ಬುಧವಾರ, ಜೂನ್ 23, 2021
30 °C

ಜಲ್ಲಿ ಕ್ವಾರಿಗೆ ಸ್ಥಳೀಯರ ಆಕ್ಷೇಪ

ಪ್ರಜಾವಾಣಿ ವಾರ್ತೆ/ಮೋಹನ್ ಕೆ. ಶ್ರೀಯಾನ್ Updated:

ಅಕ್ಷರ ಗಾತ್ರ : | |

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್-ಮೊಡಂಕಾಪು ರಸ್ತೆ ನಡುವಿನ ಪಲ್ಲಮಜಲು-ಕಲ್ಲಗುಡ್ಡೆ ಎಂಬಲ್ಲಿ ಕಳೆದ ಆರು ವರ್ಷಗಳ ಹಿಂದೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಜಲ್ಲಿ ಕ್ವಾರಿ ಮತ್ತೆ ಆರಂಭಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇಲ್ಲಿನ ಐದು ಕಡೆಗಳಲ್ಲಿ ಕಳೆದ 2002ರಲ್ಲಿ ಆರಂಭಗೊಂಡಿದ್ದ ಜಲ್ಲಿ ಕ್ವಾರಿಗಾಗಿ ಬಂಡೆಗಳನ್ನು ಸಿಡಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿದ್ದು, ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2006ರಲ್ಲಿ ಕ್ವಾರಿ ಸ್ಥಗಿತಗೊಂಡಿತ್ತು. ಕೇವಲ ಒಂದು ಕಡೆಗೆ ಪರವಾನಗಿ ಪಡೆದು ಏಕಕಾಲದಲ್ಲಿ ನಾಲ್ಕೈದು ಕಡೆಗಳಲ್ಲಿ ಅಕ್ರಮವಾಗಿ ಜಲ್ಲಿ ಕ್ವಾರಿ ನಡೆಸಲಾಗುತ್ತಿತ್ತು ಎಂಬುದು ಸ್ಥಳೀಯರ ಆರೋಪವಾಗಿತ್ತು.ಇದೀಗ ಮತ್ತೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸ್ಥಳೀಯ ನಿವಾಸಿಗಳಾದ ಬಾಬು ಪೂಜಾರಿ, ಸಂಜೀವ ಶೆಟ್ಟಿ, ಲೋಲಾಕ್ಷಿ ಮೂಲ್ಯ, ಹರೀಶ ಬಂಗೇರ, ಲಲಿತಾ ಸಪಲ್ಯ, ಚಂದ್ರಹಾಸ ಪಲ್ಲಮಜಲು, ಸಂತೋಷ್, ಶ್ರೀನಿವಾಸದಾಸ್, ರಮೇಶ ಪೂಜಾರಿ ಎಂಬವರ ಮನೆಗೆ ಹಾನಿಯಾಗಿದೆ. ಮಾತ್ರವಲ್ಲದೆ ಇಲ್ಲಿನ ರಸ್ತೆ ಹದಗೆಟ್ಟು ಹೋಗಿದ್ದು, ಜಲ್ಲಿ ಕ್ವಾರಿಯಿಂದ ಉಂಟಾಗುವ ದೂಳು ಎಲ್ಲೆಡೆ ಪಸರಿಸಿ ಸ್ಥಳೀಯರ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.ಇದಕ್ಕಾಗಿ ಮಾಹಿತಿ ಹಕ್ಕಿನಡಿ ಎಲ್ಲಾ ದಾಖಲೆಗಳನ್ನು ತರಿಸಿ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿರುವ ಸ್ಥಳೀಯರು, ನಗರ ಪೊಲೀಸರಿಂದ ಒಪ್ಪಿಗೆ ಪಡೆದು ಈಗಾಗಲೇ ಪ್ರತಿಭಟನೆಯನ್ನೂ ನಡೆಸಿದ್ದಾರೆ.ಈ ನಡುವೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 50ಕ್ಕೂ ಅಧಿಕ ಮಂದಿ ಸ್ಥಳೀಯರ ಪೈಕಿ ಕೆಲವರಿಗೆ ತಂಡವೊಂದು ಜೀವ ಬೆದರಿಕೆ ಒಡ್ಡಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಇನ್ನೊಂದೆಡೆ ಈ ಜಲ್ಲಿ ಕ್ವಾರಿ ಉದ್ಯಮದಿಂದ ಕೆಲವರು `ಮಾಮೂಲಿ~ ಬಯಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

 

ಒಟ್ಟಿನಲ್ಲಿ ಜಿಲ್ಲಾಧಿಕಾರಿ ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪಾರದರ್ಶಕ ಪರಿಶೀಲನೆ ನಡೆಸಿ ಸತ್ಯಾಸತ್ಯತೆ ಕಂಡುಕೊಳ್ಳುವ ಅಗತ್ಯ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.