಸ್ಥಾನ: ಹೂಳಿನ ಸಮಸ್ಯೆ ಎದುರಿಸು­ತ್ತಿರುವ ಜಲಾಶಯ­ಗಳ ಪಟ್ಟಿಯಲ್ಲಿ ಹೊಸಪೇಟೆ­ಯಲ್ಲಿ­ರುವ ತುಂಗ­ಭದ್ರಾ ಜಲಾಶಯಕ್ಕೆ ಮೊದಲ ಸ್ಥಾನ. ಕರ್ನಾಟಕ ಮತ್ತು ಆಂಧ್ರ­­ಪ್ರದೇಶದ ಅಂದಾಜು 12 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಉದ್ದೇಶದಿಂದ ನಿರ್ಮಿಸಲಾ­ಗಿ­ರುವ ಈ ಜಲಾಶಯದಲ್ಲಿ ಬರೋಬ್ಬರಿ 31.616 ಟಿಎಂಸಿ ಅಡಿ ಹೂಳಿದೆ. 1953ರಲ್ಲಿ  ಬಳಕೆಗೆ ಮುಕ್ತವಾದಾಗ 133 ಟಿಎಂಸಿ ಅಡಿಗಳಷ್ಟು ನೀರನ್ನು ಸಂಗ್ರ­ಹಿಸುವ ಸಾಮರ್ಥ್ಯ ಹೊಂದಿದ್ದ ಈ ಜಲಾಶಯದಲ್ಲಿ ಈಗ ಕೇವಲ 100.855 ಟಿಎಂಸಿ ಅಡಿ ನೀರು ಸಂಗ್ರಹ­ವಾಗುತ್ತಿದೆಯಷ್ಟೇ.ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯ­ಣ­­ಪುರ ಜಲಾ­ಶಯ­ದಲ್ಲಿ 10 ಟಿಎಂಸಿ ಅಡಿಗಳಷ್ಟು ಕೆಸರು ಮಣ್ಣು ತುಂಬಿದೆ. ಸದ್ಯ ಇದರ ನೀರಿನ ಸಂಗ್ರಹ ಸಾಮರ್ಥ್ಯ 32.313 ಟಿಎಂಸಿ ಅಡಿ.ಕೃಷ್ಣೆಯ ಮಡಿಲಲ್ಲೂ: ಉತ್ತರ ಕರ್ನಾ­ಟಕ ಜನರ ಜೀವನಾಡಿ­ಯಾ­­ಗಿ­­ರುವ ಆಲಮಟ್ಟಿ ಜಲಾಶಯವೂ ಈ ಸಮಸ್ಯೆ­ಯಿಂದ ಹೊರ­ತಾಗಿಲ್ಲ. 123.081 ಟಿಎಂಸಿ ಅಡಿಗಳಷ್ಟು ನೀರನ್ನು ಹಿ­ಡಿ­ದಿ­ಡುವ ತಾಕತ್ತಿರುವ ಈ ಜಲಾಶಯದ ತಳದಲ್ಲಿ 5 ಟಿಎಂಸಿ ಅಡಿ­ಗಳಷ್ಟು ಹೂಳು ಕೂತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂಬ ಆತಂಕ ಈ ಭಾಗದ ಜನ­ರದ್ದು. 49.5 ಟಿಎಂಸಿ ನೀರು ಅಡಿಯಷ್ಟು ನೀರನ್ನು ಸಂಗ್ರ­ಹಿ­ಸಿ­­­ಟ್ಟು­­ಕೊಳ್ಳುವ ಮಂಡ್ಯ ಜಿಲ್ಲೆಯ ಕೃಷ್ಣ­ರಾಜ ಸಾಗರ ಜಲಾಶಯದಲ್ಲೂ ಮೂರು ಟಿಎಂಸಿ ಅಡಿ ಹೂಳಿದೆ.ಹೂಳು ತೆರವು ಸವಾಲು: ಜಲಾಶಯ­ಗ­ಳಲ್ಲಿ ತುಂಬಿರುವ ಹೂಳನ್ನು ತೆಗೆಯು­ವುದು ಬಹು ದೊಡ್ಡ ಸವಾಲು. ತುಂಗ­ಭದ್ರಾ ಜಲಾಶಯದಲ್ಲಿ ಶೇಖರವಾಗಿ­ರುವ ಭಾರಿ ಪ್ರಮಾಣದ ಹೂಳನ್ನು ತೆಗೆ­ಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷ­ಗ­ಳಿಂದ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಅಧ್ಯಯನವನ್ನೂ ನಡೆಸಿದೆ. ಕೆಲವು ಖಾಸಗಿ ಕಂಪೆನಿಗಳ ಸಹಕಾರ­ವನ್ನು ಈ ಹಿಂದೆ ಕೇಳಿತ್ತು. ಆದರೆ, ಪ್ರಾಯೋ­ಗಿಕವಾಗಿ ಇದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತ­ಪಡಿ­ಸಿದ್ದಾರೆ. ಅದೇ ಕಾರಣಕ್ಕೆ ಯಾವ ಕಂಪೆನಿಗಳೂ ಮುಂದೆ ಬರುತ್ತಿಲ್ಲ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.ಆದರೂ, ರಾಜ್ಯ ಸರ್ಕಾರ ಈ ಯೋಚನೆ ಕೈ ಬಿಟ್ಟಿಲ್ಲ. ಜಲಾ­ಶಯದ ಸಂಗ್ರಹಣಾ ಸಮಾರ್ಥ್ಯವನ್ನು ಮರು­ಸ್ಥಾಪಿ­­­ಸಲು ಪರ್ಯಾಯ ತಾಂತ್ರಿಕ ಪರಿ­ಹಾರ­ಗಳನ್ನು ಒದಗಿಸಲು ಮತ್ತು ಪರ್ಯಾಯ ಪ್ರಸ್ತಾವನೆಗಳ ವಿವರ­ವಾದ ಯೋಜನಾ ವರದಿಯನ್ನು ತಯಾ­­ರಿ­ಸಲು ಜಾಗತಿಕ ಮಟ್ಟದ ಕಂಪನಿಗಳಿಗೆ ಆಹ್ವಾನಿಸಲಾಗಿದೆ  ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಈ ವಿಷ­ಯದ ಬಗ್ಗೆ ಮಾತನಾಡಿದ್ದ ಅವರು, ಒಂದು ವೇಳೆ ತುಂಗಭದ್ರಾ ಜಲಾಶಯ­ದಿಂದ ಹೂಳನ್ನು ತೆಗೆದರೆ ಅದನ್ನು ಹಾಕಲು 60 ಸಾವಿರ ಎಕರೆ ಜಮೀನು ಬೇಕು ಎಂದು ಹೇಳಿದ್ದರು.ಪರ್ಯಾಯ ಮಾರ್ಗ ಅಗತ್ಯ: ಜಲಾ­ಶ­ಯ­­ಗಳಲ್ಲಿ ಹೂಳು ತುಂಬು­ವುದು ಸಹಜ. ಸಣ್ಣ ಪ್ರಮಾಣದಲ್ಲಿ ಹೂಳಿದ್ದರೆ ತೆರವುಗೊಳಿಸಬಹುದು. ಆದರೆ, ಭಾರಿ ಪ್ರಮಾಣದಲ್ಲಿದ್ದರೆ ಅದಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡ­ಬೇಕಾ­ಗು­ತ್ತದೆ. ಜೊತೆಗೆ ಹೂಳು ಹಾಕಲು ನೂರಾರು ಎಕರೆ ಜಮೀನೂ ಬೇಕಾ­ಗು­ತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಖರ್ಚು ಮಾಡುವ ವೆಚ್ಚದಲ್ಲಿ ಹೊಸ ಅಣೆಕಟ್ಟೆಯನ್ನೇ ನಿರ್ಮಿಸ­-ಬಹುದು ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.ಹಾಗಾಗಿ, ಹೂಳಿನ ಕಾರಣದಿಂದಾಗಿ ಜಲಾಶಯದಿಂದ ಹೋಗುವ ನೀರನ್ನು ಸಂಗ್ರಹಿಸಲು ಸಣ್ಣ ಅಣೆಕಟ್ಟೆ­ಗಳನ್ನು ನಿರ್ಮಿ­ಸು­ವುದು, ಜಲಾಶಯ­ದಲ್ಲಿ ಹೂಳು ತುಂಬುವಿಕೆಯನ್ನು ತಡೆ­ಯುವ ನಿಟ್ಟಿನಲ್ಲಿ ನದಿ ಪಾತ್ರದಲ್ಲಿ ಗಿಡ­ಗ­ಳನ್ನು ನೆಡುವುದು (ಇದ­ರಿಂದ ಮಣ್ಣಿನ ಸವೆತ ಅಥವಾ ಕೊರೆತ ನಿಯಂತ್ರಿಸ­ಬಹುದು) ಸೇರಿದಂತೆ ಇತರ ಪರ್ಯಾಯ ಮಾರ್ಗಗಳತ್ತ ಸರ್ಕಾರ ಚಿಂತಿಸುವ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry