ಭಾನುವಾರ, ಮೇ 31, 2020
27 °C

ಜಲ್ಲಿಕಟ್ಟು ಸ್ಪರ್ಧೆ: 32 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಮದುರೆಯಲ್ಲಿರುವ ಪಲಮೇಡುವಿನಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ‘ಜಲ್ಲಿಕಟ್ಟು’       (ಗೂಳಿ ಹಿಡಿಯುವ) ಸ್ಪರ್ಧೆ ವೇಳೆ ಸುಮಾರು 32 ಮಂದಿ ಗಾಯ ಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಸುಪ್ರೀಂ ಕೋರ್ಟ್‌ನ ಆದೇಶದಂತೆ ಸ್ಪರ್ಧೆಗೆ ಮುನ್ನ ಗೂಳಿಗಳ ಆರೋಗ್ಯ ತಪಾಸಣೆ ಮಾಡಿ, ಅವುಗಳಿಗೆ ಮತ್ತು ಬರಿಸುವ ಯಾವುದೇ ಪದಾರ್ಥ ಅಥವಾ ಮದ್ಯ ನೀಡಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿತ್ತು. ಆದರೂ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಸಹ ಸ್ಪರ್ಧೆಗೆ ಮುನ್ನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸ್ಪರ್ಧೆಯಲ್ಲಿ  ವಿಶೇಷವಾಗಿ ಪಳಗಿಸಿರುವ 573 ಗೂಳಿಗಳಿದ್ದು, 600 ಯುವಕರು ಅದನ್ನು ಹಿಡಿಯುವ ಸಾಹಸದಲ್ಲಿ ಭಾಗವಹಿಸಿದ್ದರು. ದೇಶ ವಿದೇಶಗಳ ನೂರಾರು ಪ್ರವಾಸಿಗರು ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸಿದ್ದರು. ವಿಜೇತರಿಗೆ ಬೈಸಿಕಲ್‌ಗಳನ್ನು ಬಹುಮಾನವಾಗಿ ನೀಡಲಾಯಿತು.

ಈ ಸ್ಪರ್ಧೆಯಿಂದ ಇಂತಹ ಅನಾಹುತಗಳು ಪದೇ ಪದೇ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಪ್ರತಿ ಸ್ಪರ್ಧೆಗೂ ಮುನ್ನ ಗೂಳಿಯ ಪ್ರಾಯೋಜಕರು ಅದಕ್ಕೆ ಮತ್ತು ಬರಿಸುವ ಔಷಧಿ ನೀಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು. ಆನಂತರವೇ ಅದನ್ನು ಸ್ಪರ್ಧೆಗೆ ಬಿಡಬೇಕು ಎಂದು ಅದು ನಿರ್ದೇಶಿಸಿದೆ.

 ಪೊಂಗಲ್ ಹಬ್ಬದ ಸಂದರ್ಭದಲ್ಲಿ ಪಳಗಿಸಿದ ಗೂಳಿಗಳನ್ನು ಮೈದಾನದಲ್ಲಿ ಬೆಂಕಿ ಹಚ್ಚಿ ಓಡಿಸಲಾಗುತ್ತದೆ. ಓಡುವ ಗೂಳಿಗಳನ್ನು ಯುವಕರು ತಡೆದು ಹಿಡಿಯುವುದೇ ‘ಜಲ್ಲಿಕಟ್ಟು’ ಸ್ಪರ್ಧೆ. ಇಲ್ಲಿನ ಅತ್ಯಂತ ದೊಡ್ಡ ‘ಜಲ್ಲಿಕಟ್ಟು’ ಅಲಂಗನಲ್ಲೂರಿನಲ್ಲಿ  ಸೋಮವಾರ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.