ಮಂಗಳವಾರ, ಮೇ 18, 2021
30 °C

ಜಳಾಕ ಮಾಡಿದ ನೀರಾಗ ಬಟ್ಟಿ ಒಗಿತೇವ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ತಳ್ಳಳ್ಳಿ ಗ್ರಾಮದಿಂದ ಬೇರೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ವಿರೋಧಿಸಿ, ಗ್ರಾಮಸ್ಥರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.ತಾಲ್ಲೂಕು ಆಡಳಿತ ಶನಿವಾರ ಹೊಸ ಕೊಳವೆಬಾವಿ ಕೊರೆಸಿ ಗ್ರಾಮಕ್ಕೆ ನೀರು ಪೂರೈಕೆ ಮಾಡಿತ್ತು. ಆದರೆ ನೀರು ಸಮರ್ಪಕವಾಗಿ ಬರುತ್ತಿಲ್ಲ. ಗ್ರಾಮದ 8 ಗುಮ್ಮಿಗಳ ಪೈಕಿ, ಕೇವಲ 2 ನೀರಿನ ಗುಮ್ಮಿಗಳಿಗೆ ಮಾತ್ರ ನೀರು ಹರಿಸಲಾಗುತ್ತಿದೆ. ಇದರಿಂದ ಗ್ರಾಮದ ಜನರಿಗೆ ಈ ಕೊಳವೆಬಾವಿ ನೀರು ಪೂರೈಕೆ ಮಾಡಬೇಕು ಎಂದು ಜನ ಮನವಿ ಮಾಡಿದ್ದರು.ಮೊದಲೇ ನೀರು ಕಡಿಮೆ ಬೀಳುತ್ತಿದ್ದು, ಅಂಥದ್ದರಲ್ಲಿ ಟ್ಯಾಂಕರ್ ಮೂಲಕ ಇಲ್ಲಿಯ ನೀರನ್ನು ಬೇರೆ ಗ್ರಾಮಕ್ಕೆ ಸರಬರಾಜು ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು, ಟ್ಯಾಂಕರ್ ತಡೆದು ಪ್ರತಿಭಟನೆ ಮಾಡಿದರು. ಸ್ಥಳದಲ್ಲಿದ್ದ ಕಂದಾಯ ನಿರೀಕ್ಷ ಸೇತು ಮಾಧವ ಕುಲಕರ್ಣಿಗೆ ಘೇರಾವ ಹಾಕಿದರು.“ಇಷ್ಟ ದಿನ ನೀರ ಹೊತ್ತ ಸಾಕಾಗ್ಯೆದ್ರಿ. ಈಗ ಬೋರ ಹಾಕ್ಯರ. ಅದರಾಗ ಸ್ವಲ್ಪ ನೀರ ಬರತಾವ. ಅಂಥಾದ್ರಾಗ ಬ್ಯಾರೆ ಉರಿಗಿ ನೀರ ತಗೊಂಡ ಹೋದ್ರ ನಾವ ಏನ್ ಮಾಡಬೇಕು. ಜಳಕಾ ಮಾಡಿದ ನೀರ ಹಿಡದ ಬಟ್ಟಿ ಒಗದಿವ್ರಿ. ನಮ್ಮ ಕಸ್ಟ ನಮಗ ಗೊತ್ತು. ಊಟಾ ಕೇಳಿದ್ರ ಕೊಡತೀವಿ. ನೀರ ಕೊಡಂಗಿಲ್ಲ” ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಹಣಮವ್ವ ಹೇಳಿದರು.ಕರವೇ ಅಧ್ಯಕ್ಷ ದೇವಿಂದ್ರಪ್ಪ ಸಾತ್ಯಾಳ ಮಾತನಾಡಿ, ಈಗ ಕೊಳವೆ ಬಾವಿಯಲ್ಲಿರುವ ನೀರು ಗ್ರಾಮದ ಜನರಿಗೆ ಸರಿ ಹೋಗುತ್ತಿಲ್ಲ. ಹತ್ತು ನಿಮಿಷಕ್ಕೆ 4 ಕೊಡ ನೀರು ಬರುತ್ತಿವೆ. ಗ್ರಾಮಕ್ಕೆ ಕೇವಲ ಮೂರರಿಂದ ನಾಲ್ಕು ಗಂಟೆ ವಿದ್ಯುತ್ ಸರಬರಾಜು ಆಗುತ್ತಿದ್ದು, ಆ ಸಮಯದಲ್ಲಿ ಮಾತ್ರ ನೀರು ಬರುತ್ತದೆ.ಅದರಲ್ಲಿಯೇ ಎಲ್ಲರೂ ನೀರು ತುಂಬಿಕೊಳ್ಳಬೇಕು. ಪರಿಸ್ಥಿತಿ ಹೀಗಿರುವಾಗ ತಾಲ್ಲೂಕು ಅಧಿಕಾರಿಗಳು ಇನ್ನೊಂದು ಗ್ರಾಮಕ್ಕೆ ಇಲ್ಲಿಂದ ನೀರು ಸಾಗಿಸಿದರೆ ಹೇಗೆ ? ಪೊಲೀಸರನ್ನು ಕರೆಸಿ ನಮ್ಮನ್ನು ಅಂಜಿಸಬೇಕೆಂದಿದ್ದಾರೆ. ಇದು ಸರಿಯಲ್ಲ. ನೀರು ಕೊಡಬೇಕಾದ ಅಧಿಕಾರಿಗಳು ಈ ರೀತಿ ವರ್ತಿಸಬಾರದು.ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸಾಕಷ್ಟು ಹಣ ಇದೆ ಎಂದು ಹೇಳುವ ಅಧಿಕಾರಿಗಳು, ಗ್ರಾಮಗಳಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡಬೇಕು. ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾನಪ್ಪ ಸಾಹುಕಾರ ಮಾತನಾಡಿ, ಹೊಸ ಕೊಳವೆಬಾವಿ ಹಾಕಲಾಗಿದ್ದು, ಹಳೆಯ ಕೊಳವೆಬಾವಿಯೂ ಇದೆ. ಅದರಲ್ಲಿ ನೀರಿದ್ದರೂ, ಮೋಟರ್ ಹಾಳು ಬಿದ್ದಿದೆ. ಅದಕ್ಕೊಂದು ಕೈಪಂಪ್ ಅಳವಡಿಸಿದರೆ ಜನರಿಗೆ ಉಪಯುಕ್ತವಾಗುತ್ತದೆ ಎಂದು ಹೇಳಿದರು.ಸಿದ್ಧನಗೌಡ ದೇವೂರ, ಮುದಕಪ್ಪ, ಶಾಂತಮ್ಮ ಹೂಗಾರ, ರಾಮನಗೌಡ ಪಾಟೀಲ, ಬಸನಗೌಡ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯುತ್ ಸರಬರಾಜು ನಿಂತ ತಕ್ಷಣ, ಟ್ಯಾಂಕರ್ ಅನ್ನು ಬೇರೆಡೆಗೆ ಕಳುಹಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.