ಜಲ ವಿದ್ಯುತ್ ಯೋಜನೆಗೆ ವಿರೋಧ

7

ಜಲ ವಿದ್ಯುತ್ ಯೋಜನೆಗೆ ವಿರೋಧ

Published:
Updated:

ಹಾಸನ: ಸಕಲೇಶಪುರ ತಾಲ್ಲೂಕು  ವ್ಯಾಪ್ತಿಯ ಪಶ್ಚಿಮ ಘಟ್ಟದಲ್ಲಿ ಕೈಗೆತ್ತಿ ಕೊಂಡಿರುವ ಕಿರು ಜಲ ವಿದ್ಯುತ್ ಯೋಜನೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಮಲೆನಾಡು ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.‘ಕಾಗಿನೆಲೆ ರಕ್ಷಿತಾರಣ್ಯದೊಳಗೆ ಮಾರುತಿ ಪವರ್ ಜನರೇಶನ್ ಸಂಸ್ಥೆಯವರು ಎರಡು ಕಿರು ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿ ಕೊಂಡಿದ್ದು, ಈ ಸಂಸ್ಥೆ ಕಾನೂನು ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್, ‘ಈ ಸಂಸ್ಥೆಗೆ 8.33 ಹೆಕ್ಟೇರ್ ಅರಣ್ಯ ನೀಡಲಾಗಿದೆ. ಆದರೆ ಇವರು 50 ಎಕರೆ ಕಾಡು ನಾಶ ಮಾಡಿದ್ದಾರೆ. ಸಂಸ್ಥೆಯವರು ಅನುಮತಿ ಪಡೆದ ಸ್ಥಳವನ್ನೇ ಬದಲಾವಣೆ ಮಾಡಿರುವ ಶಂಕೆ ಇದೆ. ಇಲ್ಲಿ ಸುರಂಗ ನಿರ್ಮಾಣಕ್ಕೆ ಸ್ಫೋಟಕ ಗಳನ್ನು ಬಳಸುತ್ತಿರುವುದರಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗಿವೆ. ಅವು ಪಕ್ಕದ ರೈತರ ಜಮೀನಿಗೆ ನುಗ್ಗುತ್ತಿವೆ. ಇಲ್ಲಿ ಅರಣ್ಯ ಕಾಯ್ದೆ ಪೂರ್ತಿಯಾಗಿ ಉಲ್ಲಂಘನೆಯಾಗುತ್ತಿದೆ’ ಎಂದರು.ಪರಿಸರ ವಾದಿ ಹೆಮ್ಮಿಗೆ ಮೋಹನ್‌ಮಾತನಾಡಿ, ‘ಇಂಥ ಯೋಜನೆಗಳ ಮೂಲಕ ನೈಸರ್ಗಿಕ ಅರಣ್ಯವನ್ನು ನಾಶಮಾಡುತ್ತಿರುವ ಸರ್ಕಾರ ಇನ್ನೊಂದೆಡೆ ಸಾವಿರಾರು ಕೋಟಿ ರೂ.ವಿನಿಯೋಗಿಸಿ ಹೊಸ ಅರಣ್ಯ ಬೆಳೆಸಲು ಯೋಜನೆ ರೂಪಿಸುತ್ತಿದೆ. ತೋಟಗಾರಿಕೆ, ಅರಣ್ಯ ಇಲಾಖೆಗಳಿಗೆ ಸೇರಿದ ಅಮೂಲ್ಯ ಆಸ್ತಿಯನ್ನು ಖಾಸಗಿಯವರಿಗೆ ನೀಡುವ ಸಂಚು ರೂಪಿಸುತ್ತಿದೆ. ಇದರಲ್ಲಿ ದೊಡ್ಡ ಮಾಫಿಯಾ ಇರುವ ಶಂಕೆ ಇದೆ. ಪಶ್ಚಿಮ ಘಟ್ಟದ ದಟ್ಟ ಅರಣ್ಯ ನಾಶವಾದರೆ ಆ ಅಪರಾಧದ ಪ್ರಮುಖ ಆರೋಪಿ ಸರ್ಕಾರವೇ ಆಗಿರುತ್ತದೆ’ ಎಂದರು.ಯಾವ ಕಾರಣಕ್ಕೂ ಅರಣ್ಯಗಳನ್ನು ಖಾಸಗಿಯವರಿಗೆ ಒಪ್ಪಿಸಲು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.ಬಿಜೆಪಿ ಮುಖಂಡ ಬಾಳ್ಳು ಗೋಪಾಲ್, ‘ರಾಜಕಾರಣಿಗಳು, ಅಧಿ ಕಾರಿಗಳ ಅವೈಜ್ಞಾನಿಕ ಯೋಜನೆಗಳಿಗೆ ಅಮೂಲ್ಯವಾದ ಅರಣ್ಯ ನಾಶ ವಾಗುತ್ತಿದೆ. ಈ ಭಾಗದ ಜನರು ಇದನ್ನು ಒಕ್ಕೊರಲಿನಿಂದ ವಿರೋಧಿ ಸಬೇಕು’ ಎಂದರು.ವಿವಿಧ ಸಂಘಟನೆಗಳ ಪ್ರತಿನಿಧಿ ಗಳಾದ ಚಾ.ನಾ. ಅಶೋಕ್, ಸುರೇಶ ಗುರೂಜಿ, ಮುಬಶೀರ್ ಅಹಮ್ಮದ್, ರೈತ ಸಂಘದ ಸಿದ್ದೇಗೌಡ, ರಕ್ಷಣಾ ವೇದಿಕೆಯ ಮನುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry