ಶುಕ್ರವಾರ, ಜೂಲೈ 3, 2020
21 °C

ಜಲ ಕ್ಷಾಮಕ್ಕೆ ಮಳೆ ನೀರು ಸಂಗ್ರಹವೇ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲ ಕ್ಷಾಮಕ್ಕೆ ಮಳೆ ನೀರು ಸಂಗ್ರಹವೇ ಪರಿಹಾರ

ದೊಡ್ಡಬಳ್ಳಾಪುರ: ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಟ ಆರಂಭವಾಗುತ್ತಿದ್ದಂತೆ  ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ  ಭರವಸೆ ಮಾತುಗಳು ಕೇಳಿ ಬರುತ್ತವೆ.ಮುಂಗಾರಿನಲ್ಲಿ ಒಂದಷ್ಟು ಮಳೆ ಸುರಿಯುತ್ತಿದ್ದಂತೆ, ಆ ಮಳೆ ನೀರಿನ ಜೊತೆಯೇ ಭರವಸೆಗಳು ಮರೆತು ಹೋಗುತ್ತವೆ. ಉಳಿಯುವುದು ಕುಡಿಯುವ ನೀರಿನ ಸಮಸ್ಯೆ ಮಾತ್ರ.

ದೊಡ್ಡಬಳ್ಳಾಪುರದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚುತ್ತಲೇ ಇದೆ. ನಗರದಲ್ಲಿ ಒಂದು ಬಿಂದಿಗೆ ನೀರಿನ ಬೆಲೆ 1.50 ರೂಪಾಯಿಯಿಂದ 2.00 ರೂಪಾಯಿಗೆ ಏರಿದೆ. ಮುಂದಿನ ದಿನಗಳಲ್ಲಿ  ಹಣ ನೀಡಿದರೂ ಕುಡಿಯುವ ನೀರು ದೊರೆಯುವುದು ಕಷ್ಟವಾಗುವ ಸಾಧ್ಯತೆ ಇದೆ.

 

ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ  ಬೇಸಿಗೆ ಸಮಯದಲ್ಲಿ ಕೊಳವೆಬಾವಿಗಳು ಬತ್ತಿ ಹೋಗುತ್ತವೆ. ಜೊತೆಗೆ ವಿದ್ಯುತ್ ಕೈಕೊಡುತ್ತದೆ. ಇದರಿಂದಾಗಿ ಗ್ರಾಮದ ಪಕ್ಕದ ತೋಟಗಳಿಂದ ಮಹಿಳೆಯರು ತಲೆ ಮೇಲೆ ನೀರು ಹೊತ್ತು ತರುತ್ತಾರೆ. ಹೀಗಿದ್ದರೂ ನೀರು ಖರೀದಿಸಿ ಕುಡಿಯುವಂತಹ ಸ್ಥಿತಿ ಇನ್ನೂ ಬಂದಿಲ್ಲ. ಆದರೆ ನಗರದಲ್ಲಿ ಶೇ.90ಕ್ಕೂ ಹೆಚ್ಚು ಮಂದಿ ಕುಡಿಯುವ ನೀರು ಸೇರಿದಂತೆ ಇತರೆ ಬಳಕೆಗಾಗಿ ಖಾಸಗಿ ನೀರಿನ ಟ್ಯಾಂಕರ್‌ಗಳವರನ್ನೇ ಅವಲಂಬಿಸಿದ್ದಾರೆ. ಉಳಿದ ಶೇ.10ರಷ್ಟು ಭಾಗದವರಿಗೆ ಮಾತ್ರ ನಗರಸಭೆಯವರು ಕೊಳವೆ ಬಾವಿಗಳ ಮೂಲಕ ನೀರು ಪೂರೈಸುತ್ತಾರೆ.

 

2010ರ ನವೆಂಬರ್ ತಿಂಗಳ ಕೊನೆಯಿಂದಲೂ ತಾಲ್ಲೂಕಿನಲ್ಲಿ ಮಳೆಯಾಗದ ಕಾರಣ ಬರ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರದವರು ಕುಡಿಯುವ ನೀರಿಗಾಗಿ ಸಂಪೂರ್ಣ ಖಾಸಗಿ ಟ್ಯಾಂಕರ್‌ಗಳನ್ನೇ ಅವಲಂಬಿಸುವಂತಾಗಿದೆ.ನೀರಿನ ಬಳಕೆ ಸ್ಥಿತಿ: ಪ್ರಸ್ತುತ ನಗರದಲ್ಲಿ ವಾರ್ಷಿಕ ಕುಡಿಯುವ ನೀರಿನ ಮಾರಾಟದ ವಹಿವಾಟು  ಸುಮಾರು 1.95 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ನಗರದಲ್ಲಿ  ಒಟ್ಟು 16 ಸಾವಿರ ಕುಟುಂಬಗಳಿವೆ. ಶೇ.90ರಷ್ಟು ಜನ ಕುಡಿಯುವ ನೀರನ್ನು ಖಾಸಗಿ ಟ್ಯಾಂಕರ್‌ಗಳವರಿಂದಲೇ ಕೊಳ್ಳುತ್ತಾರೆ.

 

ನಗರಸಭೆಯವರು ಕೊಳಾಯಿಗಳ ಮೂಲಕ ಸರಬರಾಜು ಮಾಡುವ ಬಹುತೇಕ ನೀರು ಉಪ್ಪಿನಿಂದ ಕೂಡಿದೆ. ಜೊತೆಗೆ ಕಡಿಮೆ ನೀರು ಸರಬರಾಜಾಗುತ್ತಿದೆ. ಪ್ರತಿದಿನ ಒಂದು ಕುಟುಂಬ ಕುಡಿಯುವ ನೀರಿಗಾಗಿ 45 ಲೀಟರ್ ನೀರು ಖರೀದಿಸಿದರೂ ನಗರಕ್ಕೆ ದಿನವೊಂದಕ್ಕೆ ಸರಾಸರಿ 8.50 ಲಕ್ಷ ಲೀಟರ್ ನೀರಿನ ಅಗತ್ಯವಿದೆ !ಕುಡಿಯುವ ನೀರಿನ ಬಳಕೆಯನ್ನು ಹೊರತು ಪಡಿಸಿದರೆ ನಗರದಲ್ಲಿ ಪ್ರಸ್ತುತ ದಿನವೊಂದಕ್ಕೆ 6.70 ಲಕ್ಷ ಲೀಟರ್ ನೀರು ವೆಚ್ಚ ಮಾಡುವ ಉದ್ದಿಮೆಗಳಿವೆ.

 

ಅವುಗಳಲ್ಲಿ 45 ರೇಷ್ಮೆ ಬಣ್ಣ ಮಾಡುವ ಘಟಕಗಳು,  110 ಬೇಕರಿ, ಸಣ್ಣ ಹೊಟೇಲ್‌ಗಳು, 6 ಐಸ್ ತಯಾರಿಕಾ ಘಟಕಗಳು, 114 ಬೈಕ್ ಸರ್ವೀಸ್‌ಗಳು , 30 ಕ್ಲಿನಿಕ್, ಖಾಸಗಿ ಆಸ್ಪತ್ರೆಗಳು ,90  ಟೀ ಅಂಗಡಿಗಳು, 10 ಲಾಡ್ಜ್‌ಗಳು ,18 ಬಾರ್ ,  15 ಲಾಂಡ್ರಿಗಳು, 20 ಕಲ್ಯಾಣ ಮಂದಿರಗಳು. ಈ ಎಲ್ಲಾ ನೀರಿನ ಬಳಕೆ ಖಾಸಗಿ ಟ್ಯಾಂಕರ್‌ಗಳಿಂದಲೇ ಸರಬರಾಜು ಆಗಬೇಕಾಗಿದೆ.ಜಕ್ಕಲಮಡಗು ಯೋಜನೆ ಏನಾಗಿದೆ?: 1ಲಕ್ಷ ಕ್ಕೂ ಮೀರಿ ಜನ ಸಂಖ್ಯೆ ಇರುವ ದೊಡ್ಡಬಳ್ಳಾಪುರ ನಗರಕ್ಕೆ ಸದ್ಯಕ್ಕೆ ಕುಡಿಯುವ ನೀರಿನ ಮೂಲ ಅರಳುಮಲ್ಲಿಗೆ, ಪಾಲನಜೋಗಿಹಳ್ಳಿ ಕೆರೆ, ನಂದಿ ಮೋರಿ, ಮುತ್ತೂರು ಸೇರಿದಂತೆ ನಗರದ ಹೊರವಲಯದಲ್ಲಿ ಕೊರೆಸಲಾಗಿರುವ 85 ಕೊಳವೆಬಾವಿಗಳು. ನಿರಂತರ ವಿದ್ಯುತ್ ಪೂರೈಕೆಯಿದ್ದರೆ ಮಾತ್ರ ನಗರಕ್ಕೆ ವಾರಕ್ಕೆ ಒಮ್ಮೆಯಾದರೂ ನೀರು ಸಬರಾಜು ಮಾಡು ಸಾಧ್ಯ ಎನ್ನುತ್ತಾರೆ ನಗರ ಸಭೆ ಅಧಿಕಾರಿಗಳು.ಇಷ್ಟೊಂದು ನೀರಿನ ಬವಣೆಯನ್ನು ಎದುರಿಸುತ್ತಿರುವ ನಗರಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 22 ಕೋಟಿ ರೂಗಳ ವೆಚ್ಚದಲ್ಲಿ ಕೈಗೊಳ್ಳಲಾದ ಜಕ್ಕಲಮಡಗು ಯೋಜನೆ ಕಾಮಗಾರಿ ಆರಂಭವಾಗಿ ಏಳು ವರ್ಷ ಕಳೆದಿದೆ. ಇನ್ನು ಕೆಲಸ ಆಮೆಗತಿಯಲ್ಲೇ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಂಡರೂ ನಗರಕ್ಕೆ ವರ್ಷ ಪೂರ್ತಿ ಕುಡಿಯುವ ನೀರು ಸರಬರಾಜಾಗುವ ಭರವಸೆ ಇಲ್ಲ. ಕಾರಣ ಜಕ್ಕಲಮಡಗು ಕೆರೆಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಈಗಾಗಲೇ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಅಲ್ಲಿಗೆ ಸಾಕಾಗಿ ಉಳಿದ ನೀರು ಮಾತ್ರ ದೊಡ್ಡಬಳ್ಳಾಪುರಕ್ಕೆ ಹರಿಯಬೇಕು. ಈ ಎರಡು ನಗರಗಳಿಗೆ ಸಮನಾಗಿ ಹಂಚಿಕೆ ಆಗಬೇಕು ಎನ್ನುವ ನಿಯಮ ಇಲ್ಲ.‘2010ರ ಆಗಸ್ಟ್ 15ಕ್ಕೆ ಜಕ್ಕಲಮಡಗು ಕೆರೆಯಿಂದ ನಗರಕ್ಕೆ ನೀರು ಬರಲಿದೆ’ ಎನ್ನುವ ಶಾಸಕರ ಮಾತು ಸುಳ್ಳಾಗಿದೆ. ಜಕ್ಕಲಮಡಗು ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಗಮನಿಸಿದರೆ ನಗರಕ್ಕೆ ನೀರು ಬರಲು ಇನ್ನು ಒಂದು ವರ್ಷ ತಡವಾಗಬಹುದು ಅನ್ನಿಸುತ್ತಿದೆ.

 

ಪ್ರರ್ಯಾಯ ಏನು:  ಬೆಳೆಯುತ್ತಿರುವ ನಗರವನ್ನು ತಡೆಯಲು ಯಾರಿಂದಲೂ ಸಾಧ್ಯ ಇಲ್ಲ. ಆದರೆ ವೇಗವಾಗಿ ಬೆಳೆಯುತ್ತಿರುವ ನೀರಿನ ಬರವನ್ನು ನೀಗಿಸಲು ಕೇವಲ ಜಕ್ಕಲಮಡಗು ಕೆರೆಯನ್ನು ನಂಬಿಕುಳಿತರೆ ಸಾಲದು. ತಾಲ್ಲೂಕಿನ ತಿಪ್ಪೂರು, ಘಾಟಿ ಸುಬ್ರಮಣ್ಯ ಹಾಗೂ ಗುಂಡಮಗೆರೆ ಬೆಟ್ಟದ ಸಾಲಿನ ದೊಡ್ಡ ಹಳ್ಳಗಳ ಮೂಲಕ ವ್ಯರ್ತವಾಗಿ ಹರಿದು ಹೋಗುವ ಮಳೆ ನೀರನ್ನು ತಡೆದು, ನಗರಕ್ಕೆ ತರುವ ಕೆಲಸ ಆಗಬೇಕು. ಈ ಯೋಜನೆಗಳಿಗೆ ಈಗ ಚಾಲನೆ ದೊರೆತರೂ ಜಾರಿಗೆ ಬರಲು ವರ್ಷಗಳೇ ಬೇಕಾಗಬಹುದು. ಇದು ಭವಿಷ್ಯದ ಯೋಜನೆ. ತಕ್ಷಣಕ್ಕೆ ಇರುವ ಪರ್ಯಾಯ ವ್ಯವಸ್ಥೆ ಮಳೆ ನೀರು ಸಂಗ್ರಹ ಮಾತ್ರ.ನಗರದಲ್ಲಿ ಈಗಾಗಲೇ ಐದು ಖಾಸಗಿ ಶಾಲೆಗಳು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಮನೆಗಳಲ್ಲಿ ಸಂಪೂರ್ಣವಾಗಿ ಮಳೆ ನೀರು ಸಂಗ್ರಹಣೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂಥ ಮನೆಗಳಲ್ಲಿ ಬೇಸಿಗೆಯಲ್ಲೂ ನೀರಿನ ಕೊರತೆಯಿಲ್ಲ. ಅನುಕೂಲವಿರುವ ಎಲ್ಲರೂ ಮಳೆ ನೀರು ಸಂಗ್ರಹಣೆ ಮಾಡಿಕೊಳ್ಳುವುದೇ ನೀರಿನ ಬವಣೆ ನೀಗಿಸಿಕೊಳ್ಳಲು ಇರುವ ಏಕೈಕ ಮಾರ್ಗ ಎನ್ನುತ್ತಾರೆ ನಗರದ ಸ್ವರಾಜ್ ಸಂಸ್ಥೆ ಮಳೆ ನೀರು ಸಂಗ್ರಹಣೆ ಮಾರ್ಗದರ್ಶಕ ನಾರಾಯಣಸ್ವಾಮಿ.   ವಿಶ್ವ ಜಲದಿನದ ಹಿನ್ನೋಟ

1992ರಲ್ಲಿ ಬ್ರೆಜಿಲ್ ದೇಶದ ರಿಯೋ-ಡಿಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ನಿರ್ಮಲ ಜಲಮೂಲಗಳ ರಕ್ಷಣೆಗಾಗಿ ತೆಗೆದುಕೊಂಡ ನಿರ್ಣಯದಂತೆ 1993ರ ಮಾರ್ಚ್ 22 ರಿಂದ ಪ್ರತಿ ವರ್ಷವೂ ‘ವಿಶ್ವ ಜಲ ದಿನ’ ಆಚರಿಸಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ  ಲಯನ್ಸ್ ಕ್ಲಬ್ ಹಾಗೂ ದೊಡ್ಡಬಳ್ಳಾಪುರ ಅಭಿವೃದ್ದಿ ಸಮಿತಿ ಇರುವ ಸಂಯುಕ್ತ ಆಶ್ರಯ ದಲ್ಲಿ ಮಾ.22 ರಂದು ಬೆಳಿಗ್ಗೆ 11ಕ್ಕೆ ನಗರದ ಲಯನ್ಸ್ ಭವನದಲ್ಲಿ ವಿಶ್ವ ಜಲ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಭಿವೃದ್ದಿ ಸಮಿತಿ ಸಂಚಾಲಕ ಡಿ.ಆರ್. ನಟರಾಜ್ ತಿಳಿಸಿದ್ದಾರೆ.ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎನ್.ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ನಗರಸಭೆ ಪೌರಾಯುಕ್ತ ಎಸ್.ಪ್ರಭುದೇವ್, ನೀರಿನ ಹಕ್ಕಿಗಾಗಿ ಜನಾಂದೋಲನದ  ಸಾಮಾಜಿಕ ಕಾರ್ಯಕರ್ತ ಎಂ.ಆರ್.ಪ್ರಭಾಕಾರ್, ನಗರಸಭೆ ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ ಡಿ.ರಾಮೇಗೌಡ ಮುಂತಾದವರು ಭಾಗವಹಿಸಲಿದ್ದಾರೆ. ನಾಳೆ ಧರಣಿ

ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಡಾ.ಪರಮಶಿವಯ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ನಗರದ ತಾಲ್ಲೂಕು ಕಚೇರಿ ಮುಂದೆ ವಿಶ್ವ ಜಲ ದಿನಾಚರಣೆ ದಿನವಾದ ಮಾ.22 ರಂದು ಬೆಳಿಗ್ಗೆ 11ಕ್ಕೆ ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ  ಧರಣಿ ನಡೆಸಲಾಗುವುದು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ತಿಳಿಸಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.