ಸೋಮವಾರ, ಅಕ್ಟೋಬರ್ 21, 2019
23 °C

ಜಲ ಸಾಹಸದ ಮುದ; ಸಿಂಗಾರಿ ಸೊಬಗು

Published:
Updated:

ಮಂಗಳೂರು: `ಜೆಟ್ ಸ್ಕೀಯಿಂಗ್~ನಲ್ಲಿ ಕುಳಿತವರು ನದಿಪಾಲಾಗುತ್ತೇವೆ ಎಂಬ ಭಯದಲ್ಲಿ ಇರುವಾಗಲೇ ರೊಯ್ ರೊಯ್ ಎಂದು ಸದ್ದು ಮಾಡುತ್ತಾ ನೇತ್ರಾವತಿಯಲ್ಲಿ ಮಾರು ದೂರ ಸಾಗಿಯಾಗಿತ್ತು. ನೇತ್ರಾವತಿಯ ನೀರಿನಲ್ಲಿ ಶರವೇಗದಿಂದ ಈ ದೋಣಿ ಸಾಗುವಾಗ ಕ್ಷಣ ಮಾತ್ರದಲ್ಲಿ ಆತಂಕ ಮಾಯ. ಬಳಿಕ ಸಂಭ್ರಮೋಲ್ಲಾಸ ಮುಗಿಲು ಮುಟ್ಟಿದ ಸ್ಥಿತಿ. ಪಯಣದ ಅವಧಿ ಮುಗಿದರೂ ದೋಣಿಯಿಂದ ಇಳಿಯಲು ಒಲ್ಲದ ಮನಸ್ಸು!ಜಪ್ಪಿನಮೊಗರು ಕಡೆಕಾರು ಗುರುವನ ಶ್ರೀದುರ್ಗಾ ಕ್ಷೇತ್ರದ ನೇತ್ರಾವತಿ ನದಿ ತೀರದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ನಾಲ್ಕು ದಿನಗಳಿಂದ ನಡೆಯುತ್ತಿರುವ ಜನಸಾಹಸ ಕ್ರೀಡೆಗಳ ರೋಮಾಂಚಕ ಕ್ಷಣಗಳಿವು.ಕಯಾಕಿಂಗ್, ಜೆಟ್ ಸ್ಕೀಯಿಂಗ್, ಬನಾನಾ ರೈಡ್‌ಗಳು ನೀಡುವ ಆನಂದ ಅಷ್ಟಿಷ್ಟಲ್ಲ. ನಾಲ್ಕು ದಿನಗಳ ಕಾಲ ಸಾರ್ವಜನಿಕರಿಗೆ ಜಲಸಾಹಸದ ಖುಷಿ ಆನಂದಿಸುವ ಅವಕಾಶ ಕಲ್ಪಿಸಲಾಗಿತ್ತು. ಗುರುವಾರದಿಂದ 16ರವರೆಗೆ ಯುವಜನೋತ್ಸವದ ಸ್ಪರ್ಧಿಗಳಿಗೆ ಮಾತ್ರ ಮೀಸಲಿಡಲಾಗಿದೆ. ಮೊದಲ ಮೂರು ದಿನ 120 ಮಂದಿ ಸಾರ್ವಜನಿಕರು ಪಾಲ್ಗೊಂಡರೆ, ಬುಧವಾರ ಒಂದೇ ದಿನ ಸಂಖ್ಯೆ 150 ದಾಟಿತ್ತು. ವಿದ್ಯಾರ್ಥಿಗಳ ಸಂಖ್ಯೆಯೇ ಶೇ. 50ರಷ್ಟಿತ್ತು. 300ಕ್ಕೂ ಅಧಿಕ ಮಂದಿ ಗಣ್ಯರು ಸಹ ಜಲಸಾಹಸದ ರೋಮಾಂಚನ ಅನುಭವಿಸಿದರು.~ಈ ಸಾಹಸ ಚಟುವಟಿಕೆಯಲ್ಲೇ ಪಾಲ್ಗೊಳ್ಳಲೆಂದೇ 22 ಮಂದಿಯ ತಂಡ ಬೆಂಗಳೂರಿನಿಂದ ಬಂದಿದ್ದೇವೆ. ಜಲ ಸಾಹಸ ಅತ್ಯದ್ಭುತ; ಮರೆಯಲಾಗದ್ದು~ ಎಂದು ಬೆಂಗಳೂರಿನ ಧನುಷ್ ಸಂತಸ ಹಂಚಿಕೊಂಡರು. ನಗರದಲ್ಲಿ ಇನ್ನೊಂದು ಭಾಗದ ಪಣಂಬೂರು ಕಡಲಕಿನಾರೆಯಲ್ಲಿ ಮಂಗಳವಾರದಿಂದ ಪ್ಯಾರಾ ಸೇಲಿಂಗ್ ಸಾಹಸ ಆರಂಭಗೊಂಡಿದೆ.ರಂಗು ನೀಡಿದ ~ಸಿಂಗಾರಿ~:

ನಗರದಲ್ಲಿ ಬಿಸಿಲೇರುತ್ತಿದ್ದಂತೆ ಟಿ.ಎಂ.ಎ.ಪೈ ಸಭಾಂಗಣದ ಮುಂಭಾಗದಲ್ಲಿ ಒಡಿಶಾದ ಸ್ಪರ್ಧಿಗಳು `ಸಿಂಗಾರಿ~ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು. ಮಧ್ಯಾಹ್ನ ಭೋಜನಕ್ಕೆ ತೆರಳಲು ಸಿದ್ಧರಾಗಿದ್ದವರೂ ಕ್ಷಣ ನಿಂತ ನೃತ್ಯದ ವೈಭವಕ್ಕೆ ಮನಸೋತರು. ಸುತ್ತ ನೆರೆದಿದ್ದ ಯುವ ಸಮೂಹ ~ಸಿಂಗಾರಿ~ಯಿಂದ ಸ್ಫೂರ್ತಿ ಪಡೆದು ಹೆಜ್ಜೆ ಹಾಕಲಾರಂಭಿಸಿತು. ಆರಂಭದಲ್ಲಿ ಇದ್ದುದು ಎಂಟು ನೃತ್ಯಗಾರರು. ಕ್ಷಣಾರ್ಧದಲ್ಲಿ ನರ್ತಿಸುವವರ ಸಂಖ್ಯೆ ಹೆಚ್ಚಿತು.

Post Comments (+)